ವೀರಶೈವ-ಲಿಂಗಾಯತ ಎಂದೇ ನಮೂದಿಸಿ - ಮಹಾಂತೇಶ ಕವಟಗಿಮಠ

KAVATAGIMATH1
Published on

ನಿಪ್ಪಾಣಿ: ಧರ್ಮದ ಕಾಲಂ 8ರಲ್ಲಿ ಹಿಂದು, ಜಾತಿ ಕಾಲಂ 9ರಲ್ಲಿ ವೀರಶೈವ ಲಿಂಗಾಯತ (ಎ-1524) ಮತ್ತು ಉಪಜಾತಿ ಕಾಲಂ 10ರಲ್ಲಿ ಅವರವರ ಉಪಜಾತಿಗಳ ವಿವರ ನಮೂದಿಸಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಹೇಳಿದರು.

ಇಲ್ಲಿನ ವಿಎಸ್‌ಎಂ ಸೋಮಶೇಖರ ಆರ್.ಕೋಠಿವಾಲೆ ತಾಂತ್ರಿಕ ಮಹಾವಿದ್ಯಾಲಯದ ಎಂಬಿಎ, ಎಂಸಿಎ ಸ್ನಾತಕೋತ್ತರ ವಿಭಾಗದ ಕಟ್ಟಡದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾನೂನು ಪ್ರಕಾರ ವೀರಶೈವ ಲಿಂಗಾಯತ ಜನಾಂಗ ಹಿಂದು ಧರ್ಮದ ಭಾಗವಾಗಿದೆ. ಮಹಾತ್ಮ ಬಸವೇಶ್ವರರು ಮತ್ತು ಅವರ ಸಮಕಾಲೀನ ಶರಣರು ಪ್ರತಿಪಾದಿಸಿದ ಸಮಾನತೆಯ ತತ್ತ್ವ ಒಪ್ಪಿ ಹಿಂದು ಧರ್ಮದ ಎಲ್ಲ ಸಮುದಾಯದ ಜನರು ವೀರಶೈವ ಲಿಂಗಾಯತರಾಗಿದ್ದಾರೆ ಎಂದರು.

ವೀರಶೈವ ಲಿಂಗಾಯತಕ್ಕೆ ಒಕ್ಕೂಟ ಸರ್ಕಾರದವರು ಪ್ರತ್ಯೇಕ ಧರ್ಮ ಎಂಬ ಮಾನ್ಯತೆ ನೀಡಿಲ್ಲ. ಆದರೆ, ವೀರಶೈವ ಲಿಂಗಾಯತ ಒಂದು ಜಾತಿಯಲ್ಲ. ಅದನ್ನು ಹಿಂದು ಧರ್ಮದ ಒಂದು ಪರಂಪರೆ/ಸಂಪ್ರದಾಯ/ಪಂಥ ಎಂದು ಪರಿಗಣಿಸುವುದು ಸರಿಯಾದ ಕ್ರಮವಾಗಿದೆ. ಈಚೆಗೆ ದಾವಣಗೆರೆಯಲ್ಲಿ ನಡೆದ ಐತಿಹಾಸಿಕ ಸಭೆಯಲ್ಲಿ ವೀರಶೈವ ಲಿಂಗಾಯತ ಎಂದೆಂದೂ ಒಂದೇ ಎಂಬ ಅಖಿಲ ಭಾರತ ವೀರಶೈವ ಮಹಾಸಭೆಯ ಘೋಷಣೆಯಾಗಿದೆ ಎಂದರು.

ಸ್ಥಳೀಯ ವಿದ್ಯಾ ಸಂವರ್ಧಕ ಮಂಡಳದ ಚೇರ್ಮನ್ ಚಂದ್ರಕಾಂತ ಕೋಠಿವಾಲೆ, ವೈಸ್ ಚೇರ್ಮನ್ ಪಪ್ಪು ಪಾಟೀಲ, ಕಾರ್ಯದರ್ಶಿ ಸಮೀರ್ ಬಾಗೇವಾಡಿ, ಸಂಚಾಲಕ ಸಂಜಯ ಮೊಳವಾಡೆ, ರಾವಸಾಹೇಬ ಪಾಟೀಲ, ಆನಂದ ಗಿಂಡೆ, ಸಚಿನ ಹಾಲಪ್ನವರ, ವಕೀಲ ಸಂಜಯ ಶಿಂತ್ರೆ, ಸುಕುಮಾರ ಪಾಟೀಲ-ಬುಧಿಹಾಳಕರ, ಡಾ.ಎಸ್.ಆರ್.ಪಾಟೀ ಲ, ಶ್ರೀಕಾಂತ ಪಣದೆ, ಹರಿಶ್ಚಂದ್ರ ಶಾಂಡಗೆ, ವೈ.ಎಸ್.ಪಾಟೀಲ, ಡಾ.ಸಿದ್ಧಗೌಡ ಪಾಟೀಲ, ಡಾ.ಉಮೇಶ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net