ವೃತ್ತಿ ಪೂಜೆ ಮಾಡಿ ಭಗವಂತನ ಅನುಗ್ರಹಕ್ಕೆ ಪಾತ್ರರಾಗಿ

8
Published on

ಮೈಸೂರು: ದೇಗುಲಗಳಲ್ಲಿ ಪೂಜೆ ಮಾಡುವುದಷ್ಟೇ ಅಲ್ಲ, ವೃತ್ತಿ ಪೂಜೆಯನ್ನೂ ಮಾಡಿ ಭಗವಂತನ ಅನುಗ್ರಹಕ್ಕೆ ಪಾತ್ರವಾಗಬೇಕು ಎಂದು ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.


ಖಾಸಗಿ ಹೋಟೆಲ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ಹೋಟೆಲ್ ಮಾಲೀಕರ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಭೆಯಲ್ಲಿ ಮಾತನಾಡಿದರು.
ಬದುಕಿಗಾಗಿ ಆಯ್ಕೆ ಮಾಡಿಕೊಂಡ ವೃತ್ತಿಯನ್ನು ಆರಾಧಿಸುವ ಮೂಲಕ ಭಗವಂತನನ್ನು ಕಾಣಬೇಕು. ಮೋಸ-ವಂಚನೆಯಿಲ್ಲದೆ ವೃತ್ತಿ ನಡೆಸಬೇಕು. ವೃತ್ತಿಯಲ್ಲಿ ಚ್ಯುತಿಯಾದರೆ ದೇವರ ಆರಾಧನೆಗೂ ಚ್ಯುತಿ ಬರುತ್ತದೆ ಎಂಬ ಎಚ್ಚರಿಕೆ ಸದಾ ಇರಬೇಕು ಎಂದರು.


ಗ್ರಾಹಕರಲ್ಲಿ ಭಗವಂತರಿದ್ದಾರೆ. ಪ್ರಾಮಾಣಿಕವಾಗಿ ದೇವರ ಸೇವೆಯಂತೆ ಗ್ರಾಹಕರ ಸೇವೆಯನ್ನೂ ಮಾಡಬೇಕು. ಪ್ರತಿ ಕೆಲಸವೂ ದೇವರ ಆರಾಧನೆ. ಗ್ರಾಹಕರ ಸೇವೆ ಮೂಲಕ ದೇವರ ಅನುಗ್ರಹ ಪಡೆದುಕೊಳ್ಳಬೇಕು ಎಂದು ಹೋಟೆಲ್ ಮಾಲೀಕರಿಗೆ ಕಿವಿಮಾತು ಹೇಳಿದರು.


ಪ್ರಜಾರಾಜ್ಯದಲ್ಲಿ ರಾಮರಾಜ್ಯ ಕನಸು ನನಸಾಗಬೇಕು. ಸಮಾಜಮುಖಿ ಕೆಲಸದ ಮೂಲಕ ಪ್ರತಿಯೊಬ್ಬ ಪ್ರಜೆಯೂ ರಾಮರಾಗಬೇಕು. ರಾಮನ ಭಕ್ತಿ ಬೇರೆಯಲ್ಲ, ದೇಶಭಕ್ತಿ ಬೇರೆಯಲ್ಲ, ದೇಶಸೇವೆ ಬೇರೆಯಲ್ಲ, ರಾಮನ ಸೇವೆ ಬೇರೆಯಲ್ಲ. ಆದ್ದರಿಂದ ಶ್ರೀರಾಮ ಸೇವೆ ದೇಶಸೇವೆ ಆಗಲಿ. ಕಷ್ಟದಲ್ಲಿರುವ ಜನರಿಗೆ ಕೈಲಾದಷ್ಟು ಸಹಾಯ ಮಾಡಬೇಕು ಎಂದು ತಿಳಿಸಿದರು.


ಜೀವನವಿಡೀ ದುಡಿದು ಸಂಪಾದನೆ ಮಾಡಿದ ಹಣದಲ್ಲಿ ಒಂದು ಭಾಗವನ್ನು ಸಮಾಜ ಸೇವೆಗೆ ಮೀಸಲಿಡಬೇಕು. ಕಡುಬಡವರಿಗೆ ಚಿಕ್ಕ ಮನೆ ಕಟ್ಟಿಸಿಕೊಡಿ. ಅದು ಸಾಧ್ಯವಾಗದಿದ್ದರೆ ಐದಾರು ಜನರು ಸೇರಿ ಸಹಾಯ ಮಾಡಿ. ಶಿಕ್ಷಕರು, ವೈದ್ಯರು ಸೇರಿದಂತೆ ವಿವಿಧ ವೃತ್ತಿಯಲ್ಲಿ ಇರುವವರು ದುರ್ಬಲರಿಗೆ ನೆರವಾಗಬೇಕು. ಫಲಾನುಭವಿಗಳನ್ನು ನೀವೇ ಗುರುತಿಸಿ, ನೀವೇ ಅವರಿಗೆ ಸೌಲಭ್ಯ ತಲುಪಿಸಬೇಕು. ಇದರಿಂದ ರಾಮರಾಜ್ಯದ ಕನಸು ನನಸಾಗುತ್ತದೆ ಎಂದರು.


ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯವಾದ ರಾಮಮಂದಿರದ ಗರ್ಭಗುಡಿಯಲ್ಲಿ ಶ್ರೀ ರಾಮನ ಬಾಲರೂಪದ ವಿಗ್ರಹ ಪ್ರತಿಷ್ಠಾಪನೆ ಮಕರ ಸಂಕ್ರಾತಿ ಬಳಿಕ ನೆರವೇರಲಿದೆ. ಇಲ್ಲಿ ದೇವರ ಸೇವಾ ಕಾರ್ಯಗಳಿಗೆ ಶುಲ್ಕ ಇರಲ್ಲ. ಸೇವಾಪಟ್ಟಿ ಸಹ ಇರಲ್ಲ ಎಂದರು.
ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಅವರಿಗೆ ಹೋಟೆಲ್ ಸಹಕಾರ ಮಿತ್ರ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಸಂಘದ ನೂತನ ಚಿಹ್ನೆಯನ್ನು ಅನಾವರಣಗೊಳಿಸಲಾಯಿತು.


ಹೋಟೆಲ್ ಮಾಲೀಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಆರ್.ತಂತ್ರಿ, ಉಪಾಧ್ಯಕ್ಷ ರವಿಶಾಸ್ತ್ರಿ, ನಿರ್ದೇಶಕರಾದ ನಾರಾಯಣ ವಿ.ಹೆಗಡೆ, ಎಂ.ಆರ್.ಪುರಾಣಿಕ್, ಕೆ.ಸಿ.ವಿಶ್ವಾನಂದ ಭಟ್, ಬಿ.ಸಿದ್ದರಾಜು, ಎಂ.ಎಸ್.ಜಯಪ್ರಕಾಶ್ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net