ವೃಥಾ ಅಲೆದಾಟ ತಪ್ಪಿಸಲು ಖಾತಾ ಆಂದೋಲನ, ನೆಲಮಂಗಲ ಪೌರಾಯುಕ್ತ ಟಿ. ಮಂಜುನಾಥ್ ಹೇಳಿಕೆ

02 Nela Ph 4
Published on

ನೆಲಮಂಗಲ: ನಗರಸಭೆ ವ್ಯಾಪ್ತಿಯ ಸಾರ್ವಜನಿಕರ ಅನುಕೂಲಕ್ಕಾಗಿ ಖಾತಾ ಆಂದೋಲನ ಆಯೋಜಿಸಲಾಗಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಪೌರಾಯುಕ್ತ ಟಿ. ಮಂಜುನಾಥ್ ಮನವಿ ಮಾಡಿಕೊಂಡರು.

ನಗರಸಭೆ ಕಾರ್ಯಾಲಯದ ಆವರಣದಲ್ಲಿ ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ನಿರ್ದೇಶನಾಲಯದಡಿ ಬುಧವಾರ ಆಯೋಜಿಸಿದ್ದ ಖಾತಾ ಆಂದೋಲನದಲ್ಲಿ ಸಾರ್ವಜನಿಕರಿಗೆ ಡಿಜಿಟಲ್ ಖಾತಾ (ಇ-ಸ್ವತ್ತು) ವಿತರಿಸಿ ಮಾತನಾಡಿದರು.

ಹಳೆಯ ಪುರಸಭೆ ಪ್ರದೇಶದಲ್ಲಿದ್ದ ಗ್ರಾಮ ಪಂಚಾಯಿತಿ ಪ್ರದೇಶಗಳು ನಗರಸಭೆ ವ್ಯಾಪ್ತಿಗೆ ಸೇರ್ಪಡೆಗೊಂಡಿವೆ. ನಗರಸಭೆ ಕಚೇರಿಯಲ್ಲಿ ಸಾರ್ವಜನಿಕರ ಆಸ್ತಿಗಳಿಗೆ ಖಾತೆ ತೆರೆಯಬೇಕಿದೆ. ಆದರೆ ಈ ಕೆಲಸಕ್ಕಾಗಿ ಜನರು ಕಚೇರಿಗೆ ನಿತ್ಯವೂ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಅವರ ಕಷ್ಟವನ್ನು ಮನಗಂಡು ಹಾಗೂ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಆಂದೋಲನ ಆಯೋಜಿಸಲಾಗಿದೆ. ಫೆ.22 ರವರೆಗೆ ಇದು ಮುಂದುವರಿಯಲಿದೆ. ಇದರಲ್ಲಿ ಪಾಲ್ಗೊಂಡು, ಆಸ್ತಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಎಂದರು.

ಯಾರಿಗೆ ಡಿಜಿಟಲ್ ಖಾತೆ: ಹಳೆಯ ಪಟ್ಟಣ, ಗ್ರಾಮಠಾಣ ಸೇರಿ ಸಕ್ಷಮ ಪ್ರಾಧಿಕಾರದಿಂದ ಅನುಮೋದಿತಗೊಂಡಿರುವ ಬಡಾವಣೆಗಳ ನಿವೇಶನಗಳಿಗೆ ನಗರಸಭೆಯಲ್ಲಿ ಖಾತೆ ತೆರೆದು ಡಿಜಿಟಲ್ ದಾಖಲೆ ನೀಡಲಾಗುತ್ತದೆ. ಜಿಲ್ಲಾಧಿಕಾರಿ ಅವರಿಂದ ಭೂಪರಿವರ್ತನೆಗೊಂಡು ಗ್ರಾಪಂಗಳಲ್ಲಿ ಬಡಾವಣೆ ನಕ್ಷೆ ಅನುಮೋದನೆ ಪಡೆದಿದ್ದಲ್ಲಿ, ಸರ್ಕಾರದ ಮುಂದಿನ ಆದೇಶ ಬಂದ ನಂತರ ಖಾತೆ ಮಾಡಿಕೊಡಲಾಗುವುದು ಎಂದು ಟಿ. ಮಂಜುನಾಥ್ ಹೇಳಿದರು.

ನಗರಾಭಿವೃದ್ಧಿ ಇಲಾಖೆ ಯೋಜನಾ ನಿರ್ದೇಶಕರ ಕಚೇರಿ ಸಿಬ್ಬಂದಿ ರಾಜೇಶ್ವರಿ, ನಗರಸಭೆ ಕಂದಾಯ ಅಧಿಕಾರಿ ಜಗದೀಶ್, ಕಂದಾಯ ನಿರೀಕ್ಷಕರಾದ ಶ್ರೀನಿವಾಸ್, ದೇವರಾಜು, ವಿಷಯ ಪರಿವೀಕ್ಷಕರಾದ ಗೋಪಾಲ್, ರಾಜು ಮತ್ತಿತರರು ಇದ್ದರು.

ಆಸ್ತಿಗಳ ಖಾತೆ ತೆರೆಯುವ ನೆಪದಲ್ಲಿ ಕೆಲ ಮಧ್ಯವರ್ತಿಗಳು ಸಾರ್ವಜನಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡಿ, ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ. ಅನಧಿಕೃತ ಬಡಾವಣೆಗಳ ಆಸ್ತಿಗಳ ಖಾತೆ ಮಾಡಿಕೊಡುವಂತೆ ಇನ್ನೊಂದಷ್ಟು ಜನರು ದುಂಬಾಲು ಬೀಳುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು ನಾಗರಾಜು, ಮುಖಂಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net