ದಾವಣಗೆರೆ: ಅಡುಗೆ ಅನಿಲ, ಇಂಧನ ಬೆಲೆ ಏರಿಕೆ ಖಂಡಿಸಿ, ಆಹಾರ ಧಾನ್ಯ ಹಾಗೂ ದಿನಬಳಕೆಯ ಉತ್ಪನ್ನಗಳ ಮೇಲಿನ ಜಿಎಸ್‌ಟಿ ಹೇರಿಕೆ ವಿರೋಧಿಸಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕದ ಕಾರ್ಯಕರ್ತರು ಮಂಗಳವಾರ ನಗರದಲ್ಲಿ ವಿನೂತನ ಪ್ರತಿಭಟನೆ ನಡೆಸಿದರು.
ನಿಜಲಿಂಗಪ್ಪ ಬಡಾವಣೆಯ ಗಡಿಯಾರ ಕಂಬದ ವೃತ್ತದಲ್ಲಿ ಸೌದೆ ಒಲೆ ಹೊತ್ತಿಸುವ ಮೂಲಕ ಗೃಹ ಬಳಕೆಯ ಖಾಲಿ ಸಿಲಿಂಡರ್ ಎತ್ತಿ ಹಿಡಿದರು. ಕೆಲ ಸದಸ್ಯರು ವಿವಿಧ ತರಕಾರಿಗಳನ್ನು ಟೊಮ್ಯಾಟೊ, ಬದನೆಕಾಯಿ, ಈರುಳ್ಳಿ ಮೊದಲಾದ ವಿವಿಧ ತರಕಾರಿಗಳ ಹಾರ ಧರಿಸಿದ್ದರು. ಇತರರು ಅಕ್ಕಿ, ಗೋಧಿ, ಮೊಸರು, ಮಜ್ಜಿಗೆ ಪ್ಯಾಕೆಟ್‌ಗಳನ್ನು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು. ಬೆಲೆ ಏರಿಕೆ ಹಾಗೂ ಜಿಎಸ್‌ಟಿ ವಿರೋಧಿ ಫಲಕಗಳನ್ನು ಪ್ರದರ್ಶಿಸಿ ಘೋಷಣೆ ಕೂಗಿದರು.
ಪ್ರತಿಭಟನೆಯಲ್ಲಿ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಜಿಲ್ಲಾಧ್ಯಕ್ಷೆ ಅನಿತಾಬಾಯಿ ಮಾಲತೇಶ್, ಶುಭಮಂಗಳಾ, ರಾಜೇಶ್ವರಿ, ಸುಷ್ಮಾ ಪಾಟೀಲ್, ಆಶಾ ಮುರುಳಿ, ಗೀತಾ ಚಂದ್ರಶೇಖರ್, ಸಲ್ಮಾಭಾನು, ಮಂಜುಳಮ್ಮ, ಮಂಗಳಮ್ಮ, ಮಂಜಮ್ಮ, ಸುಧಾ ಇಟ್ಟಿಗುಡಿ, ಅಶ್ವಿನಿ ಪ್ರಶಾಂತ್, ದಾಕ್ಷಾಯಣಮ್ಮ, ರುದ್ರಮ್ಮ ಹಾಗೂ ಜಿಲ್ಲೆಯ ವಿವಿಧ ಬ್ಲಾಕ್‌ಗಳ ಸದಸ್ಯಿಣಿಯರು ಪಾಲ್ಗೊಂಡಿದ್ದರು.
---