ವೃತ್ತಿಪರ ಸಂಸ್ಥೆಗಳೊಂದಿಗೆ ಕವಿವಿ ಒಡಂಬಡಿಕೆ

11 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ರಾಷ್ಟ್ರೀಯ ಶಿಕ್ಷಣ ನೀತಿ ಭಾಗವಾಗಿ ಕರ್ನಾಟಕ ವಿಶ್ವ ವಿದ್ಯಾಲಯವು ವೃತ್ತಿಪರ ಸಂಸ್ಥೆಗಳಾದ ಚನ್ನೈನ ಲಾಜಿಸ್ಟಿಕ ಸ್ಕಿಲ್ ಕೌನ್ಸಿಲ್ (ಎಲ್‌ಎಸ್‌ಸಿ) ಹಾಗೂ ಬೆಂಗಳೂರಿನ ಆಪರ್ಚುನಿಟಿ ಪ್ರತಿಷ್ಠಾನ (ಅವಸರ) ಟ್ರಸ್ಟ್ ಜತೆಗೆ ಶನಿವಾರ ಶೈಕ್ಷಣಿಕ ಒಪ್ಪಂದ ಮಾಡಿಕೊಂಡಿತು.
ಅವಸರ ಪ್ರತಿಷ್ಠಾನದ ಸಂಸ್ಥಾಪಕ ಆನಂದ ಚತುರ್ವೇದಿ, ಎಲ್‌ಎಸ್‌ಸಿ ಮುಖ್ಯಸ್ಥ ಗಣೇಶನ್, ಗಾಯತ್ರಿ ಮತ್ತು ಕವಿವಿ ಕುಲಪತಿ ಪ್ರೊ. ಕೆ.ಬಿ. ಗುಡಸಿ ಒಡಂಬಡಿಕೆ ಪತ್ರಕ್ಕೆ ಪರಸ್ಪರ ಸಹಿ ಹಾಕಿದರು.
ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರೊ. ಕೆ.ಬಿ. ಗುಡಸಿ, ವೃತ್ತಿಪರ ಕಂಪನಿಗಳ ಸಹಯೋಗದಲ್ಲಿ ಹೊಸ ಕೋರ್ಸ್‌ಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ. ಈ ಪೈಕಿ ಕರ್ನಾಟಕ ಕಾಲೇಜಿನಲ್ಲಿ ಬಿಕಾಂನಲ್ಲಿ ಇ-ಕಾಮರ್ಸ್ ಮತ್ತು ಕವಿವಿಯ ಕೌಸಾಳಿ ವ್ಯವಹಾರ ಅಧ್ಯಯನ ವಿಭಾಗದಲ್ಲಿ ಬಿಬಿಎ ಇನ್ ಲಾಜಿಸ್ಟಿಕ್ಸ್ ಮತ್ತು ಎಂಬಿಎ ಇನ್ ಲಾಜಿಸ್ಟಿಕ್ಸ್ ಕೋರ್ಸ್‌ಗಳನ್ನು ನಡೆಸಲಾಗುವುದು ಎಂದರು.
ಸ್ನಾತಕ ಪದವಿ ಹಂತದ ಕೋರ್ಸಿನ 5, 6ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಹಾಗೂ ಸ್ನಾತಕೋತ್ತರ ಪದವಿಯ 3,4 ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಅಪ್ರೆಂಟಿಶಿಪ್ ಮತ್ತು ಇಂಟರ್ನ್‌ಶಿಪ್‌ಗೆ ಎಲ್‌ಎಸ್‌ಸಿ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಅಪ್ರೆಂಟಿಶಿಪ್ ಸಮಯದಲ್ಲಿ ಪ್ರತಿ ವಿದ್ಯಾರ್ಥಿಗೆ 7 ರಿಂದ 15 ಸಾವಿರ ರೂ. ತರಬೇತಿ ವೇತನ ನೀಡಲಿದೆ. ಪದವಿ ಪೂರ್ಣಗೊಳಿಸಿದ ನಂತರ ತರಬೇತಿ ಪಡೆದವರಿಗೆ 20 ರಿಂದ 25 ಸಾವಿರ ರೂ. ವೇತನದೊಂದಿಗೆ ಉದ್ಯೋಗ ನೀಡಲಿದೆ ಎಂದರು.
ಇದಲ್ಲದೆ ಪಿಯುಸಿ, ಸ್ನಾತಕ ಹಾಗೂ ಸ್ನಾತಕೋತ್ತರ ಪದವಿಯನ್ನು ಅರ್ಧಕ್ಕೆ ಬಿಟ್ಟು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವೃತ್ತಿ ಕೌಶಲ ತರಬೇತಿ ನೀಡಲು ಕವಿವಿ ಮುಂದಾಗಿದೆ. ಈ ತರಬೇತಿಗೆ ಅವಸರ ಸಂಸ್ಥೆ ಜತೆಗೆ ಒಪ್ಪಂದ ಮಾಡಿಕೊಂಡಿದ್ದು, ಅರ್ಧಕ್ಕೆ ಶಿಕ್ಷಣ ಬಿಟ್ಟ ಅಭ್ಯರ್ಥಿಗಳ ಕೌಶಲ ಹೆಚ್ಚಿಸಲು ಉಚಿತವಾಗಿ ತರಬೇತಿ ನೀಡಲಿದೆ. ಶೀಘ್ರದಲ್ಲಿ ಕೋರ್ಸ್‌ಗಳು ಆರಂಭವಾಗಲಿವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net