

ಮದ್ದೂರು: ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಧರ್ಮಸ್ಥಳದ ಧರ್ಮಧಿಕಾರಿ ವೀರೇಂದ್ರ ಹೆಗಡೆ ಅವರು ಮಾಡದ ಸಮಾಜ ಸೇವೆ ಇಲ್ಲ ಎಂದು ಆಲೂರಮ್ಮ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಮಹಾದೇವು ಬಣ್ಣಿಸಿದರು.
ತಾಲೂಕಿನ ಆಲೂರು ಗ್ರಾಮದ ಶ್ರೀ ಅಲೂರಮ್ಮ ದೇವಸ್ಥಾನದ ಹೊಸ ಗರ್ಭಗುಡಿಯ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜೂರಾದ 3 ಲಕ್ಷ ರೂ. ಡಿಡಿಯನ್ನು ಶುಕ್ರವಾರ ಸ್ವೀಕರಿಸಿ ಮಾತನಾಡಿದರು.
ವೀರೇಂದ್ರ ಹೆಗಡೆ ಅವರು ಹೊಸ ಹೊಸ ಯೋಜನೆಗಳನ್ನು ರೂಪಿಸಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸೌಲಭ್ಯ ತಲುಪುವಂತೆ ಮಾಡುತ್ತಿದ್ದಾರೆ. ಗ್ರಾಮೀಣ ಭಾಗದ ದೇಗುಲಗಳ ಜೀರ್ಣೋದ್ಧಾರಕ್ಕೆ ಧನಸಹಾಯ ಮಾಡುತ್ತಿರುವುದು ಧಾರ್ಮಿಕ ಕ್ಷೇತ್ರಕ್ಕೆ ಹೆಚ್ಚಿನ ಕೊಡುಗೆ ನೀಡಿದಂತಾಗುತ್ತದೆ ಎಂದರು.
ಧರ್ಮಸ್ಥಳ ಯೋಜನೆಯು ವಿವಿಧ ಸೌಲಭ್ಯಗಳೊಂದಿಗೆ ಸೇವೆಯನ್ನು ಹಳ್ಳಿಯ ಮೂಲೆ ಮೂಲೆಗೂ ತಲುಪಿಸುವಲ್ಲಿ ಯಶಸ್ವಿಯಾಗಿದೆ. ಪೂಜ್ಯರ ಸೇವೆ ಶ್ಲಾಘನೀಯ. ಅಂತೆಯೇ ಪ್ರತಿ ಹಳ್ಳಿಯಲ್ಲೂ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮ ನಡೆಯುತ್ತಿದೆ ಎಂದರು.
ದೇವಸ್ಥಾನದ ಸಮಿತಿಯ ಅಧ್ಯಕ್ಷ ರಾಮಚಂದ್ರ ಮಾತನಾಡಿದರು. ಯೋಜನೆಯ ಜಿಲ್ಲಾ ಸಂಯೋಜಕಿ ಚೇತನಾ, ತಾಲೂಕು ಯೋಜನಾಧಿಕಾರಿ ಬಿ.ಆರ್.ಯೋಗೀಶ್ ಕನ್ಯಾಡಿ, ದೇವಾಲಯದ ಸಮಿತಿಯ ನಿರ್ದೇಶಕರು, ಅರ್ಚಕರು, ಯೋಜನೆಯ ವಲಯ ಮೇಲ್ವಿಚಾರಕರು, ಮುಖಂಡರು ಇದ್ದರು.