ವೀರಶೈವ, ಆರಾಧ್ಯ ಸಮುದಾಯದವರಿಂದ ತಂಪಿನ ಪೂಜೆ

IMG_20250705_142225
Published on

ಎಚ್.ಡಿ.ಕೋಟೆ: ಪಟ್ಟಣದ ಶ್ರೀ ವಾರಾಹಿ ಮತ್ತು ಶ್ರೀ ಮಾರಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ಕೊಂಡೋತ್ಸವ ಜರುಗಿದ ಬಳಿಕ ವಿವಿಧ ಸಮುದಾಯದವರು ತಂಪಿನ ಪೂಜೆಯನ್ನು ನೆರವೇರಿಸುತ್ತಿದ್ದು, ಅದರಂತೆ ಪಟ್ಟಣದ ವೀರಶೈವ ಮತ್ತು ಆರಾಧ್ಯ ಸಮುದಾಯದವರಿಂದ ತಂಪಿನ ಪೂಜೆ ನೀಡಲಾಯಿತು.

ಪಟ್ಟಣ ಸೇರಿದಂತೆ ವಡ್ಡರಗುಡಿ, ಚಾಕಹಳ್ಳಿ ಗ್ರಾಮಗಳಿಂದ ಆಗಮಿಸಿದ್ದ ಸಮುದಾಯದವರು ಪಟ್ಟಣಕ್ಕೆ ಆಗಮಿಸಿ ಪಟ್ಟಣದಲ್ಲಿರುವ ಗಣೇಶ ದೇವಾಲಯದಿಂದ ಮಂಗಳವಾದ್ಯ, ವೀರಗಾಸೆಯೊಂದಿಗೆ ಮೆರವಣಿಗೆ ಹೊರಟು ಬಸ್ ನಿಲ್ದಾಣದ ಮೂಲಕ ತೆರಳಿ ಮೊದಲನೇ ಮುಖ್ಯ ರಸ್ತೆಯಲ್ಲಿರುವ ಮಾರಮ್ಮ ದೇವಾಲಯಕ್ಕೆ ತಲುಪಿದರು. ಆ ಬಳಿಕ ದೇವಾಲಯದಲ್ಲಿ ಪೂಜೆ ನೆರವೇರಿಸಿದರು. ನಂತರ ಪ್ರಸಾದ ವಿನಿಯೋಗ ಹಮ್ಮಿಕೊಳ್ಳಲಾಗಿತ್ತು.

ತಂಪಿನ ಪೂಜೆಯ ವಿಶೇಷ:

ಮಹಿಳೆಯರು ಅಕ್ಕಿ ತಂಬಿಟ್ಟು, ಎಳ್ಳು ತಂಬಿಟ್ಟು, ಗಣಗಲೆ ಹೂವಿನಿಂದ ಮಾಡಿದ ಹಾರ, ಬಣ್ಣ ಬಣ್ಣದ ಹೂಗಳನ್ನು ತಂದು ತಾಲೂಕಿನಲ್ಲಿ ಮಳೆ ಬೆಳೆ ಉತ್ತಮವಾಗಿರಲಿ, ಎಲ್ಲರೂ ಸೌಖ್ಯದಿಂದ ಇರಲಿ ಎಂದು ಪೂಜೆ ಸಲ್ಲಿಸಿದರು.

ನಂತರ ದೇವಾಲಯದ ಬಳಿ ಪೂಜೆ ಸಲ್ಲಿಸಿ, ತಂಬಿಟ್ಟನ್ನು ನೆರೆಯವರಿಗೆ ಹಂಚಿದರು. ಮೆರವಣಿಗೆಯಲ್ಲಿ ಬಸವಣ್ಣ, ಈಶ್ವರ, ಗಣೇಶ, ಸುಬ್ರಹ್ಮಣ್ಯ, ಆಂಜನೇಯ, ಲಕ್ಷ್ಮೀ, ಪಾರ್ವತಿ, ಸರಸ್ವತಿ, ಚಾಮುಂಡೇಶ್ವರಿ ವೇಷಭೂಷಣಧಾರಿಗಳಾದ ಮಕ್ಕಳು ಗಮನ ಸೆಳೆದರು.

ಮುಖಂಡರಾದ ವೈ.ಟಿ.ಮಹೇಶ್, ಸಿ.ಎನ್.ನಾಗಣ್ಣ, ವೀರಪ್ಪ, ಶಿವರಾಜಪ್ಪ, ಉದಯಕುಮಾರ್, ನಾಗಭೂಷಣಾರಾಧ್ಯ, ಚಂದ್ರಶೇಖಾರಾಧ್ಯ, ನಿಜಗುಣ, ಉಮೇಶ್, ಸ್ವಾಮಿ, ಪ್ರಕಾಶ್, ಶಿವಕುಮಾರ್, ಮಹೇಶ್, ರೇವಣ್ಣ, ರಾಜಣ್ಣ ಆನಂದ, ಆದರ್ಶ, ರಘು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net