ವೃತ್ತಿಯಲ್ಲಿ ಇರಲಿ ಬದ್ಧತೆ

CTD TEACHERS DAY
Published on

ಚಿತ್ರದುರ್ಗ: ವೃತ್ತಿಯಲ್ಲಿ ಆದರ್ಶ ಹಾಗೂ ಬದ್ಧತೆ ಅಳವಡಿಸಿಕೊಳ್ಳುವಂತೆ ಶಿಕ್ಷಕರಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಸಲಹೆ ನೀಡಿದರು.
ಜಿಲ್ಲಾಡಳಿತ, ಜಿಪಂ, ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ತರಾಸು ರಂಗಮಂದಿರದಲ್ಲಿ ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಜನ್ಮದಿನದ ಅಂಗವಾಗಿ ಗುರುವಾರ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಶಿಕ್ಷಕರ ಸ್ಥಾನಕ್ಕೆ ಬೆಲೆ ಕಟ್ಟಲಾಗದು ಎಂದರು.
ನಾನು ಜೀವನದಲ್ಲಿ ಶಿಸ್ತು, ಬದ್ಧತೆ ರೂಢಿಸಿಕೊಂಡಿದ್ದೇನೆ ಎಂದರೆ ಅದಕ್ಕೆ ಶಿಕ್ಷಕರು ಕಾರಣ. ಶಿಕ್ಷಣಕ್ಕೆ ಸರ್ಕಾರಗಳು ಕೋಟ್ಯಂತರ ರೂ. ಖರ್ಚು ಮಾಡುತ್ತಿವೆ. ಸಿಎಂ ಸಿದ್ದರಾಮಯ್ಯ ಅವರು ಶಿಕ್ಷಕರ ಬೇಡಿಕೆಗಳಿಗೆ ತಕ್ಷಣ ಸ್ಪಂದಿಸುತ್ತಿದ್ದಾರೆ. 7ನೇ ವೇತನ ಆಯೋಗದ ಶಿಫಾರಸು ಜಾರಿಯಾಗಿದೆ. 2017ಕ್ಕಿಂತ ಮೊದಲು ನೇಮಕವಾದ ಪ್ರಾಥಮಿಕ ಶಾಲಾ ಶಿಕ್ಷಕರ ಬಡ್ತಿ ಮತ್ತಿತರ ಬೇಡಿಕೆಗಳಿಗೆ ಪರಿಹಾರಕ್ಕೆ ಸಮಿತಿ ರಚಿಸುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ ಎಂದರು.
ಬರಪೀಡಿತ ಜಿಲ್ಲೆಯಲ್ಲಿ ಅಹಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವರಿಗೆ ಶಿಕ್ಷಣ ಹೊರತು ಬೇರೆ ಅವಕಾಶಗಳಿಲ್ಲ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಶಿಕ್ಷಣ ಮುಖ್ಯ. ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆಯನ್ನು ಮೊದಲ 10 ಸ್ಥಾನದೊಳಗೆ ತರಲು ಶಿಕ್ಷಕರು ಶ್ರಮಿಸಬೇಕು ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ಬಾಲ್ಯವಿವಾಹ ಹಾಗೂ ಅಪ್ರಾಪ್ತ ಗರ್ಭಿಣಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಶಿಕ್ಷಕರು ನಿಗಾ ವಹಿಸಬೇಕು. ಯೋಧರು, ರೈತರಂತೆ ಶಿಕ್ಷಕರು ಕೂಡ ದೇಶ ನಿರ್ಮಾಣದಲ್ಲಿ ಮುಖ್ಯ ಎಂದರು.
ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ 24 ಶಿಕ್ಷಕರು, ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ನಗರಸಭೆ ಅಧ್ಯಕ್ಷೆ ಸುಮಿತಾ ರಾಘವೇಂದ್ರ ಅಧ್ಯಕ್ಷತೆ ವಹಿಸಿದ್ದರು.
ಕುಡಾ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಗ್ಯಾರಂಟಿ ಜಿಲ್ಲಾ ಸಮಿತಿ ಅಧ್ಯಕ್ಷ ಆರ್.ಶಿವಣ್ಣ, ಸಿಟಿಇ ಪ್ರಾಚಾರ‌್ಯೆ ಟಿ.ಜಿ.ಲೀಲಾವತಿ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಟಿ.ತಿಮ್ಮಾರೆಡ್ಡಿ, ಡಿಡಿಪಿಐ ಎಂ.ಆರ್.ಮಂಜುನಾಥ, ಡಯಟ್ ಪ್ರಾಚಾರ್ಯ ಎಂ.ನಾಸೀರುದ್ದೀನ್, ಬಿಇಒ ಎಸ್.ನಾಗಭೂ ಷಣ್, ಎಸ್.ಕೆಂಚಪ್ಪ, ಕಲ್ಲೇಶ್ ಡಿ.ಮೌರ್ಯ ಇತರರು ಇದ್ದರು.

ಮಕ್ಕಳನ್ನು ಶಿಕ್ಷಿಸಿದರೆ ಪಾಲಕರಿಂದ ಜಗಳ
ಸಾಮಾಜಿಕ ಜಾಲತಾಣಗಳಲ್ಲಿ ಶಿಕ್ಷಕರನ್ನು ಕೆಟ್ಟದಾಗಿ ಬಿಂಬಿಸುವ ಪ್ರಯತ್ನಗಳಿಗೆ ಸಂಸದ ಗೋವಿಂದ ಎಂ.ಕಾರಜೋಳ ಬೇಸರ ವ್ಯಕ್ತಪಡಿಸಿದರು. ಈ ಹಿಂದೆ ಮಕ್ಕಳು ತಪ್ಪು ಮಾಡಿದರೆ ಶಿಕ್ಷಕರು ಶಿಕ್ಷಿಸುತ್ತಿದ್ದರು. ಈಗ ದಂಡಿಸಿದರೆ, ಪಾಲಕರು ಶಿಕ್ಷಕರೊಂದಿಗೆ ಜಗಳವಾಡುತ್ತಾರೆ. ಮಕ್ಕಳ ಕೈಗೆ ಪೊರಕೆ ಕೊಟ್ಟು ಸ್ವಚ್ಛತೆ ಮಾಡಿಸಿದರೆ ಅಪರಾಧ ಎನ್ನುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಸರಿಯಲ್ಲ ಎಂದು ಹೇಳಿದರು. ರಾಷ್ಟ್ರಪತಿಯಾಗಿದ್ದ ರಾಧಾಕೃಷ್ಣನ್, ಈಗಿನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೂಡ ಶಿಕ್ಷಕರಾಗಿದ್ದರು. ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂ ಶಿಕ್ಷಕ ವೃತ್ತಿಯನ್ನು ಪ್ರೀತಿಸುತ್ತಿದ್ದರು. ಸಮಾಜವನ್ನು ಸರಿ ದಾರಿಗೆ ತಂದು, ಸುಂದರ ಸಮಾಜ ನಿರ್ಮಾಣ ಮಾಡುವ ಕೆಲಸ ಶಿಕ್ಷಕರಿಂದ ಸಾಧ್ಯವೆಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net