

ಚಿಕ್ಕಬಳ್ಳಾಪುರ : ತಾಲೂಕಿನ ಸೂಲಾಲಪ್ಪದಿನ್ನೆಯ ಬಳಿ ಇರುವ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ಭಾನುವಾರ ಕಡಲೆಕಾಯಿ ಪರಿಷೆ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.
ಹನುಮ ಜಯಂತಿ ಅಂಗವಾಗಿ ಆದಿಚುಂಚನಗಿರಿ ಮಠವು ಪ್ರತಿ ವರ್ಷ ಧಾರ್ಮಿಕ ಪೂಜಾ ಕಾರ್ಯಕ್ರಮಗಳೊಂದಿಗೆ ಜಾತ್ರೆಯನ್ನು ಕೈಗೊಳ್ಳುತ್ತ ಬರುತ್ತಿದ್ದು ಜಾತ್ರೆ ಹಿನ್ನೆಲೆಯಲ್ಲಿ ಭಾನುವಾರ ಧಾರ್ಮಿಕ ವಿವಿಧ ಉತ್ಸವಗಳು, ದೇವರಿಗೆ ವಿಶೇಷ ಪೂಜೆ, ಅಂಗಡಿಗಳಲ್ಲಿ ಭರ್ಜರಿ ವ್ಯಾಪಾರದಿಂದ ದೊಡ್ಡ ಹಬ್ಬದ ಸಂಭ್ರಮವೇ ಮನೆ ಮಾಡಿತ್ತು. ತಾಲೂಕಿನ ನಂದಿ, ಕೊತ್ತನೂರು, ಅಗಲಗುರ್ಕಿ ಸೇರಿ ಸುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.
ಬೆಳಗ್ಗೆ ಆಲಯದಲ್ಲಿ ವೀರಾಂಜನೇಯಸ್ವಾಮಿ,ಲಕ್ಷ್ಮೀನರಸಿಂಹಸ್ವಾಮಿ, ಗಣಪತಿಗೆ ವಿಶೇಷ ಅಭಿಷೇಕ, ಅಲಂಕಾರ ಕೈಗೊಳ್ಳಲಾಯಿತು. ಆದಿಚುಂಚನಗಿರಿ ಮಠದ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಠದ ಆವರಣದಲ್ಲಿ ಹನುಮನಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪರಿಷೆಗೆ ಚಾಲನೆ ನೀಡಿದರು. ಬಳಿಕ ದೇವರಿಗೆ ಅರ್ಪಿಸಿ ಪೂಜೆ ಸಲ್ಲಿಸಿದ ಸ್ವಲ್ಪ ಕಡಲೆಕಾಯನ್ನು ಶಾಸ್ತ್ರಕ್ಕೆ ಚೆಲ್ಲಲಾಯಿತು. ಬಳಿಕ ಭಕ್ತರಿಗೆ ವಿತರಿಸಲಾಯಿತು. ನೂಕು ನುಗ್ಗಲಾಟ ತಪ್ಪಿಸುವ ಉದ್ದೇಶದಿಂದ ಬ್ಯಾರಿಕೇಡ್ ಅಳವಡಿಸಲಾಗಿತ್ತು.
ಮಠದಿಂದ ಆಲಯದವರೆಗೂ ಉತ್ಸವ ಮೂರ್ತಿಯ ಮೆರವಣಿಗೆಯು ಕಳಶವನ್ನು ಹೊತ್ತ ಮಹಿಳೆಯರು, ಜಾನಪದ ಕಲಾವಿದರೊಂದಿಗೆ ನಡೆಯಿತು. ಭಜನಾ ತಂಡಗಳು ಆಲಯದ ಆವರಣದಲ್ಲಿ ಭಜನಾ ಕಾರ್ಯಕ್ರಮ ನಡೆಸಿಕೊಟ್ಟವು. ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಆಲಯದ ಆವರಣದಲ್ಲಿ ಬುರುಗು, ಬತಾಸು ಸೇರಿ ಸಿಹಿ ತಿಂಡಿ ತಿನಿಸುಗಳ ಅಂಗಡಿಗಳು ತಲೆ ಎತ್ತಿರಲಿಲ್ಲ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನರ ಸಂಖ್ಯೆಯು ಕಳೆದ ವರ್ಷಕ್ಕೆ ಹೋಲಿಸಿದರೆ ಕಡಿಮೆ ಇತ್ತು. ಬೆರಳೆಣಿಕೆಯಲ್ಲಿ ದೇವರ ಮುತ್ತಿನ ಪಲ್ಲಕ್ಕಿಯ ಉತ್ಸವದ ಟ್ರ್ಯಾಕ್ಟರ್‌ಗಳು ಆಗಮಿಸಿದ್ದವು.
ಆದಿಚುಂಚನಗಿರಿ ಶಾಖಾ ಮಠದ ಶ್ರೀಮಂಗಳನಾಥ ಸ್ವಾಮೀಜಿ, ಶ್ರೀ ಶೇಖರ್ ಸ್ವಾಮೀಜಿ, ವಿಧಾನಸಭಾ ಮಾಜಿ ಉಪ ಸಭಾಪತಿ ವಿ.ಆರ್.ಸುದರ್ಶನ್, ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ಮುಖಂಡರಾದ ಯು.ಬಿ.ವೆಂಕಟೇಶ್, ಜಿ.ಆರ್.ನಾರಾಯಣಸ್ವಾಮಿ, ಡಾ ಕೆ.ಪಿ.ಶ್ರೀನಿವಾಸ ಮೂರ್ತಿ, ಎಂ.ಪ್ರಕಾಶ್, ಬಿಜಿಎಸ್ ಆಡಳಿತ ಸಂಸ್ಥೆಯ ಸಿಇಒ ಡಾ ಎನ್.ಶಿವರಾಮರೆಡ್ಡಿ ಮತ್ತಿತರರು ಭಾಗವಹಿಸಿದ್ದರು.