ವೃದ್ಧನಿಗೆ ಕರೊನಾ ತಗುಲಿದ್ದು ಹೇಗೆ?

28-gdg-2c
Published on

ಗದಗ: ನಗರದ ಗಂಜಿ ಬಸವೇಶ್ವರ ವೃತ್ತದ ನಿವಾಸಿ 70 ವರ್ಷದ ವೃದ್ಧಗೆ (ಪಿ 514) ಕರೊನಾ ವೈರಸ್ ಸೋಂಕು ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಐದು ಪಾಸಿಟಿವ್ ಪ್ರಕರಣಗಳು ಪತ್ತೆಯಾದಂತಾಗಿ ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ.

ಒಂದರಿಂದ ನಾಲ್ಕು ಪ್ರಕರಣಗಳು ನಗರದ ರಂಗನವಾಡಿ ಗಲ್ಲಿಯಲ್ಲಿ ಪತ್ತೆಯಾದರೆ, ಐದನೇ ಪ್ರಕರಣ (ಪಿ 514) ನಗರದ ಗಂಜಿ ಬಸವೇಶ್ವರ ಓಣಿ ನಿವಾಸಿಯಾಗಿದ್ದಾರೆ. ಐದನೇ ಪ್ರಕರಣದ ಸೋಂಕಿತ 70 ವರ್ಷದ ಸರ್ಕಾರಿ ನಿವೃತ್ತ ನೌಕರರಾಗಿದ್ದು, ಆರೋಗ್ಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಇವರಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ. ಮನೆಯಲ್ಲಿರುವ ಇವರಿಗೆ ಸೋಂಕು ತಗುಲಿದೆ. ಇವರ ಮನೆಯಲ್ಲಿ 9 ಜನರಿದ್ದು, ಎಲ್ಲರ ವೈದ್ಯಕೀಯ ವರದಿ ನೆಗೆಟಿವ್ ಬಂದಿದೆ. ಜತೆಗೆ ಪಿ 514 ಪ್ರಕರಣದ ಪ್ರಥಮ ಸಂಪರ್ಕದಲ್ಲಿದ್ದ 24 ಜನರು ಮತ್ತು ದ್ವಿತೀಯ ಹಂತದ ಸಂಪರ್ಕದಲ್ಲಿದ್ದ 40 ಜನರ ಗಂಟಲ ದ್ರವದ ಮಾದರಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಕಳಿಸಲಾಗಿದ್ದು, ಇದರಲ್ಲಿ 13 ಜನರ ವರದಿ ನೆಗೆಟಿವ್ ಬಂದಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.

ಗದಗ ನಗರದ ರಂಗನವಾಡಿ ಗಲ್ಲಿಯ ಎರಡನೇ ಕೇಸ್ (ಪಿ-304) ಮೊದಲ ಪಾಸಿಟಿವ್ ಕೇಸ್ (ಪಿ-166) ಆಪ್ತರಾಗಿದ್ದರು. ಮೂರನೇ ಕೇಸ್ ವ್ಯಕ್ತಿ (ಪಿ-370) ಎರಡನೇ ಕೇಸ್ (ಪಿ-304) ದ್ವಿತೀಯ ಸಂಪರ್ಕದಲ್ಲಿದ್ದರು. ನಾಲ್ಕನೇ ಕೇಸ್ (ಪಿ 396) ಪುರುಷ ಮೂರನೇ ಕೇಸ್ (ಪಿ 370) ಪುರುಷನೊಂದಿಗೆ ದ್ವಿತೀಯ ಸಂಪರ್ಕದಲ್ಲಿದ್ದರು. ಐದನೇ ಕೇಸ್ ವ್ಯಕ್ತಿ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ. ಆದರೆ, ಅವರಿಗೆ ಸೋಂಕು ಹೇಗೆ ಬಂದಿತು ಎಂಬುದು ತಿಳಿದು ಬಂದಿಲ್ಲ.

ಮೊದಲ ಪಾಸಿಟಿವ್ ಕೇಸ್ ಏ. 6ರಂದು ದೃಢಪಟ್ಟಿತ್ತು. ಸೋಂಕಿತ ವೃದ್ಧೆ ಏ. 8ರಂದು ಮೃತರಾದರು. ಏ. 16ರಂದು ಎರಡನೇ ಪ್ರಕರಣ, 18ರಂದು ಮೂರನೇ , 20ರಂದು ನಾಲ್ಕನೇ ಹಾಗೂ 28ಕ್ಕೆ ಐದನೇ ಪ್ರಕರಣ ಪತ್ತೆಯಾಗಿದೆ. 22 ದಿನಗಳ ಅಂತರದಲ್ಲಿ ಜಿಲ್ಲೆಯಲ್ಲಿ ಐದು ಪಾಸಿಟಿವ್ ಕೇಸ್ ಪತ್ತೆಯಾಗಿದ್ದರಿಂದ ಜನರಲ್ಲಿ ಆತಂಕ ಮುಂದುವರಿದಿದೆ.

ಕಂಟೈನ್ಮೆಂಟ್ ಪ್ರದೇಶ: ಕರೊನಾ ವೈರಸ್ ಸೋಂಕಿತ ಪಿ 514 ರೋಗಿ ವಾಸಿಸುತ್ತಿದ್ದ ಗಂಜಿ ಬಸವೇಶ್ವರ ಓಣಿಯ ಸುತ್ತಮುತ್ತಲಿನ 500 ಮೀ. ವ್ಯಾಪಿಯನ್ನು ಕಂಟೈನ್ಮೆಂಟ್ ಪ್ರದೇಶ ಎಂದು ಜಿಲ್ಲಾಡಳಿತ ಘೊಷಿಸಿದ್ದು, ಅಗತ್ಯ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಿದೆ. ಗಂಜಿ ಬಸವೇಶ್ವರ ಓಣಿಗೆ ಸಂರ್ಪಸುವ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿ ವಾಹನ-ಜನ ಸಂಚಾರ ಬಂದ್ ಮಾಡಲಾಗಿದೆ. ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ಮನೆಮನೆಗೆ ಭೇಟಿ ನೀಡಿ ಜನರ ಆರೋಗ್ಯದ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ. ಮಂಗಳವಾರ ನಗರದ ಗಂಜಿ ಬಸವೇಶ್ವರ ಓಣಿಯ ನಿವಾಸಿಗೆ ಸೋಂಕು ದೃಢಪಟ್ಟ ಮೇಲೆ ಜಿಲ್ಲಾಡಳಿತ ಕಂಟೈನ್ಮೆಂಟ್ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ ಎನ್., ಜಿಪಂ ಸಿಇಒ ಡಾ. ಆನಂದ, ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಯೋಜನಾ ನಿರ್ದೇಶಕ ರುದ್ರೇಶ, ನಗರಸಭೆ ಪೌರಾಯುಕ್ತ ಮನ್ಸೂರ ಅಲಿ ಸೇರಿ ಅನೇಕ ಅಧಿಕಾರಿಗಳು ನಿಯಂತ್ರಿತ ಪ್ರದೇಶ ಗಂಜಿ ಬಸವೇಶ್ವರ ಓಣಿಗೆ ಭೇಟಿ ನೀಡಿದ್ದಲ್ಲದೆ, ಕಂಟೈನ್ಮೆಂಟ್ ಪ್ರದೇಶದಲ್ಲಿ ಜನರು ಯಾವುದೇ ಕಾರಣಕ್ಕೂ ಹೊರಗೆ ಬರದಂತೆ ಕ್ರಮಕೈಗೊಳ್ಳಬೇಕು ಎಂದು ಪೊಲೀಸರಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

80 ಜನರು ಮನೆಗೆ: ನಗರದ ರಂಗನವಾಡಿ ಗಲ್ಲಿ ಪ್ರದೇಶದಲ್ಲಿ ಮೊದಲ ಸೋಂಕಿತೆ 80 ವರ್ಷದ ಅಜ್ಜಿ (ಪಿ-166)ಯ ಸಂಪರ್ಕದಿಂದ ಕ್ವಾರಂಟೈನ್​ಗೆ ಒಳಗಾಗಿದ್ದ 80 ಜನರು 14 ದಿನಗಳ ನಂತರ ಮರಳಿ ಮನೆಗೆ ವಾಪಸ್ಸಾಗಿದ್ದಾರೆ. ಏ. 8ರಂದು ಹೃದಯಾಘಾತದಿಂದ ಆಸ್ಪತ್ರೆಯಲ್ಲಿ ಅಜ್ಜಿ ಮೃತಪಟ್ಟರು. ಹೀಗಾಗಿ ಆ ಪ್ರದೇಶವನ್ನು ಜಿಲ್ಲಾಡಳಿತ ಕಂಟೈನ್ಮೆಂಟ್ ಪ್ರದೇಶ ಎಂದು ಘೊಷಿಸಿತ್ತು. ಮೃತ ಅಜ್ಜಿಯ ದ್ವಿತೀಯ ಸಂರ್ಪತರೆಂದು 82 ಜನರನ್ನು ಗುರುತಿಸಿ ಸರ್ಕಾರಿ ಶಾಲೆಯಲ್ಲಿ ಕ್ವಾರಂಟೈನ್​ಗೆ ಒಳಪಡಿಸಿತ್ತು. ಅವರೆಲ್ಲರ ಗಂಟಲ ದ್ರವದ ಮಾದರಿ ನೆಗೆಟಿವ್ ಎಂದು ಬಂದಿತ್ತು. ಇದಾದ ಬಳಿಕ ಎಲ್ಲರನ್ನೂ 14 ದಿನ ಕ್ವಾರಂಟೈನ್​ಗೆ ಒಳಪಡಿಸಲಾಯಿತು. ಸೋಮವಾರದವರೆಗೆ 203 ಜನರು 28 ದಿನಗಳ ಅವಧಿ ಪೂರ್ಣಗೊಳಿಸಿದ್ದಾರೆ. ಸೋಂಕು ಕಂಡು ಬಂದ ಅಜ್ಜಿಯ ಸಂಪರ್ಕಕ್ಕೆ ಬಂದಿದ್ದ 82 ಜನರ ಸರ್ಕಾರಿ ಕ್ವಾರಂಟೈನ್ ಪೂರ್ಣಗೊಂಡಿದೆ. ಅಲ್ಲದೆ, ಇನ್ನೂ 14 ದಿನಗಳ ಕಾಲ ಅವರು ಹೋಂ ಕ್ವಾರಂಟೈನ್​ನಲ್ಲಿ ಇರುವುದು ಕಡ್ಡಾಯ. ಕಂಟೈನ್ಮೆಂಟ್ ಪ್ರದೇಶದಿಂದ ಜನರು ಒಳ ಬರುವುದು, ಹೊರಗೆ ಹೋಗುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಕೊಂಚ ಸಡಿಲಿಕೆ: ಆರೇಂಜ್ ವಲಯದಲ್ಲಿದ್ದ ಗದಗ ಜಿಲ್ಲೆಯು ಸರ್ಕಾರದ ಹೊಸ ನಿಯಮದ ಪ್ರಕಾರ ಹಳದಿ (1ರಿಂದ 5 ಸೋಂಕಿತರಿದ್ದರೆ) ಪಟ್ಟಿಯಲ್ಲಿ ಗುರುತಿಸಿಕೊಂಡಿದೆ. ಸೋಂಕು ಕಂಡ ಬಂದಿರುವ ನಗರದ ರಂಗನವಾಡಿ ಗಲ್ಲಿ ಹಾಗೂ ಗಂಜಿ ಬಸವೇಶ್ವರ ಓಣಿ ಪ್ರದೇಶದಲ್ಲಿ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದೆ. ಇದನ್ನು ಹೊರತುಪಡಿಸಿ ಉಳಿದೆಡೆ ಲಾಕ್​ಡೌನ್ ಕೊಂಚ ಸಡಿಲಿಕೆ ಮಾಡಿರುವ ವಾತಾವರಣವಿದೆ. ನಗರದ ನೋಂದಣಾಧಿಕಾರಿ ಕಚೇರಿಯೂ ಆರಂಭವಾಗಿದ್ದರಿಂದ ತಹಸೀಲ್ದಾರ್ ಕಚೇರಿ ಎದುರಿನ ಕೆಲ ಮಳಿಗೆಗಳು ತೆರೆದಿದ್ದು ಕಂಡು ಬಂದಿತು.

77 ಪ್ರಕರಣಗಳ ವೈದ್ಯಕೀಯ ವರದಿ ಬಾಕಿ: ಜಿಲ್ಲೆಯ ಕರೊನಾ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಮಂಗಳವಾರ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ. ಇದುವರೆಗೆ ಜಿಲ್ಲೆಯಲ್ಲಿ 1094 ಜನರು ನಿಗಾಕ್ಕೆ ಒಳಗಾಗಿದ್ದಾರೆ. 212 ಜನರು 28 ದಿನಗಳ ನಿಗಾ ಅವಧಿ ಪೂರೈಸಿದ್ದಾರೆ. 862 ಜನರನ್ನು ಮನೆಯಲ್ಲಿಯೇ ಪ್ರತ್ಯೇಕ ನಿಗಾದಲ್ಲಿ ಇರಿಸಲಾಗಿದೆ. ಒಟ್ಟು 1073 ಮಾದರಿಗಳನ್ನು ಪರೀಕ್ಷೆಗಾಗಿ ಸಂಗ್ರಹಿಸಲಾಗಿತ್ತು. ಇದರಲ್ಲಿ 939 ವರದಿಗಳು ನೆಗೆಟಿವ್ ಬಂದಿದ್ದು, ಉಳಿದ 77 ಪ್ರಕರಣಗಳ ವೈದ್ಯಕೀಯ ವರದಿ ಬರಬೇಕಿದೆ. 52 ಪ್ರಕರಣಗಳು ತಿರಸ್ಕೃತಗೊಂಡಿವೆ. ಜಿಲ್ಲೆಯಲ್ಲಿ ಐವರಿಗೆ ಸೋಂಕು ದೃಢಪಟ್ಟಿದೆ. ಪಿ 514 ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಹಂತದಲ್ಲಿದ್ದ 25 ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ 118 ಜನರನ್ನು ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net