

ಬೆಳಗಾವಿ: ಕಾರ್ಮಿಕರಿಗೆ ಅವರ ಸಂಧ್ಯಾಕಾಲದಲ್ಲಿ ದುಡಿದು ತಮ್ಮನ್ನು ಪೋಷಿಸಿಕೊಳ್ಳಲು ಆರ್ಥಿಕ ಮೂಲಗಳು ಇರುವುದಿಲ್ಲ. ಹೀಗಾಗಿ, ಕಾರ್ಮಿಕರಿಗೆ ವೃದ್ಧಾಪ್ಯದ ಸಂದರ್ಭದಲ್ಲಿ ಸ್ವಯಂ ಸಾಮಾಜಿಕ ಭದ್ರತೆ ಕಲ್ಪಿಸಲು ಭಾರತ ಸರ್ಕಾರವು ಪ್ರಧಾನಮಂತ್ರಿ ‘ಶ್ರಮಯೋಗಿ ಮಾನ್ ಧನ್’ ಪಿಂಚಣಿ ಯೋಜನೆ ಜಾರಿಗೆ ತಂದಿದ್ದು, ಲಾಭ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹೇಳಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರಧಾನಮಂತ್ರಿ ‘ಶ್ರಮಯೋಗಿ ಮಾನ್ ಧನ್’ ಪಿಂಚಣಿ ಯೋಜನೆ ಸಭೆಯಲ್ಲಿ ಮಾತನಾಡಿ, ಈ ಯೋಜನೆಯು ದೇಶದ ಅಸಂಘಟಿತ ವಲಯ ಕಾರ್ಮಿಕರ ಪಿಂಚಣಿ ಯೋಜನೆಯಾಗಿದೆ. ಯೋಜನೆಗೆ ಒಳಪಡುವ ಕಾರ್ಮಿಕರು 18ರಿಂದ 40 ವರ್ಷ ವಯೋಮಿತಿಯಲ್ಲಿರಬೇಕು. ಮಾಸಿಕ ಆದಾಯ 15,000 ಅಥವಾ ಅದಕ್ಕಿಂತ ಕಡಿಮೆ ಇರಬೇಕು. ಸ್ವಯಂ ಉದ್ಯೋಗಿಗಳ ವಾರ್ಷಿಕ ವಹಿವಾಟು ಗರಿಷ್ಠ 1.5 ಕೋಟಿ ರೂ. ಒಳಗಿರಬೇಕು. ಆದಾಯ ತೆರಿಗೆ ಪಾವತಿಸುವವರಾಗಿರಬಾರದು ಎಂದರು.
ಯೋಜನೆಯಡಿ ವಂತಿಕೆದಾರರು ಮಾಹೆಯಾನ ಪಾವತಿಸಬೇಕಾದ ವಂತಿಕೆಯು ಅತ್ಯಂತ ಕಡಿಮೆ ಇದ್ದು, ಕನಿಷ್ಠ 55 ರೂ. ಹಾಗೂ ಗರಿಷ್ಠ 200 ರೂ. ಇರುತ್ತದೆ. ಕೇಂದ್ರ ಸರ್ಕಾರವು ವಂತಿಕೆದಾರರು ಮಾಹೆಯಾನ ಪಾವತಿಸುವ ವಂತಿಕೆಗೆ ಸಮನಾಂತರ ವಂತಿಕೆಯನ್ನು ಅವರವರ ಪಿಂಚಣಿ ಖಾತೆಗೆ ಪಾವತಿಸುತ್ತದೆ. 60 ವರ್ಷ ಪೂರ್ಣಗೊಂಡ ನಂತರ ವಂತಿಕೆದಾರರು ಅಂದರೆ ಪಲಾನುಭವಿಗಳು ತಿಂಗಳಿಗೆ 3000 ರೂ. ಮಾಸಿಕ ಪಿಂಚಣಿ ಪಡೆಯಲು ಅರ್ಹರಾಗಿರುತ್ತಾರೆ ಎಂದು ಮಾಹಿತಿ ನೀಡಿದರು.
ಯೋಜನೆಯ ಸೌಲಭ್ಯಗಳು: ಚಂದಾದಾರರು 10 ವಷರ್ದೊಳಗಾಗಿ ಯೋಜನೆಯಿಂದ ನಿರ್ಗಮಿಸಿದಲ್ಲಿ, ಅವರು ಪಾವತಿಸಿರುವ ವಂತಿಗೆಯನ್ನು ಮಾತ್ರ ಆ ಅವಧಿಗೆ ಉಳಿತಾಯ ಖಾತೆಗೆ ಪಾವತಿಸಲಾಗುವ ಬಡ್ಡಿಯೊಂದಿಗೆ ಹಿಂದಿರುಗಿಸಲಾಗುತ್ತದೆ. 10 ವರ್ಷ ಅಥವಾ ಅದಕ್ಕಿಂತ ಹೆಚ್ಚು ಅವಧಿಯ ನಂತರ ನಿರ್ಗಮಿಸಿದಲ್ಲಿ ಅವರು ಪಾವತಿಸಿದ ವಂತಿಕೆಯೊಂದಿಗೆ ಪಿಂಚಣಿ ಖಾತೆಗೆ ಜಮಾ ಆಗಿರುವ ಬಡ್ಡಿ ಅಥವಾ ಉಳಿತಾಯ ಖಾತೆಗೆ ಪಾವತಿಸಲಾಗುವ ಬಡ್ಡಿ ಇವುಗಳಲ್ಲಿ ಯಾವುದು ಹೆಚ್ಚೋ ಅದನ್ನು ಪಾವತಿಸಲಾಗುವುದು. ಫಲಾನುಭವಿಯು ನಿರಂತರವಾಗಿ ವಂತಿಕೆ ಪಾವತಿಸಿದ್ದು, ಅವರು 60 ವರ್ಷದ ಒಳಗೆ ಮೃತಪಟ್ಟಲ್ಲಿ ಅಥವಾ ಶಾಶ್ವತ ಅಂಗ ನ್ಯೂನತೆ ಹೊಂದಿದ್ದಲ್ಲಿ ಅಥವಾ ವಂತಿಕೆ ಪಾವತಿಸಲು ಸಾಧ್ಯವಾಗದಿದ್ದಲ್ಲಿ ಅವನ/ಅವಳ ಪತಿ/ಪತ್ನಿ ನಂತರ ಈ ಯೋಜನೆಗೆ ಸೇರಿ, ವಂತಿಕೆ ಪಾವತಿಸಿ ಮುಂದುವರಿಸಬಹುದು ಅಥವಾ ಅವರ ವಂತಿಕೆಯನ್ನು ಬಡ್ಡಿಯೊಂದಿಗೆ ಪಡೆಯಲು ಅರ್ಹರಾಗಿರುತ್ತಾರೆ. ಪಿಂಚಣಿ ಆರಂಭಗೊಂಡ ನಂತರ ಚಂದಾದಾರರು ಮೃತಪಟ್ಟಲ್ಲಿ, ಅವರ ಪತ್ನಿ/ಪತಿ ಮಾತ್ರ ಪಿಂಚಣಿಯ ಶೇ.50 ಪಿಂಚಣಿ ಪಡೆಯಲು ಅರ್ಹರಾಗಿರುತ್ತಾರೆ. ಯೋಜನೆಯು ವಿದ್ಯುನ್ಮಾನ ಆಧಾರಿತವಾಗಿದ್ದು ಎಸ್‌ಎಂಎಸ್ ಮೂಲಕ ಎಲ್ಲ ವ್ಯವಹಾರಗಳ ಮಾಹಿತಿಯನ್ನು ಫಲಾನುಭವಿಗೆ ಕಾಲ ಕಾಲಕ್ಕೆ ತಿಳಿಸಲಾಗುವುದು ಎಂದರು.
ನೋಂದಣಿ ವಿಧಾನ: ಅರ್ಹ ಅಸಂಘಟಿತ ಕಾರ್ಮಿಕರು ಹತ್ತಿರದ ಕಾಮನ್ ಸರ್ವೀಸ್ ಸೆಂಟರ್ (ಸಿಎಸ್‌ಸಿ)ಗಳಲ್ಲಿ ಯೋಜನೆಯಡಿ ಫಲಾನುಭವಿಗಳಾಗಿ ನೋಂದಾಯಿಸಬಹುದು. ಸಿಎಸ್‌ಸಿಗಳ ವಿವರಗಳನ್ನು ಹತ್ತಿರದ ಎಲ್‌ಐಸಿ ಶಾಖೆಗಳು, ಕಾರ್ಮಿಕ ಇಲಾಖೆ, ಕೇಂದ್ರ ಸರ್ಕಾರದ ಕಾರ್ಮಿಕ ಇಲಾಖೆ, ಇಎಸ್‌ಐ ಕಾರ್ಪೋರೇಷನ್ ಹಾಗೂ ಭವಿಷ್ಯನಿಧಿ ಸಂಘಟನೆಯ ಕಚೇರಿಗಳು ಹಾಗೂ ಇಲಾಖೆಯ ವೆಬ್‌ಸೈಟ್ ನಲ್ಲಿ ಪಡೆಯಬಹುದು. ಮಾಹಿತಿಗೆ ಟೋಲ್ ಫ್ರೀ ಕಾಲ್ ಸೆಂಟರ್ ಸಂಖ್ಯೆ- 1800-267-6888, ಎಲ್‌ಐಸಿ ವೆಬ್‌ಸೈಟ್ ಸಮೀಪದ ಸಿಎಸ್‌ಸಿ ಸೆಂಟರ್‌ಗಳಾದ ಹಾಗೂ ಮಾಹಿತಿಗಾಗಿ ಸಂಪರ್ಕಿಸಬಹುದು ಎಂದು ಡಿಸಿ ಹಿರೇಮಠ ಮಾಹಿತಿ ನೀಡಿದರು.
ಜಿಪಂ ಸಿಇಒ ದರ್ಶನ ಎಚ್.ವಿ., ಪಾಲಿಕೆ ಆಯುಕ್ತ ರುದ್ರೇಶ ಘಾಳಿ ಹಾಗೂ ಹಿರಿಯ ಕಾರ್ಮಿಕ ನಿರೀಕ್ಷಕರು, ಕೃಷಿ ಇಲಾಖೆಯ ಅಧಿಕಾರಿಗಳು ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.