

ಹುಬ್ಬಳ್ಳಿ: ನಿರಾಮಯ ಫೌಂಡೇಷನ್ ವತಿಯಿಂದ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ‘ವೃಕ್ಷ ಯೋಗ’ ಅಭಿಯಾನದಲ್ಲಿ ಭಾನುವಾರ ಒಂದೇ ದಿನ 6 ಜಿಲ್ಲೆಗಳ 60 ಸ್ಥಳಗಳಲ್ಲಿ 6500 ಸಸಿಗಳನ್ನು ನೆಡಲಾಗಿದೆ.
ಧಾರವಾಡ, ಹಾವೇರಿ, ಗದಗ, ಉತ್ತರ ಕನ್ನಡ, ಬಾಗಲಕೋಟ, ಬೆಳಗಾವಿ ಜಿಲ್ಲೆಗಳಲ್ಲಿ ಬೆಳಗ್ಗೆ ಏಕ ಕಾಲದಲ್ಲಿ ಪ್ರತಿಷ್ಠಾನದ ಕಾರ್ಯಕರ್ತರು ವಿವಿಧ ಜಾತಿಯ ಸಸಿಗಳನ್ನು ನೆಟ್ಟು ನೀರುಣಿಸಿದ್ದಾರೆ. ‘6500 ಸಸಿ ನೆಡಲಾಗಿದ್ದು, ಒಟ್ಟು 10 ಸಾವಿರ ಸಸಿಗಳನ್ನು ನೆಡುವ ಗುರಿ ಹೊಂದಿದ್ದೇವೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ವಿವಿಧ ಮಠಾಧೀಶರು, ಜನಪ್ರತಿನಿಧಿಗಳು, ಗಣ್ಯರು, ಸಾಮಾಜಿಕ ಕಾರ್ಯಕರ್ತರು ಅಭಿಯಾನಕ್ಕೆ ಕೈಜೋಡಿಸಿದ್ದಾರೆ’ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಬಾಳಿಕಾಯಿ ತಿಳಿಸಿದ್ದಾರೆ.
ಇಲ್ಲಿನ ಕುಸುಗಲ್ಲ ರಸ್ತೆಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ 50ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಯಿತು. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಇಂಜಿನಿಯರ್ ಅಮೃತ ಮೆಹರವಾಡೆ, ಪರಿಸರ ಪ್ರೇಮಿ ಲಿಂಗರಾಜ ನಿಡುವಣಿ, ದೇವರಾಜ ದಾಡಿಬಾವಿ, ಪ್ರೀತಂ ಅರಕೇರಿ, ಕಲ್ಲಪ್ಪ ಮೊರಬದ, ಮತ್ತಿತರು ಪಾಲ್ಗೊಂಡಿದ್ದರು.
ಭಾರತದ ಪ್ರಾಚೀನ ಪರಂಪರೆ ಯೋಗ: ವಿಶ್ವ ಯೋಗ ದಿನಾಚರಣೆ ಅಂಗವಾಗಿ ನೈಋತ್ಯ ರೈಲ್ವೆ ವಲಯದ ಅಧಿಕಾರಿಗಳು ಮತ್ತು ಸಿಬ್ಬಂದಿ ಮನೆಯಲ್ಲಿಯೇ ತಮ್ಮ ಕುಟುಂಬದವರೊಂದಿಗೆ ಯೋಗಾಭ್ಯಾಸ ಮಾಡುವ ಮೂಲಕ ‘ಯೋಗಾ ಆನ್ಲೈನ್ ವಿಥ್ ಫ್ಯಾಮಿಲಿ’ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಹುಬ್ಬಳ್ಳಿ ವಿಭಾಗೀಯ ಹೆಚ್ಚುವರಿ ವ್ಯವಸ್ಥಾಪಕ ಮುರಳಿ ಕೃಷ್ಣ ಅವರ ಮಾರ್ಗದರ್ಶನದಲ್ಲಿ ಹೆಡ್ ಕ್ವಾರ್ಟರ್ಸ್, ಹುಬ್ಬಳ್ಳಿ, ಬೆಂಗಳೂರು, ಮೈಸೂರು ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ಕುಟುಂಬದ ಸದಸ್ಯರೊಂದಿಗೆ ಯೋಗ ಹಾಗೂ ಪ್ರಾಣಾಯಾಮದ ವಿವಿಧ ಆಸನಗಳನ್ನು ಮಾಡಿದರು. ರೈಲ್ವೆ ವಲಯದ ಮಹಾಪ್ರಬಂಧಕ ಅಜಯಕುಮಾರ ಸಿಂಗ್ ಮಾತನಾಡಿ, ಯೋಗ ಭಾರತದ ಪ್ರಾಚೀನ ಪರಂಪರೆ. ವಿಶ್ವಕ್ಕೆ ಯೋಗವನ್ನು ಪರಿಚಯಿಸುವ ಮೂಲಕ ನಿರೋಗಿಯಾಗಿ ಬದುಕುವ ಕಲೆಯನ್ನು ಭಾರತ ಹೇಳಿಕೊಟ್ಟಿದೆ ಎಂದರು. ನಿತ್ಯ ಯೋಗಾಭ್ಯಾಸ ಮಾಡುವ ಮೂಲಕ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಹೆಚ್ಚುವರಿ ಮಹಾಪ್ರಬಂಧಕ ಪಿ.ಕೆ. ಮಿಶ್ರಾ, ಬಿ.ಜಿ. ಮಲ್ಯಾ, ಹುಬ್ಬಳ್ಳಿ ವಿಭಾಗೀಯ ವ್ಯವಸ್ಥಾಪಕ ಅರವಿಂದ ಮಾಳಖೇಡೆ, ಬೆಂಗಳೂರು ವಿಭಾಗೀಯ ವ್ಯವಸ್ಥಾಪಕ ಅಶೋಕ ವರ್ವ, ಮೈಸೂರು ವಿಭಾಗೀಯ ವ್ಯವಸ್ಥಾಪಕಿ ಅರ್ಪಣಾ ಗರ್ಗ ಹಾಗೂ ಇತರರಿದ್ದರು. ನಂತರ ನಗರದ ಮಹರ್ಷಿ ಪತಂಜಲಿ ಯೋಗ ಉದ್ಯಾನದಲ್ಲಿ ಸಸಿ ನೆಡಲಾಯಿತು. ವಲಯದ ಜಿಎಂ ಎ.ಕೆ. ಸಿಂಗ್, ವಲಯದ ಮಹಿಳಾ ಕಲ್ಯಾಣಾಧಿಕಾರಿ ಸುಜಾತಾ ಸಿಂಗ್ ಇತರರಿದ್ದರು.
ಸಸಿ ನೆಟ್ಟು ಯೋಗ ದಿನಾಚರಣೆ: ಹುಬ್ಬಳ್ಳಿ ಗ್ರೋ ಗ್ರೀನ್ ಪೆಡಲರ್ಸ್ನಿಂದ ವಿದ್ಯಾನಗರದಲ್ಲಿನ ಪಾಲಿಕೆ ಉದ್ಯಾನದಲ್ಲಿ ಸಸಿ ನೆಟ್ಟು ವಿಶ್ವ ಯೋಗ ದಿನ ಆಚರಿಸಲಾಯಿತು.
ಯೋಗಾಚಾರ್ಯ ಭವರಲಾಲ ಆರ್ಯ, ವಿದ್ಯಾನಗರ ಠಾಣೆಯ ಪಿಐ ಆನಂದ ವಣಕುದರೆ, ಉದ್ಯಮಿ ವಿ.ಎಸ್.ವಿ. ಪ್ರಸಾದ, ಯೋಗ ಗುರುಗಳಾದ ಪ್ರಸನ್ನ ದೀಕ್ಷಿತ, ಡಾ.ಈಶ್ವರ ಮೆಣಸಿನಕಾಯಿ, ಎಂ.ಡಿ. ಪಾಟೀಲ, ಮಹಾದೇವ ಹೊಳೆನ್ನವರ, ರಾಜೇಶ್ವರಿ ಯಳವತ್ತಿ ಅವರಿಗೆ ಸಸಿ ನೀಡಿ ಸನ್ಮಾನಿಸಲಾಯಿತು.
ಗ್ರೋ ಗ್ರೀನ್ ಪೆಡಲರ್ಸ್ ಅಧ್ಯಕ್ಷ ಬಾಲಚಂದ್ರ ಡಂಗನವರ, ಚಂದ್ರಶೇಖರ ಏರಿಮನಿ, ಸುರೇಶ ಚಿಂದಿ, ರಾಜು ರಾಜೊಳಿ, ಪ್ರವೀಣ ಪಾಟೀಲ, ಎಚ್.ಬಿ. ನಾಯಕ, ಪ್ರವೀಣ ನಾಯಕ, ನಿಹಾಲ ಏರಿಮನಿ, ಬಾಬು ಆವಟಿ, ಬಸ್ಸು ಕೊಟಬಾಗಿ, ಮಲ್ಲಪ್ಪ ಗುರಮ್ಮ ನವರ, ಮಂಜುನಾಥ ಕರಡಿ, ಇತರರಿದ್ದರು.