ವೀರವನಿತೆ ಒನಕೆ ಓಬವ್ವ ಜಯಂತಿ 11ಕ್ಕೆ

Obbavva
Published on

ಚಿತ್ರದುರ್ಗ: ವೀರವನಿತೆ ಒನಕೆ ಓಬವ್ವ ಜಯಂತಿಯನ್ನು ನ. 11ರಂದು ನಗರದಲ್ಲಿ ಅದ್ದೂರಿಯಾಗಿ ಆಚರಿಸಲು ಭಾನುವಾರ ನಡೆದ ಛಲವಾದಿ ಸಮುದಾಯದ ಸಭೆಯಲ್ಲಿ ಮುಖಂಡರು ತೀರ್ಮಾನಿಸಿದರು.

ಸಮಾಜದ ಮುಖಂಡ ಎಚ್.ಸಿ.ನಿರಂಜನಮೂರ್ತಿ ಮಾತನಾಡಿ, ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆಯಿಂದ ಜಯಂತಿ ಹಮ್ಮಿಕೊಂಡಿದ್ದು ಎಲ್ಲ ಸಮುದಾಯದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಿಶೇಷವಾಗಿ ಆಚರಿಸೋಣ ಎಂದರು.

ಅಂದು ಬೆಳಗ್ಗೆ 8.30ಕ್ಕೆ ಹೊಳಲ್ಕೆರೆ ರಸ್ತೆಯ ಒನಕೆ ಓಬವ್ವ ದೇಗುಲದಿಂದ ಪುಷ್ಪಾಲಂಕೃತ ಸಾರೋಟಿನಲ್ಲಿ ಓಬವ್ವಳ

ಭಾವಚಿತ್ರದೊಂದಿಗೆ ವಿವಿಧ ಕಲಾತಂಡಗಳ ಮೆರವಣಿಗೆ ಆಯೋಜಿಸಲಾಗಿದೆ. ಬಳಿಕ ತರಾಸು ರಂಗಮಂದಿರದಲ್ಲಿ 11ಕ್ಕೆ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

ಛಲವಾದಿ ಸಮುದಾಯ ಕೈಜೋಡಿಸಿದರೆ, ಊರಿನ ಹಬ್ಬದಂತೆ ಆಚರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುವುದು. ಓಬವ್ವಳ ಸಾಹಸ, ದಿಟ್ಟತನ ಮುಂದಿನ ಪೀಳಿಗೆಗೆ ಪರಿಚಯಿಸಲು ಸಹಕಾರಿಯಾಗಲಿದೆ ಎಂದು ಸಲಹೆ ನೀಡಿದರು.

ಡಿಡಿಪಿಐ ಮಂಜುನಾಥ್ ಮಾತನಾಡಿ, ಓಬವ್ವಳ ಜಯಂತಿ ಮೂಲಕ ಛಲವಾದಿ ಸಮುದಾಯ ಸಂಘಟಿತರಾಗಬೇಕಿದೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ಸಿಗೆ ಸಹಕರಿಸಿ ಎಂದು ಮನವಿ ಮಾಡಿದರು.

ಕೃಷಿ ಇಲಾಖೆ ನಿವೃತ್ತ ಉಪನಿರ್ದೇಶಕ ವೆಂಕಟೇಶ್ ಮಾತನಾಡಿ, ಜಯಂತಿಯಲ್ಲಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳು, ಸಾಧಕರನ್ನು ಗುರುತಿಸಿ, ಸನ್ಮಾನಿಸೋಣ ಎಂದು ಸಲಹೆ ನೀಡಿದರು.

ಪಿವಿಎಸ್ ಆಸ್ಪತ್ರೆಯ ಡಾ.ಪಿ.ವಿ.ಶ್ರೀಧರಮೂರ್ತಿ, ವಕೀಲರಾದ ಎಚ್.ಅಣ್ಣಪ್ಪಸ್ವಾಮಿ, ಎನ್.ಶಶಾಂಕ್, ಸಮುದಾಯದ ಮುಖಂಡರಾದ ಬಾಳೆಕಾಯಿ ಶ್ರೀನಿವಾಸ್, ನವೀನ್, ಎಸ್.ಎನ್.ರವಿಕುಮಾರ್, ನಾಗರಾಜ್, ಜಯರಾಂ, ಪರಮೇಶ್ವರಪ್ಪ ಪೂಜಾರ್, ಪ್ರದೀಪ್, ಸೋಮಣ್ಣ, ಹನುಮಂತಪ್ಪ, ಈರಜ್ಜನಹಟ್ಟಿ ತಿಪ್ಪೇಸ್ವಾಮಿ, ಜಗ್ಗಣ್ಣ, ರಂಗಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net