ವೃತ್ತಿ ಪ್ರೀತಿಸಿ, ಗುಣಮಟ್ಟದಲ್ಲಿ ರಾಜಿ ಬೇಡ

23 vikram 5
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ನಾವು ಮಾಡುವ ವೃತ್ತಿ ಪ್ರೀತಿಸುವ ಗುಣ ಬೆಳೆಸಿಕೊಳ್ಳಬೇಕು. ವೃತ್ತಿ ಬಗ್ಗೆ ಗೌರವ ಇಲ್ಲದಿದ್ದರೆ ಕೈಗೊಳ್ಳುವ ಕೆಲಸ, ಕಾಮಗಾರಿಗಳ ಗುಣಮಟ್ಟ ಕಳಪೆಯಾಗಿ ಕೆಲ ವರ್ಷಗಳಲ್ಲಿ ಮತ್ತೆ ಮರುನಿರ್ಮಿಸುವ ಅಪಾಯ ಉಂಟಾಗುತ್ತದೆ. ಇಂತಹ ಅಪಾಯಕ್ಕೆ ಅವಕಾಶ ಮಾಡಿಕೊಡದೆ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ ಕೆಲಸ ಮಾಡಿ ಎಂದು ನಿವೃತ್ತ ಅಧೀಕ್ಷಕ ಇಂಜಿನಿಯರ್ ಎಸ್.ಎಲ್. ಮೋಹನ್‌ಕುಮಾರ ಸಲಹೆ ನೀಡಿದರು.
ನಗರದ ಜಲ ಮತ್ತು ನೆಲ ನಿರ್ವಹಣಾ ಸಂಸ್ಥೆ (ವಾಲ್ಮಿ)ಯಲ್ಲಿ ಮಂಗಳವಾರ ಏರ್ಪಡಿಸಿದ್ದ ಜಲ ಸಂಪನ್ಮೂಲ ಇಲಾಖೆಯಲ್ಲಿ ಹೊಸದಾಗಿ ನೇಮಕಗೊಂಡ ಇಂಜಿನಿಯರ್‌ಗಳಿಗೆ ಏರ್ಪಡಿಸಿದ್ದ ಸಮಗ್ರ ನೀರಾವರಿ ನಿರ್ವಹಣೆ ಕುರಿತ ಒಂದು ತಿಂಗಳ ಕಡ್ಡಾಯ ತರಬೇತಿ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಕರ್ತೃತ್ವ ಶಕ್ತಿ ಮತ್ತು ಕರ್ತವ್ಯದ ಪರ ಬದ್ಧತೆ ಇದ್ದರೆ ಏನಾದರೂ ಸಾಧಿಸಬಹುದು. ಕೈಗೊಳ್ಳುವ ಕಾಮಗಾರಿ ಪ್ರಮಾಣ ಮತ್ತು ಗುಣಮಟ್ಟದ ಬಗ್ಗೆ ಎಂದಿಗೂ ರಾಜಿ ಮಾಡಿಕೊಳ್ಳದೆ ಕೆಲಸ ಮಾಡಿ. ಯಶಸ್ಸು ತನ್ನಿಂದ ತಾನೇ ಹುಡುಕಿಕೊಂಡು ಬರುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ವಾಲ್ಮಿ ನಿರ್ದೇಶಕ ರಾಜೇಶ ಅಮ್ಮಿನಭಾವಿ ಮಾತನಾಡಿ, ಕಾಲುವೆಗಳಲ್ಲಿ ನೀರು ಬರದೆ ತೊಂದರೆ ಆದಾಗ ರೈತರು ಬೈಯ್ಯುವುದು ಸಹಜ. ರೈತರ ಜಮೀನುಗಳಿಗೆ ನೀರು ಹೋಗದಿರಲು ಕಾರಣವೇನು ಎಂಬುದನ್ನು ಪತ್ತೆ ಹಚ್ಚಿ ಹೊಲಗಳಿಗೆ ನೀರು ಹಾಯಿಸಿದಲ್ಲಿ ರೈತರೇ ಇಂಜಿನಿಯರ್ಸ್‌ಗಳನ್ನು ಹೊಗಳಿ ಸನ್ಮಾನ ಮಾಡುತ್ತಾರೆ. ಹೀಗಾಗಿ ಟೀಕೆಗಳನ್ನೂ ಸಕಾರಾತ್ಮಕವಾಗಿ ಸ್ವೀಕರಿಸಿ ಕೆಲಸ ಮಾಡಬೇಕು ಎಂದರು.
ಶಿಬಿರದ ಸಂಯೋಜಕ ಪ್ರೊ. ಬಿ.ವೈ. ಬಂಡಿವಡ್ಡರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಬಿರಾರ್ಥಿಗಳಾದ ಜಡಿಯಪ್ಪ, ವಂದನಾ, ನಾಗರಾಜ, ಮಾನಸಾ, ಮಧುಸೂದನ ಹಾಗೂ ನಿವೇದಿತಾ ಅಭಿಪ್ರಾಯ ಹಂಚಿಕೊಂಡರು. ಶಿಬಿರದಲ್ಲಿ ಆಯೋಜಿಸಿದ್ದ ವಿವಿಧ ಆಟೋಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net