

ಚಿತ್ರದುರ್ಗ:ಅರಣ್ಯ, ವನ್ಯಜೀವಿಗಳ ಸಂರಕ್ಷಣೆ ಹೊಣೆ ಎಲ್ಲರ ಮೇಲಿದೆ. ಮೃಗಾಲಯದ ಅಭಿವೃದ್ಧಿಗೆ ಕೊಡುಗೆ ನೀಡಬೇಕು. ಅಲ್ಲಿನ ಪ್ರಾಣಿ ಪಕ್ಷಿಗಳನ್ನು ದತ್ತು ಪಡೆದು ಅವುಗಳ ರಕ್ಷಣೆ, ಪಾಲನೆಗೆ ಆರ್ಥಿಕ ನೆರವು ನೀಡುವಂತೆ ವನ್ಯಜೀವಿ ರಾಯಭಾರಿ, ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮನವಿ ಮಾಡಿದರು.
ಅರಣ್ಯಇಲಾಖೆ, ಜೋಗಿಮಟ್ಟಿ ಆಡುಮಲ್ಲೇಶ್ವರ ಕಿರುಮೃಗಾಲಯದಲ್ಲಿ ವನ್ಯಜೀವಿ ಸಪ್ತಾಹ ಅಂಗವಾಗಿ ಸೋಮವಾರ ಏರ್ಪಡಿಸಿದ್ದ ‘ವನ್ಯಜೀವಿ ರಾಯಭಾರಿ’ ಕಾರ‌್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾರ್ವಜನಿಕರು ಜನ್ಮ ದಿನಾಚರಣೆ ಸಂದರ್ಭದಲ್ಲಿ ಗ್ರಂಥಾಲಯಕ್ಕೆ ಒಂದು ಪುಸ್ತಕ, ಮೃಗಾಲಯಕ್ಕೆ ಹಣಕಾಸು ನೆರವು ನೀಡಬೇಕು.ಪ್ರತಿಯೊಬ್ಬರೂ ವನ್ಯಜೀವಿ ರಾಯಭಾರಿಗಳಾಗಿ ಕೆಲಸ ಮಾಡಿದಾಗ ಅಮೂಲ್ಯ ಅರಣ್ಯ ಸಂಪತ್ತು, ಜೀವ ಸಂಕುಲದ ರಕ್ಷಣೆ ಸಾಧ್ಯ ಎಂದರು.
ನಮ್ಮ ಮನೆಯಂತೆ ಸುತ್ತಲಿನ ಪರಿಸರವನ್ನೂ ರಕ್ಷಿಸಬೇಕಿದೆ. ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕುವುದರೊಂದಿಗೆ ಸ್ವಚ್ಛತೆ ಕಡೆ ಗಮನ ಹರಿಸಬೇಕಿದೆ ಎಂದೂ ಹೇಳಿದರು.
ಡಿಸಿಎಫ್ ಟಿ.ರಾಜಣ್ಣ ಮಾತನಾಡಿ, ಇಲಾಖೆಯು ಶಾಸಕರನ್ನು ‘ವನ್ಯಜೀವಿ ರಾಯಭಾರಿ’ ಎಂಬುದಾಗಿ ಗೌರವಿಸಿದೆ ಎಂದು ಪ್ರಕಟಿಸಿದರು. ಎಲ್ಲರ ಸಹಕಾರದಿಂದ ಅರಣ್ಯ, ವನ್ಯಜೀವಿಗಳ ರಕ್ಷಣೆ ಸಾಧ್ಯ. ಕಾಡಿನ ಒತ್ತುವರಿಯಿಂದ ವನ್ಯ ಸಂಪತ್ತಿಗೆ ಧಕ್ಕೆ ಆಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ವಿಶ್ರಾಂತ ಪ್ರಾಧ್ಯಾಪಕ ಡಾ.ನಟರಾಜ್, ಪರಿಸರವಾದಿ ಡಾ.ಎಚ್.ಕೆ.ಎಸ್.ಸ್ವಾಮಿ, ಸ್ನೇಕ್‌ಶಿವು ಮಾತನಾಡಿದರು. ಎಸಿಎಫ್ ನಾಗೇಂದ್ರ ನಾಯಕ್, ಜಿಪಂ ಮಾಜಿ ಉಪಾಧ್ಯಕ್ಷ ಎಚ್.ಎನ್.ತಿಪ್ಪೇಸ್ವಾಮಿ, ವಲಯ ಅರಣ್ಯಾಧಿಕಾರಿಗಳಾದ ಐ.ಬಿ.ಅಕ್ಷತಾ, ವಸಂತ್‌ಕುಮಾರ್, ಡಿಆರ್‌ಎಫ್‌ಒ ವೆಂಕಟೇಶ್, ನವೀನ್ ಮತ್ತಿತರರು ಇದ್ದರು.