

ಬಳ್ಳಾರಿ : ಜಾತಿ-ಧರ್ಮ ಎನ್ನದೆ ಎಲ್ಲ ಸಮುದಾಯಗಳಿಗೆ ಅನ್ನ, ಆಶ್ರಯ ಹಾಗೂ ಅಕ್ಷರ ನೀಡಿ ಸಲುಹಿರುವ ವೀರಶೈವ ಮಠಗಳು, ಕರುನಾಡಿನಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿವೆ ಎಂದು ಎಮ್ಮಿಗನೂರು ಮಹಾಂತ ಮಠದ ಶ್ರೀವಾಮದೇವ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಇಲ್ಲಿನ ಬಸವಭವನದಲ್ಲಿ ವೀರಶೈವ ಸೇವಾ ಸಮಿತಿ ಟ್ರಸ್ಟ್ ವತಿಯಿಂದ ಭಾನುವಾರ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಶೈಕ್ಷಣಿಕ ಕ್ಷೇತ್ರಕ್ಕೆ ಕರ್ನಾಟಕದ ಮಠ-ಮಾನ್ಯಗಳು ನೀಡಿದ ಕೊಡುಗೆ ಅಪಾರ. ಮಕ್ಕಳಿಗೆ ನೈತಿಕ ಶಿಕ್ಷಣ ನೀಡುವ ಕಾಳಜಿಯನ್ನು ಯಾರೂ ತೆಗೆದುಕೊಳ್ಳುತ್ತಿಲ್ಲ. ಹೀಗಾಗಿಯೇ ವಿದ್ಯಾರ್ಥಿಗಳಲ್ಲಿ ಆಘಾತಕಾರಿ ಚಟುವಟಿಕೆಗಳು ನಡೆಯುತ್ತಿರುವ ಕುರಿತು ವರದಿಯಾಗುತ್ತಿರುವುದನ್ನು ಸಮಾಜದಲ್ಲಿ ನೋಡುತ್ತಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು. ಮಕ್ಕಳಿಗೆ ಭೌತಿಕ ಶಿಕ್ಷಣದ ಜತೆಯಲ್ಲಿ ಆಧ್ಯಾತ್ಮಿಕ ಹಾಗೂ ನೈತಿಕ ಶಿಕ್ಷಣ ನೀಡುವ ಅಗತ್ಯವಿದೆ ಸಲಹೆ ನೀಡಿದರು.
ಎಸ್ಸೆಸ್ಸೆಲ್ಸಿಯಲ್ಲಿ ಶೇ.80 ಹಾಗೂ ಪಿಯುಸಿಯಲ್ಲಿ ಶೇ.85ರಷ್ಟು ಅಂಕ ಪಡೆದ ವೀರಶೈವ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.