ವೀರಶೈವರನ್ನು ಒಬಿಸಿಗೆ ಸೇರಿಸಲು ಆಗ್ರಹಿಸಿ ಮಹಾಸಭಾ ಪ್ರತಿಭಟನೆ

IMG_20220801_125549.jpg
Published on

ದಾವಣಗೆರೆ: ವೀರಶೈವ ಲಿಂಗಾಯತ ಸಮುದಾಯವನ್ನು ಕೇಂದ್ರ ಸರ್ಕಾರದ ಇತರೆ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರ್ಪಡೆ ಮಾಡುವ ಸಂಬಂಧ ಕೇಂದ್ರ ಸರ್ಕಾರಕ್ಕೆ ಶಿಾರಸು ಮಾಡುವಂತೆ ಆಗ್ರಹಿಸಿ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ ನೇತೃತ್ವದಲ್ಲಿ ನಗರದಲ್ಲಿ ಜಿಲ್ಲಾ ಘಟಕದ ಪದಾಧಿಕಾರಿಗಳು, ಸ್ವಾಮೀಜಿಗಳು ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿ ಎಸಿ ದುರ್ಗಾಶ್ರೀ ಅವರಿಗೆ ಮನವಿಪತ್ರ ಸಲ್ಲಿಸಿದರು.

ರಾಜ್ಯದಲ್ಲಿ 60 ವರ್ಷದಿಂದ ವೀರಶೈವ ಲಿಂಗಾಯತ ಸಮುದಾಯವನ್ನು ಇತರೆ ಹಿಂದುಳಿದ ವರ್ಗ ಎಂದು ಪರಿಗಣಿಸಲಾಗಿದ್ದರೂ ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಗೆ ಸೇರ್ಪಡೆಯಾಗಿಲ್ಲ. ಇದರಿಂದ ಕೇಂದ್ರ ಸರ್ಕಾರದ ಸೌಲಭ್ಯಗಳು ಸಿಗುತ್ತಿಲ್ಲ. ಕೃಷಿ, ಕೃಷಿ ಆಧಾರಿತ ಕಸುಬುಗಳನ್ನು ಅವಲಂಬಿಸಿರುವ ನಮ್ಮ ಸಮುದಾಯವು ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದೆ. ಕೇಂದ್ರ ಸರ್ಕಾರದ ಶೈಕ್ಷಣಿಕ ಸಂಸ್ಥೆಗಳಲ್ಲಿ ಹಾಗೂ ಕೇಂದ್ರದ ನೇಮಕಾತಿ ಅವಕಾಶಗಳಿಂದಲೂ ವಂಚಿತವಾಗಿದೆ. ಕರ್ನಾಟಕದ ಮೂರನೇ ಹಿಂದುಳಿದ ವರ್ಗಗಳ ಆಯೋಗದ ವರದಿಯಲ್ಲಿ, ಈಗಾಗಲೆ ಕೇಂದ್ರದ ಒಬಿಸಿ ಪಟ್ಟಿಯಲ್ಲಿರುವ ಸಮಾಜಗಳಿಗಿಂತಲೂ ನಮ್ಮ ಸಮುದಾಯ ಹಿಂದುಳಿದಿರುವುದು ಸ್ಪಷ್ಟವಾಗಿದೆ. ನಮ್ಮ ಸಮುದಾಯದಲ್ಲಿ ಶೇ.1.1ರಷ್ಟು ಕೃಷಿ ಕಾರ್ಮಿಕ ಕುಟುಂಬಗಳಿವೆ. ಶೇ.11.6ರಷ್ಟು ಭೂರಹಿತ, ನಿವೇಶನರಹಿತ ಕುಟುಂಬಗಳಿವೆ, ಶೇ.51.06ರಷ್ಟು ಅನಕ್ಷರತೆ ಪ್ರಮಾಣವಿದೆ. ಒಬಿಸಿ ಪಟ್ಟಿಗೆ ಸೇರಿಸಲು ಶಿಾರಸು ಮಾಡದಿದ್ದಲ್ಲಿ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ಮುಖಂಡರು ಎಚ್ಚರಿಸಿದರು. ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಚನ್ನಗಿರಿ ಹಿರೇಮಠದ ಕೇದಾರ ಶಿವಶಾಂತವೀರ ಸ್ವಾಮೀಜಿ, ತಾವರೆಕೆರೆ ಶಿಲಾಮಠದ ಸಿದ್ದಲಿಂಗ ಸ್ವಾಮೀಜಿ, ವೀರಶೈವ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಅಥಣಿ ವೀರಣ್ಣ, ಸಂದೀಪ್ ಅಣಬೇರು, ಜಿಲ್ಲಾಧ್ಯಕ್ಷ ದೇವರಮನೆ ಶಿವಕುಮಾರ್, ಜಿ. ಶಿವಯೋಗಪ್ಪ, ಶಿವಗಂಗಾ ಶ್ರೀನಿವಾಸ್, ಕಿರುವಾಡಿ ಸೋಮಶೇಖರ್, ನೀಲಗುಂದ ಜಯಮ್ಮ, ಶುಭಾ ಐನಳ್ಳಿ, ಶಶಿಕಲಾ, ರೇಖಾ, ಪುಷ್ಪಾ ವಾಲಿ ಇತರರಿದ್ದರು. --
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net