

ಹಾಸನ : ಹಾಸನದ ಜವನಹಳ್ಳಿ ಮಠಕ್ಕೆ ಬುಧವಾರ ಸಂಜೆ ಭೇಟಿ ನೀಡಿದ ಅರಣ್ಯ ಸಚಿವ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ಅವರನ್ನು ಮಠಾಧೀಶರಾದ ಶ್ರೀ ಸಂಗಮೇಶ್ವರ ಸ್ವಾಮೀಜಿ ಸಾನಿಧ್ಯದಲ್ಲಿ ಮಠದ ಭಕ್ತರು ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಈಶ್ವರ ಖಂಡ್ರೆ ಅವರು, ವೀರಶೈವ- ಲಿಂಗಾಯತ ಸಮಾಜ ಎರಡೂ ಒಂದೇ. ಸಮಾಜದ ಅಭಿವೃದ್ಧಿಗೆ ನಾವೆಲ್ಲ ಶ್ರಮಿಸಬೇಕು. ಯುವಕರು ಸಂಘಟಿತರಾಗಬೇಕು. ನಮ್ಮಲ್ಲಿ ಒಗ್ಗಟ್ಟಿನ ಅಗತ್ಯವಿದೆ. ರಾಜ್ಯದಲ್ಲಿ ವೀರಶೈವ ಲಿಂಗಾಯತ ಸಮಾಜ ಬಹಳ ದೊಡ್ಡ ಸಮಾಜ. ನಾವು ಶೈಕ್ಷಣಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ಬೆಳೆಯಬೇಕು. ಸ್ವಂತ ಉದ್ಯೋಗ ಮಾಡುವ ಮೂಲಕ ಇತರರಿಗೆ ಮಾದರಿಯಾಗಬೇಕು ಎಂದು ಕರೆ ನೀಡಿದರು.
ನಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡುವ ಮೂಲಕ ಅವರನ್ನು ವಿದ್ಯಾವಂತರನ್ನಾಗಿ ಮಾಡಬೇಕು. ನಮ್ಮ ಸಮಾಜದ ವಿದ್ಯಾರ್ಥಿಗಳಿಗೆ ಓಬಿಸಿ ಮೀಸಲಾತಿ ಸಿಗಬೇಕು. ಇದರಿಂದ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಹೆಚ್ಚಿನ ಪ್ರಯೋಜನ ಸಿಗಲಿದೆ. ಈ ವಿಚಾರದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ನಿರಂತರವಾಗಿ ಹೋರಾಟ ನಡೆಸುತ್ತಿದೆ ಎಂದ ಅವರು, ಸಮಾಜದ ಗೊಂದಲವಿರುವ ಒಳಪಂಗಡವನ್ನು ಒಟ್ಟಾಗಿ ತೆಗೆದುಕೊಂಡು ಹೋಗುವುದು ನಮ್ಮ ಗುರಿ ಎಂದರು.
ನಮ್ಮಲ್ಲಿ ಅನೇಕ ಮಠಗಳು ಮಕ್ಕಳಿಗೆ ಉಚಿತವಾಗಿ ವಿದ್ಯಾಭ್ಯಾಸ, ಊಟ, ವಸತಿ ನೀಡುತ್ತೀವೆ. ಮಠದಲ್ಲಿ ಧಾರ್ಮಿಕ ವಿಚಾರಗಳ ಪ್ರಚಾರ ಮಾಡುವ ಮೂಲಕ ಹಾಗೂ ನಮ್ಮ ಸಂಸ್ಕೃತಿ, ಸಂಸ್ಕಾರ, ಸಾಂಪ್ರದಾಯಿಕ ವಿಷಯ, ವಿಚಾರವಾಗಿ ಕೆಲಸ ಮಾಡುತ್ತೀವೆ ಹಾಗೂ ದಾಸೋಹ ಮಾಡುವ ಮೂಲಕ ಎಲ್ಲರ ಪ್ರೀತಿ, ಗೌರವಕ್ಕೂ ಪಾತ್ರವಾಗಿವೆ. ಇದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಉಪಾಧ್ಯಕ್ಷ ಬೆಮ್ಮತ್ತಿ ಸುರೇಶ್, ಹಾಸನ ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್, ಕಾರ್ಯದರ್ಶಿ ಶೋಭನ್ ಬಾಬು, ಜವನಹಳ್ಳಿ ಮಠದ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಬಿ.ವಿ. ಉಮೇಶ್, ವಿಶ್ವ ವೀರಶೈವ ಲಿಂಗಾಯತ ಸಮಿತಿ ಜಿಲ್ಲಾಧ್ಯಕ್ಷ ಕುಮಾರಸ್ವಾಮಿ. ಸಮಿತಿಯ ಮುಖಂಡರಾದ ಬ್ಯಾಂಕ್ ಪರಮಶಿವಯ್ಯ, ಪುನೀತ್ ಪಟೇಲ್, ಗ್ರಾನೆಟ್ ರಾಜಶೇಖರ್, ಹೇಮಂತ್ ಕುಮಾರ್ ಹಾಗೂ ವೀರಶೈವ ಲಿಂಗಾಯತ ಸಮಾಜದ ಮುಖಂಡರು ಭಾಗವಹಿಸಿದ್ದರು.