ವೀರಶೈವ ಮಠಗಳ ಕೊಡುಗೆ ಅನನ್ಯ

MYS4PYP1
Published on

ರಾವಂದೂರು: ಪ್ರೀತಿ ಮತ್ತು ವಿಶ್ವಾಸದಿಂದ ಎಲ್ಲ ಸಮುದಾಯಗಳನ್ನು ಒಟ್ಟಿಗೆ ಕೊಂಡೊಯ್ಯುವ ಶಕ್ತಿ ಇರುವುದು ವೀರಶೈವ ಸಮಾಜಕ್ಕೆ ಮಾತ್ರ ಎಂದು ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ತಿಳಿಸಿದರು.
ಪಿರಿಯಾಪಟ್ಟಣದ ಸಾಯಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಜ್ಯದಲ್ಲಿ ವೀರಶೈವ ಮಠಗಳು ತಮ್ಮದೇ ಆದ ಕೊಡುಗೆ ನೀಡಿವೆ. ಈ ಪೈಕಿ ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಸೇವೆ ಅವಿಸ್ಮರಣೀಯ. ಈ ಮಠದಲ್ಲಿ ಕಲಿತ ಸಾವಿರಾರು ಬಡ ಮಕ್ಕಳು ಇಂದು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಅಧಿಕಾರಿಗಳಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಶಿಕ್ಷಣಕ್ಕೆ ಮಠದ ಕೊಡುಗೆ ಅಪಾರ ಎಂದರು.
ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಮಹದೇವ್‌ಪ್ರಕಾಶ್ ಮಾತನಾಡಿ, ವೀರಶೈವ ಲಿಂಗಾಯತ ಧರ್ಮ ಇಷ್ಟಲಿಂಗದ ಪರಿಕಲ್ಪನೆ ಮೂಲಕ ಎಲ್ಲ ಜನಾಂಗವನ್ನು ಒಗ್ಗೂಡಿಸುವ ಕೆಲಸ ಮಾಡಿದೆ ಎಂದರು.
ತುಮಕೂರು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಮನಷ್ಯನಿಗೆ ಮನಸ್ಸು ಶುದ್ಧ್ದವಾಗಿರಬೇಕು. ಆಗ ಮಾತ್ರ ನಾವು ಮಾಡುವ ಕೆಲಸಗಳಲ್ಲಿ ಯಶಸ್ಸು ದೊರೆಯುತ್ತದೆ. ವೀರಶೈವ ಸಮಾಜದ ಜನರು ಆದರ್ಶವಾಗಿ ಬದುಕು ನಡೆಸಬೇಕು. ಎಲ್ಲರೂ ಕಾಯಕದ ಮೇಲೆ ನಂಬಿಕೆ ಇಡಬೇಕು. ಕಾಯಕವನ್ನು ತ್ರಿಕರಣ ಶುದ್ಧಿಯಿಂದ ಮಾಡಬೇಕು. ನಿರಂತರ ಪ್ರಯತ್ನ ಮತ್ತು ಪರಿಶ್ರಮದಿಂದ ಎಲ್ಲವನ್ನೂ ಗಳಿಸಬಹುದು ಎಂದು ತಿಳಿಸಿದರು.
ಬೆಟ್ಟದಪುರ ಮಠದ ಶ್ರೀ ಚನ್ನಬಸವ ದೇಶಿಕೇಂದ್ರ ಸ್ವಾಮೀಜಿ, ರಾವಂದೂರು ಮುರುಘಾ ಮಠದ ಮೋಕ್ಷಪತಿ ಸ್ವಾಮೀಜಿ, ತಾಲೂಕು ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಂ.ಮಲ್ಲೇಶ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಶಿವಯೋಗ ಮಾತನಾಡಿದರು.
ಕಾರ್ಯಕ್ರಮದಲ್ಲಿ ನಿವೃತ್ತ ನೌಕರರು ಮತ್ತು ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸರ್ಕಾರಿ ವೀರಶೈವ ನೌಕರರ ಸಂಘ ಮತ್ತು ಡಾ.ಶಿವಕುಮಾರ ಸ್ವಾಮೀಜಿ ಅಭಿಮಾನಿ ಬಳಗ, ಶರಣ ಸಾಹಿತ್ಯ ಪರಿಷತ್‌ನ ದಿನದರ್ಶಿಕೆ ಬಿಡುಗಡೆಗೊಳಿಸಲಾಯಿತು. ತಾಲೂಕು ಬಿ.ವೈ.ವಿಜಯೇಂದ್ರ ಅಭಿಮಾನಿಗಳ ಬಳಗವನ್ನು ಉದ್ಘಾಟಿಸಲಾಯಿತು.
ದಿಂಡಗಾಡು ಮಠದ ಶ್ರೀ ಅಪ್ಪಾಜಿ ಸ್ವಾಮೀಜಿ, ಸೋಮವಾರಪೇಟೆ ಕಿರ‌್ಲಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ, ಮಾಜಿ ಶಾಸಕ ಎಚ್.ಸಿ.ಬಸವರಾಜು, ತಾಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಕೆ.ಸಿ.ಚಂದ್ರಶೇಖರಯ್ಯ, ಬಿಇಒ ರಾಮಾರಾಧ್ಯ, ಕೃಷಿ ಸಹಾಯಕ ನಿರ್ದೇಶಕ ಶಿವಕುಮಾರ್, ಮೈಸೂರು ಜಿಲ್ಲಾ ವೀರಶೈವ ನೌಕರರ ಸಂಘದ ಅಧ್ಯಕ್ಷ ಎಂ.ಕೆ.ಸ್ವಾಮಿ, ಪ್ರಧಾನ ಕಾರ್ಯದರ್ಶಿ ಕೆಂಪಣ್ಣ, ತಂಬಾಕು ಮಂಡಳಿ ಪ್ರಾದೇಶಿಕ ವ್ಯವಸ್ಥಾಪಕ ಎಸ್.ಎಸ್.ಪಾಟೀಲ್, ತಾಲೂಕು ಸಂಘದ ಉಪಾಧ್ಯಕ್ಷರಾದ ಧರ್ಮಪಾಲ್, ಅನಿತಾ ಶೇಖರ್, ಬೇಬಿ ಸಾಂಸ್ಕೃತಿಕ ಕಾರ್ಯದರ್ಶಿ ಗುರುಸ್ವಾಮಾರಾಧ್ಯ, ಪ್ರಧಾನ ಕಾರ್ಯದಶಿ ಎನ್.ಎಸ್.ಶಿವಪ್ಪ, ಖಜಾಂಚಿ ಕೆ.ಎಸ್.ಮಹಾದೇವಪ್ಪ, ನಾಗಶೆಟ್ಟಿ, ಹೆಜ್ಜೂರು ಸೋಮಶೇಖರ್, ಶಂಭುಲಿಂಗಪ್ಪ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net