

ಮೈಸೂರು: ವೀರಶೈವ ಲಿಂಗಾಯತ ಸಮುದಾಯಕ್ಕೆ ಬಿಜೆಪಿ ಕೊಡುಗೆ ಏನು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.
ಲಕ್ಷ್ಮೀಪುರಂನ ಖಾಸಗಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಆಯೋಜಿಸಿದ್ದ ಕೃಷ್ಣರಾಜ ಕ್ಷೇತ್ರ ವ್ಯಾಪ್ತಿಯ ಶರಣರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಬಿಜೆಪಿ ಬಲಾಢ್ಯವಾಗಿ ಬೆಳೆಯಲು ವೀರಶೈವ ಲಿಂಗಾಯತರು ಶಕ್ತಿ ತುಂಬಿದರು. ಈ ಸಮುದಾಯದ ಬಿ.ಎಸ್.ಯಡಿಯೂರಪ್ಪ ಕಾರಣಕ್ಕೆ ಹೀಗೆ ಮಾಡಿದರು. ಆದರೀಗ ಬಿಎಸ್‌ವೈ ಅವರನ್ನೇ ಬಿಜೆಪಿ ಮೂಲೆಗುಂಪು ಮಾಡಿದೆ. ಸಿಎಂ ಆಗಿದ್ದಾಗ ಅವರಿಗೆ ಗೌರವ ಕೊಡಲಿಲ್ಲ. ದೆಹಲಿಗೆ ಭೇಟಿ ನೀಡಿದ್ದಾಗ ಸಮಯ ಕೊಡದೆ 3 ದಿನ ಕಾಯಿಸಿದ್ದರು. ಇದನ್ನು ಈ ಸಮುದಾಯದವರು ಅರ್ಥ ಮಾಡಿಕೊಳ್ಳಬೇಕು ಎಂದರು.
ಬಿಜೆಪಿ ನಾಯಕರ ಕೈಯಲ್ಲಿ ಏನೂ ಇಲ್ಲ. ಎಲ್ಲ ದೆಹಲಿಯಿಂದಲೇ ಬರಬೇಕು. ನರೇಂದ್ರ ಮೋದಿ, ಅಮಿತ್ ಷಾ ಮುಂದೆ ಕೈಕಟ್ಟಿ ನಿಂತು ಅವರು ಹೇಳಿದ್ದನ್ನು ಪಾಲನೆ ಮಾಡಬೇಕಾದ ಸ್ಥಿತಿ ಬಿಜೆಪಿಯ ರಾಜ್ಯ ನಾಯಕರಿಗೆ ಬಂದಿದೆ. ಬಿಎಸ್‌ವೈ, ಬಸವರಾಜ ಬೊಮ್ಮಾಯಿಗೆ ಗೌರವ ನೀಡುತ್ತಿಲ್ಲ. ರಾಜ್ಯ ನಾಯಕರು ತೀರ್ಮಾನ ತೆಗೆದುಕೊಳ್ಳುವ ಶಕ್ತಿಯನ್ನೇ ಕಳೆದುಕೊಂಡಿದ್ದಾರೆ ಎಂದು ಟೀಕಿಸಿದರು.
ಬಿಜೆಪಿ ನೇತೃತ್ವದ ಕೇಂದ್ರ, ರಾಜ್ಯ ಸರ್ಕಾರಗಳಿಂದ ರಾಜ್ಯಕ್ಕೆ ಏನೂ ಅನುಕೂಲವಾಗಿಲ್ಲ. ಉಭಯ ಸರ್ಕಾರದಿಂದ ರಾಜ್ಯಕ್ಕೆ ದೊರೆತ ಕೊಡುಗೆ ಏನು? ರಾಜ್ಯದ ಅನೇಕ ವಿಷಯಗಳ ಕುರಿತು ಮನ್ನಣೆ ಕೊಟ್ಟಿಲ್ಲ. ಆದ್ದರಿಂದ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ನಡವಳಿಕೆ ಕುರಿತು ಮತದಾರರು ಸೂಕ್ಷ್ಮವಾಗಿ ಗಮನಿಸಬೇಕು ಎಂದರು.
2006ರಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರದ ರಚನೆ, ಅಧಿಕಾರ ಹಸ್ತಾಂತರ ಮಾಡದಿದ್ದರಿಂದ ಈ ಸರ್ಕಾರದ ಪತನದ ಕುರಿತು ಲಿಂಗಾಯತ ಸಮುದಾಯಕ್ಕೆ ಸುದೀರ್ಘ ವಿವರಣೆ, ಸ್ಪಷ್ಟನೆ ನೀಡಿದ ಎಚ್‌ಡಿಕೆ ಅವರು, ಈ ವಿಷಯದಲ್ಲಿ ನನ್ನ ತಪ್ಪು ಇಲ್ಲ. ಬಿಜೆಪಿಗೆ ಅಧಿಕಾರ ಹಸ್ತಾಂತರಕ್ಕೆ ನಾನು ಸಿದ್ಧ ಇದ್ದೆ. ಆದರೆ, ಅದು ಆಗಲಿಲ್ಲ. ಈ ವಿಷಯದಲ್ಲಿ ನನ್ನನ್ನು ಬಲಿಪಶು ಮಾಡಲಾಯಿತು. ಆದರೀಗ ಇದೆಲ್ಲ ಮುಗಿದ ಅಧ್ಯಾಯ ಎಂದರು.
ಹಳೇ ಮೈಸೂರು ಪ್ರಾಂತ್ಯದ 6 ಜಿಲ್ಲೆಗಳ 34 ವಿಧಾನಸಭಾ ಕ್ಷೇತ್ರಗಳಲ್ಲಿ ಪಂಚರತ್ನ ಯಾತ್ರೆ ಮಾಡಿರುವೆ. ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಪಕ್ಷದ ಪರ ಪೂರಕ ವಾತಾವರಣವಿದೆ. ಈ ಭಾಗದ 33 ಕ್ಷೇತ್ರಗಳಲ್ಲಿ ಜೆಡಿಎಸ್ ಜಯ ದಾಖಲಿಸಲಿದೆ ಎಂಬ ವಿಶ್ವಾಸವಿದೆ ಎಂದರು.
ಈ ಹಿಂದೆ ಒಕ್ಕಲಿಗರು ಮತ್ತು ವೀರಶೈವ ಲಿಂಗಾಯತ ಸಮುದಾಯದವರು ಒಂದಾಗಿದ್ದರಿಂದ ಜನತಾದಳ ನೇತೃತ್ವದಲ್ಲಿ ಸರ್ಕಾರ ರಚನೆಯಾದ ಉದಾಹರಣೆ ರಾಜ್ಯದಲ್ಲಿ ಇದೆ. ಈ ಸಮೀಕರಣ ಮುಂದಿನ ಚುನಾವಣೆಯಲ್ಲಿ ಆಗಬೇಕು. ಅದಕ್ಕಾಗಿ ಎರಡೂ ಸಮುದಾಯದವರು ಸಹಕಾರ ನೀಡಬೇಕು ಎಂದು ಕೋರಿದರು.
ಶಾಸಕರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಅಶ್ವಿನ್‌ಕುಮಾರ್, ಎಂಎಲ್‌ಸಿ ಸಿ.ಎನ್.ಮಂಜೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಎನ್.ನರಸಿಂಹಸ್ವಾಮಿ, ನಗರಾಧ್ಯಕ್ಷ ಚೆಲುವೇಗೌಡ, ಕೆಆರ್ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಕೆ.ವಿ.ಮಲ್ಲೇಶ್ ಇತರರು ಇದ್ದರು
ಟಿಕೆಟ್ ಗೊಂದಲ ಇಲ್ಲ:ಎಚ್.ಡಿ.ಕೋಟೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆಯ್ಕೆ ಕುರಿತು ಗೊಂದಲ ಇಲ್ಲ. ಸ್ಥಳೀಯ ಮುಖಂಡರ ಸಭೆ ಕರೆದು ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. ಈಗಾಗಲೇ 93 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಅದರಲ್ಲೂ ವ್ಯತ್ಯಾಸವಾಗಿದ್ದರೆ ಬದಲಾವಣೆ ಮಾಡಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.