

ಮೈಸೂರು: ನ್ಯಾಯ ಪಡೆಯುವ ದಾರಿಗಳು ತೀರ ದುಬಾರಿಯಾಗಿ ಜನ ನ್ಯಾಯಾಲಯಗಳಿಗೆ ಬರುವುದನ್ನೇ ಬಿಟ್ಟಿದ್ದಾರೆ ಎಂದು ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಎಂ.ಎಲ್. ರಘುನಾಥ್ ಕಳವಳ ವ್ಯಕ್ತಪಡಿಸಿದರು.
ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಸೋಮವಾರ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಅಭಿವಿನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇವತ್ತು ಸಮಾಜದ ಎಲ್ಲ ವೃತ್ತಿಗಳಲ್ಲಿ ನೈತಿಕತೆ ಅನ್ನುವುದು ಕಾಣೆಯಾಗುತ್ತಿದೆ. ಇಂಥ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಯುವ ವಕೀಲರು ತಮ್ಮ ವೃತ್ತಿಯನ್ನು ಸವಾಲಾಗಿ ತೆಗೆದುಕೊಂಡು ಸದಾ ದುರ್ಬಲರ ಪರವಾಗಿ ನಿಲ್ಲಬೇಕಿದೆ ಎಂದರು.
ವ್ಯಕ್ತಿಯೊಬ್ಬನ ವೈಯಕ್ತಿಕ ಮತ್ತು ಸಮಾಜದ ಸಾಮೂಹಿಕ ಸಮಸ್ಯೆಗಳೆರಡು ಇವತ್ತು ನ್ಯಾಯಾಲಯಗಳಿಗೆ ಬರುತ್ತಿವೆ. ಅದರಲ್ಲೂ ಈಚಿನ ದಿನಗಳಲ್ಲಿ ಕೌಟುಂಬಿಕ ಸಮಸ್ಯೆಗಳು ಸಮಾಜದಲ್ಲಿ ಹೊಸಬಗೆಯ ಬಿಕ್ಕಟ್ಟುಗಳನ್ನು ಹುಟ್ಟುಹಾಕುತ್ತಿವೆ. ನಮ್ಮ ವಕೀಲರು ಆಸ್ತಿ, ತೆರಿಗೆ, ಕಾರ್ಪೋರೇಟ್ ಸಮಸ್ಯೆಗಳಿಗೆ ಸ್ಪಂದಿಸುವಷ್ಟೇ ಈ ಕೌಟುಂಬಿಕ ಸಮಸ್ಯೆಗಳತ್ತಲೂ ಕಣ್ಣುಹಾಯಿಸಬೇಕಿದೆ. ಏಕಕಾಲಕ್ಕೆ ನಮ್ಮ ವಕೀಲರು ವ್ಯಕ್ತಿಯೊಬ್ಬನ ವೈಯಕ್ತಿಕ ಸಮಸ್ಯೆ ಹಾಗೂ ಸಮಾಜದ ಬಿಕ್ಕಟ್ಟುಗಳಿಗೂ ಕಣ್ಣು ಕಿವಿಯಾಗಿ ಸಂರಕ್ಷಕನ ರೀತಿ ವರ್ತಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
ಸಮಾಜಕ್ಕೆ ವೈದ್ಯರಷ್ಟೇ ವಕೀಲರ ಅಗತ್ಯವಿದೆ. ದೇಹದ ಕಾಯಿಲೆಗೆ ವೈದ್ಯರು ಮದ್ದು ನೀಡಿದರೆ, ಸಮಾಜದ ಸಂಕಟಗಳಿಗೆ, ಬಿಕ್ಕಟ್ಟುಗಳಿಗೆ ವಕೀಲರು ಮಿಡಿಯಬೇಕು. ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ವಕೀಲರ ಪಾತ್ರ ಸದಾ ದೊಡ್ಡದು ಎಂದರು.
ಕನ್ನಡದಲ್ಲಿ ಹೆಚ್ಚು ಕಾನೂನು ಪುಸ್ತಕಗಳು, ಸುಪ್ರೀಂಕೋರ್ಟಿನ ತೀರ್ಪುಗಳು ಸಿಗುತ್ತಿಲ್ಲ. ಇಂಗ್ಲಿಷ್ ಕಲಿಯುವ ಅನಿವಾರ್ಯವನ್ನು ನಾವೆಲ್ಲ ಇನ್ನಾದರೂ ಮನಗಾಣಬೇಕಿದೆ. ಕಲಿಯುವ ಅವಕಾಶಗಳ ಹೆಚ್ಚಿನ ಸಾಧ್ಯತೆ ಇಂಗ್ಲಿಷ್ ಭಾಷೆಯಲ್ಲಿ ನೋಡಬಹುದು. ಇಂಗ್ಲಿಷ್ ಬರೀ ವಿದ್ಯಾರ್ಥಿಗಳಿಗಷ್ಟೇ ಅಲ್ಲ ಕಾನೂನು ವೃತ್ತಿಯನ್ನು ಗಂಭೀರವಾಗಿ ತೆಗೆದುಕೊಂಡ ಪ್ರತಿಯೊಬ್ಬರಿಗೂ ಇದರ ಅಗತ್ಯವಿದೆ. ಕಾನೂನಿನ ಜತೆಗೆ ವಿದ್ಯಾರ್ಥಿಗಳು ಇಂಗ್ಲಿಷ್‌ನ ಮೇಲೂ ಹಿಡಿತ ಸಾಧಿಸಬೇಕಿದೆ. ಇದು ಅಗತ್ಯವೂ ಹೌದು, ಅನಿವಾರ್ಯವೂ ಹೌದು ಎಂದರು.
ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪಗೌಡ ಮಾತನಾಡಿ, ಆಧುನಿಕ ತಂತ್ರಜ್ಞಾನ ಬಳಕೆಯಿಂದಾಗಿ ವಿದ್ಯಾರ್ಥಿಗಳಲ್ಲಿ ಓದುವ ತಾಳ್ಮೆ ಮತ್ತು ಶಕ್ತಿಯನ್ನು ಕಿತ್ತುಕೊಂಡಿದೆ. ಈಗಿನ ವಿದ್ಯಾರ್ಥಿಗಳಲ್ಲಿ ಇಂಥ ತೀವ್ರ ಓದಿನ ಹಸಿವು, ಜ್ಞಾನ ಗಳಿಸುವ ಉತ್ಸಾಹಗಳು ಕಾಣೆಯಾಗಿವೆ ಎಂದು ಆತಂಕಪಟ್ಟರು.
ಸಂಘದ ಕಾರ್ಯದರ್ಶಿ ಪಿ.ವಿಶ್ವನಾಥ್, ಖಜಾಂಚಿ ಶ್ರೀಶೈಲ ರಾಮಣ್ಣನವರ್, ಪ್ರಾಂಶುಪಾಲ ಡಾ.ಪಿ.ದೀಪು, ಕಾನೂನು ಅಧ್ಯಯನ ವಿಭಾಗದ ನಿರ್ದೇಶಕ ಪ್ರೊ.ಕೆ.ಬಿ. ವಾಸುದೇವ, ಸಹಾಯಕ ಪ್ರಾಧ್ಯಾಪಕರಾದ ಡಾ.ಶ್ರೀದೇವಿಕೃಷ್ಣ, ಎಚ್.ಎಸ್. ಶಿವಕುಮಾರ್ ಇದ್ದರು.