ವೀರಶೈವ, ಲಿಂಗಾಯತ ಬಗ್ಗೆ ಗೊಂದಲ ಬೇಡ

MBL 2
Published on

ಮುದ್ದೇಬಿಹಾಳ: ವಿದೇಶಗಳಲ್ಲಿ ಬುದ್ಧ, ಗಾಂಧಿ, ಅಂಬೇಡ್ಕರ್, ಬಸವಣ್ಣನ ಕುರಿತು ಮಾತನಾಡುವ ದೇಶದ ಹಿಂದಿನ, ಈಗಿನ ಪ್ರಧಾನಮಂತ್ರಿಗಳು ದೇಶದೊಳಗೆ ವೀರಶೈವ ಅಮರ ಗಣಗಳು, ಲಿಂಗಾಯತ ಪರಂಪರೆಯ ಶರಣ ತತ್ವಗಳನ್ನು ಅಳವಡಿಸಿಕೊಂಡು ಉಚ್ಛ, ನೀಚ ಎನ್ನದೇ ಎಲ್ಲರೂ ಸಮಾನರೆನ್ನುವ ಸಂದೇಶ ನೀಡುವಂತಾಗಬೇಕೆಂದು ಅಖಿಲ ಭಾರತ ವೀರಶೈವ ಮಹಾಸಭಾದ ಕರ್ನಾಟಕ ರಾಜ್ಯಾಧ್ಯಕ್ಷ, ನಿವೃತ್ತ ಐಪಿಎಸ್ ಅಧಿಕಾರಿ ಶಂಕರ ಬಿದರಿ ಹೇಳಿದರು.

ಇಲ್ಲಿನ ಟಾಪ್ ಇನ್ ಟೌನ್ ಂಕ್ಷನ್ ಹಾಲ್‌ನಲ್ಲಿ ಮಹಾಸಭಾದ ತಾಲೂಕು ಘಟಕದಿಂದ ಭಾನುವಾರ ಏರ್ಪಡಿಸಿದ್ದ ಅಭಿನಂದನೆ, ತಾಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ, ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ವೀರಶೈವ, ಲಿಂಗಾಯತ ಎರಡೂ ಹಿಂದೆಯೂ ಒಂದಾಗಿದ್ದವು, ಈಗಲೂ ಇವೆ, ಮುಂದೆಯೂ ಇರುತ್ತವೆ. ಈ ಬಗ್ಗೆ ಯಾರೂ ಗೊಂದಲ ಸೃಷ್ಟಿಸಬಾರದು. ಕಾಶಿ, ರಂಭಾಪುರಿ ಜಗದ್ಗುರುಗಳ, ಸಿದ್ಧಗಂಗೆಯ ಶಿವಕುಮಾರ ಸ್ವಾಮೀಜಿಯವರ ಮಾತುಗಳಂತೆ ಇವೆರಡೂ ಒಂದೇ ಆಗಿವೆ. ಸಮುದಾಯದ ಒಳಪಂಗಡಗಳು ಒಗ್ಗಟ್ಟಾದರೆ ಮಾತ್ರ ನಮ್ಮ ಧರ್ಮ ರಕ್ಷಿಸಿಕೊಳ್ಳುವುದು, ನ್ಯಾಯ ಸಿಗುವುದು ಸಾಧ್ಯ. ಬಹುದೊಡ್ಡ ಸಮುದಾಯದ ಸಾಮಾಜಿಕ, ಆರ್ಥಿಕ, ರಾಜಕೀಯ ಸ್ಥಾನಮಾನದ ಅಭಿವೃದ್ಧಿಗೆ ಸಂಘಟನೆ, ಸಂಪನ್ಮೂಲ, ಒಗ್ಗಟ್ಟಿನ ಕೊರತೆ ನಿವಾರಿಸಿಕೊಂಡು ನಾವೆಲ್ಲರೂ ಒಗ್ಗೂಡಿ ಹೋಗಬೇಕಿದೆ ಎಂದರು.

ರಾಷ್ಟ್ರೀಯ ಉಪಾಧ್ಯಕ್ಷರಾದ ಸಿದ್ರಾಮಪ್ಪ ಉಪ್ಪಿನ, ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷ ವಿ.ಸಿ. ನಾಗಠಾಣ, ಮುಖಂಡ ಸಿದ್ದರಾಜ ಹೊಳಿ ಮಾತನಾಡಿದರು.

ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಡಾ. ಮುಕ್ತಾಂಬಾ ಬಿ., ಉಮಾದೇವಿ ಬಿದರಿ, ರಾಜ್ಯ ಯುವ ಘಟಕದ ನಿರ್ದೇಶಕ ಮಲ್ಲನಗೌಡ ಬಿರಾದಾರ(ಕುಂಟೋಜಿ), ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ವಿದ್ಯಾವತಿ ತಡಸದ ವೇದಿಕೆಯಲ್ಲಿದ್ದರು.

ಅವಿಭಕ್ತ ಕುಟುಂಬದ ಮುಖ್ಯಸ್ಥ ಆಲೂರಿನ ಬಸವಂತ್ರಾಯ ಗೂಳಿ, ಬಸರಕೋಡದ ಕೃಷಿಕ ಶರಣಪ್ಪ ಹೊಳಿ, ಜಟ್ಟಗಿ ತಾಂಡಾದ ಶಿಕ್ಷಕ ಬಸವರಾಜ ಲಮಾಣಿ, ನಿವೃತ್ತ ಸೈನಿಕ ಬಸವರಾಜ ಹಡಪದ, ಹಣ್ಣಿನ ವ್ಯಾಪಾರಿ ಶರಣಪ್ಪ ಚಲವಾದಿ ಅವರನ್ನು ಸನ್ಮಾನಿಸಲಾಯಿತು. 50ಕ್ಕೂ ಹೆಚ್ಚು ಉಪಪಂಗಡ, ಇತರೆ ಸಮುದಾಯಗಳ ಅಧ್ಯಕ್ಷರನ್ನು ವೇದಿಕೆಯಲ್ಲಿ ಗೌರವಿಸಿ ಒಗ್ಗಟ್ಟಿನ ಸಂದೇಶ ಸಾರಲಾಯಿತು.

ಹಿಂದಿನ ಅಧ್ಯಕ್ಷ ಬಾಪೂಗೌಡ ಪಾಟೀಲ ಅವರು ನೂತನ ಅಧ್ಯಕ್ಷ ವೆಂಕನಗೌಡ ಪಾಟೀಲ ಅವರಿಗೆ ಮಹಾಸಭಾದ ಧ್ವಜ ಹಸ್ತಾಂತರಿಸಿದರು. ವೆಂಕನಗೌಡರೊಟ್ಟಿಗೆ ಉಪಾಧ್ಯಕ್ಷ ಸಂಗಣ್ಣ ಕಂಚ್ಯಾಣಿ, ಪ್ರಧಾನ ಕಾರ್ಯದರ್ಶಿ ಎಸ್.ಎ. ಬೇವಿನಗಿಡದ, ಕೋಶಾಧ್ಯಕ್ಷ ಸಂಗಣ್ಣ ಕಟ್ಟಿ, ಮಹಿಳಾ ಘಟಕ, ಯುವ ಘಟಕದ ಪದಾಧಿಕಾರಿಗಳು ಪದಗ್ರಹಣ ಮಾಡಿದರು.

ಮಹಾಸಭಾದ ಮಾಜಿ ಅಧ್ಯಕ್ಷ ಎಸ್.ಬಿ. ಕನ್ನೂರ, ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ಪ್ರೊ. ಬಿ.ಎಂ.ಹಿರೇಮಠ, ಎಂ.ಬಿ. ನಾವದಗಿ, ಬಸವರಾಜ ಮೋಟಗಿ, ಸಂಗೀತಾ ನಾಡಗೌಡ, ಕಾಶಿಬಾಯಿ ರಾಂಪೂರ, ಕೆ.ಎಸ್. ಬಿರಾದಾರ, ಅಶೋಕ ನಾಡಗೌಡ, ಪ್ರಭುದೇವ ಕಲಬುರ್ಗಿ, ಆರ್.ಬಿ. ಪಾಟೀಲ, ಸಿದ್ದರಾಜ ಹೊಳಿ, ಬಸನಗೌಡ ಪಾಟೀಲ ಸರೂರ, ಅಶೋಕ ಚಟ್ಟೇರ, ಶಂಕರಗೌಡ ರಾಯಗೊಂಡ, ಶರಣಗೌಡ ಬೂದಿಹಾಳ, ರವಿ ತಡಸದ ಇತರರಿದ್ದರು.

ಸಂಗಮೇಶ ಶಿವಣಗಿ ತಂಡ ಪ್ರಾರ್ಥಿಸಿತು. ವಿದ್ಯಾವತಿ ತಡಸದ, ಹೇಮಾ ಬಿರಾದಾರ, ರವೀಂದ್ರ ನಂದೆಪ್ಪನವರ್ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net