

ಚಿತ್ರದುರ್ಗ: ನಗರದ ವೀರಶೈವ ಅರ್ಬನ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ರಜತ ಮಹೋತ್ಸವದ ಅಂಗವಾಗಿ ಧವಳಗಿರಿ ಬಡಾವಣೆಯಲ್ಲಿ 3.50 ಕೋಟಿ ರೂ.ವೆಚ್ಚದಲ್ಲಿ ರಜತ ಮಹೋತ್ಸವ ಭವನ ನಿರ್ಮಿಸಲಾಗುವುದು ಎಂದು ಸೊಸೈಟಿ ಅಧ್ಯಕ್ಷ ಪಟೇಲ್ ಶಿವಕುಮಾರ್ ಹೇಳಿದರು.
ನಗರದ ಪಂಚಾಚಾರ‌್ಯ ಕಲ್ಯಾಣ ಮಂಟಪದಲ್ಲಿ ಶನಿವಾರ ಸೊಸೈಟಿ 24 ನೇ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಹಿರಿಯರು ಸಂಘಕ್ಕೆ ನೀಲಕಂಠೇಶ್ವರ ದೇವಾಲಯದ ಬಳಿ ಸೊಸೈಟಿಯ ಸ್ವಂತ ಕಟ್ಟಡ ನಿರ್ಮಿಸಿದ್ದಾರೆ. ಧವಳಗಿರಿ ಬಡಾವಣೆಯಲ್ಲಿ 60/180 ಅಡಿ ವಿಸ್ತೀರ್ಣದ ಕುಡಾ ನಿವೇಶವನ್ನು ಸೊಸೈಟಿ ಹೆಸರಿಗೆ ನೋಂದಾಯಿಸಿದ್ದಾರೆ ಎಂದರು.
ಸೊಸೈಟಿ 2025 ರ ಆಗಸ್ಟ್ 2 ರಂದು 25 ನೇ ವರ್ಷಕ್ಕೆ ಪಾದಾರ್ಪಣೆ ಮಾಡಲಿದ್ದು, ಸುಸಜ್ಜಿತ ಭವನದ ನಿರ್ಮಾಣಕ್ಕಾಗಿ ಈಗಾಗಲೇ ಶಂಕುಸ್ಥಾಪನೆ ಮಾಡಲಾಗಿದೆ. ಕಟ್ಟಡ ನಿಧಿ ಮತ್ತು 2024-25ನೇ ಸಾಲಿನ ಡಿವಿಡೆಂಟ್‌ನ್ನು ಕಟ್ಟಡಕ್ಕೆ ಬಳಸಲಾಗುವುದು. ಇದಕ್ಕೆ ಎಲ್ಲ ಸದಸ್ಯರ ಒಪ್ಪಿಗೆ ಬೇಕು. ದಾನಿಗಳು ದೇಣಿಗೆ ನೀಡಬೇಕೆಂದು ಮನವಿ ಮಾಡಿದರು.
ಸೊಸೈಟಿ ಸ್ಥಾಪನೆ ವರ್ಷದಿಂದ ಈವರೆಗೆ ನಿರಂತರ ‘ಎ’ ಶ್ರೇಣಿಯಲ್ಲಿ ಮುಂದುವರಿಯುತ್ತಿದೆ. 2024-25ನೇ ಸಾಲಿನಲ್ಲಿ 89.02 ಲಕ್ಷ ರೂ. ನಿವ್ವಳ ಲಾಭಗಳಿಸಿದೆ ಎಂದರು. ಕಳೆದ ಸಾಲಿನಲ್ಲಿ ಸೊಸೈಟಿಯಲ್ಲಿ 1721 ಸದಸ್ಯರಿದ್ದಾರೆ. 80.18 ಲಕ್ಷ ರೂ.ಷೇರು ಬಂಡವಾಳ, 368.04 ಲಕ್ಷ ರೂ.ಕಾಯ್ದಿಟ್ಟ ನಿಧಿ, 430.44 ಲಕ್ಷ ರೂ ಇತರ ನಿಧಿಗಳು. 1368.25 ಲಕ್ಷ ರೂ.ಠೇವಣಿ, 758.39 ಲಕ್ಷ ರೂ.ಹೂಡಿಕೆ, 1227.23 ಲಕ್ಷ ರೂ. ಸಾಲ ಹಾಗೂ 2131.51 ಲಕ್ಷ ರೂ.ದುಡಿಯುವ ಬಂಡವಾಳವನ್ನು ಸೊಸೈಟಿ ಹೊಂದಿದೆ ಎಂದು ತಿಳಿಸಿದರು.
ಷೇರುದಾರರಿಗೆ ಶೇ.20 ಡಿವಿಡೆಂಟ್ ವಿತರಿಸಲು ನಿರ್ಧರಿಸಲಾಗಿದೆ. ಪ್ರಸ್ತುತ ಬಂಗಾರ ಅಡಮಾನ ಸಾಲವನ್ನೂ ಪ್ರಾರಂಭಿಸಲಾಗಿದೆ. ಸಾಲ ವಸೂಲಿಯಲ್ಲಿ ಶೇ. 98 ಪ್ರಗತಿಯಾಗಿದೆ. ಹಲವರ ಖಾತೆಗಳಲ್ಲಿ ವಹಿವಾಟು ಸ್ಥಗಿತವಾಗಿದೆ. ಇದರಿಂದಾಗಿ ಮತದಾನದ ಹಕ್ಕು ಕಳೆದುಕೊಳ್ಳಬೇಕಾಗುತ್ತದೆ. ಹೀಗಾಗದಂತೆ ನೋಡಿಕೊಳ್ಳುವ ಹೊಣೆ ಸದಸ್ಯರ ಮೇಲಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸೊಸೈಟಿ ಉಪಾಧ್ಯಕ್ಷ ಜಿ.ಟಿ.ಸುರೇಶ್ ಸಿದ್ದಾಪುರ, ಸುಸಜ್ಜಿತ ರಜತ ಮಹೋತ್ಸವ ನಿರ್ಮಿಸುವ ಸಂಕಲ್ಪಕ್ಕೆ ಎಲ್ಲರ ಸಹಕಾರದ ಅಗತ್ಯವಿದೆ. ಕಳೆದ ಐದು ವರ್ಷಗಳಲ್ಲಿ ಸಂಘ ಆರ್ಥಿಕವಾಗಿ ಸೃಢವಾಗುತ್ತ ಸಾಗಿದೆ. 69,57,79,80 ಹಾಗೂ 89 ಲಕ್ಷ ರೂ.ಲಾಭಗಳಿಸಿದೆ ಎಂದರು.
ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇ.80 ಕ್ಕಿಂತ ಹೆಚ್ಚು ಅಂಕಗಳೊಂದಿಗೆ ಉತ್ತೀರ್ಣರಾದ ಸಂಘದ ಸದಸ್ಯರ ಮಕ್ಕಳನ್ನು ಸನ್ಮಾನಿಸಲಾಯಿತು.
ನಿರ್ದೇಶಕರಾದ ಎಸ್.ಪರಮೇಶ್ವರಪ್ಪ, ಎಸ್.ವಿ.ನಾಗರಾಜಪ್ಪ, ಕೆಇಬಿ ಷಣ್ಮುಖಪ್ಪ, ಡಿ.ಎಸ್.ಮಲ್ಲಿಕಾರ್ಜನಪ್ಪ, ಬಿ.ಎಂ.ಕರಿಬಸವಯ್ಯ, ಸಿ.ಚಂದ್ರಪ್ಪ, ಜಯಶ್ರೀ, ಆರ್.ಶೈಲಜಾ, ವ್ಯವಸ್ಥಾಪಕಿ ಕುಸುಮಾ ಜವಳಿ, ಅಕೌಂಟೆಂಟ್ ಎ.ಜೆ.ಚಂಪಾ ಇತರರಿದ್ದರು.