

ಹುಮನಾಬಾದ್: ಪಟ್ಟಣದ ಪ್ರಸಿದ್ಧ ಆರಾಧ್ಯದೈವ ಶ್ರೀ ವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವ ಅದ್ದೂರಿ ಹಾಗೂ ಸುಸೂತ್ರವಾಗಿ ನಡೆಯಲು ಸಂಬಂಧಿತ ಅಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕೆಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಸೂಚಿಸಿದರು.
ಜಾತ್ರೋತ್ಸವ ನಿಮಿತ್ತ ಪಟ್ಟಣದ ಶಾಸಕರ ಕಚೇರಿಯಲ್ಲಿ ಸೋಮವಾರ ತಾಲೂಕು ಆಡಳಿತ ಅಧಿಕಾರಿಗಳ ಜತೆ ಪೂರ್ವಭಾವಿ ಸಭೆ ನಡೆಸಿದ ಅವರು, ಪಲ್ಲಕ್ಕಿ ಉತ್ಸವ ದಿನ ಇಡೀ ಪಟ್ಟಣವನ್ನು ಸುಂದರ ಹಾಗೂ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಲಕ್ಷಾಂತರ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಕುಡಿಯುವ ನೀರು, ವೈದ್ಯಕೀಯ ಸೇವೆ ಸಮಸ್ಯೆಗಳು ಆಗದಂತೆ ನೋಡಿಕೊಳ್ಳಬೇಕು ಎಂದು ತಾಕೀತು ಮಾಡಿದರು.
ಇತ್ತೀಚೆನ ದಿನಗಳಲ್ಲಿ ಹೆಚ್ಚುತ್ತಿರುವ ಕಳ್ಳತನ, ಜೇಬುಗಳ್ಳರ ಬಗ್ಗೆ ಹೆಚ್ಚಿನ ಗಮನ ಹರಿಸಲು ಜನಸಂದಣಿ ಇರುವ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿ, ವಿದ್ಯುತ್ ವಿತರಣೆಯಲ್ಲಿ ಯಾವುದೇ ತರಹದ ಲೋಪಗಳು ಆಗದಂತೆ ಮುಂಜಾಗ್ರತೆ ವಹಿಸಬೇಕೆಂದು ಅಧಿಕಾರಿಗಳಿಗೆ ಆದೇಶಿಸುವಂತೆ ಹಾಗೂ ಜಾತ್ರೆ ಸುಸೂತ್ರವಾಗಿ ನಡೆಸಲು ತಾಲೂಕು ಅಧಿಕಾರಿಗಳ ತಂಡ ರಚಿಸುವಂತೆ ತಹಸೀಲ್ದಾರ್‌ಗೆ ಸೂಚನೆ ನೀಡಿದರು.
ತಹಸೀಲ್ದಾರ್ ಅಂಜುಂ ತಬಸ್ಸುಮ್, ತಾಪಂ ಇಒ ದಿಪೀಕಾ ನಾಯ್ಕರ್, ಟಿಎಚ್‌ಒ ಡಾ.ಶಿವಕುಮಾರ ಸಿದ್ದೇಶ್ವರ ಇತರರಿದ್ದರು.