ವೀರಭದ್ರ ದೇವರ ಅಗ್ನಿಕುಂಡ ಸಂಪನ್ನ

Veerabhadra Swamy
Published on

ಚಿತ್ರದುರ್ಗ: ನಗರದ ನೀಲಕಂಠೇಶ್ವರ ಸ್ವಾಮಿ ಸನ್ನಿಧಿ ಮುಂಭಾಗ ಶನಿವಾರ ವೀರಭದ್ರ ದೇವರ ಅಗ್ನಿಕುಂಡ ಮಹೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿ, ಸಂಪನ್ನಗೊಂಡಿತು.

ವೀರಶೈವ ಸಮಾಜದಿಂದ ಹಮ್ಮಿಕೊಂಡಿದ್ದ ಪೂಜಾ ಕೈಂಕರ್ಯವೂ ಬೆಳಗ್ಗೆ 6.30ಕ್ಕೆ ಗಂಗಾಪೂಜೆ ಮೂಲಕ ಆರಂಭವಾಯಿತು. ನಂತರ ಉಜ್ಜಯನಿ ಮಠದಿಂದ ಸ್ವಾಮಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ, ಗುಗ್ಗಳದ ಮೆರವಣಿಗೆಗೆ ಚಾಲನೆ ನೀಡಲಾಯಿತು.

ರಾಜಬೀದಿಗಳಾದ ದೊಡ್ಡಪೇಟೆ, ಉಚ್ಚಂಗಿ ಯಲ್ಲಮ್ಮ ದೇಗುಲದ ರಸ್ತೆ, ಚಿಕ್ಕಪೇಟೆ, ಆನೆಬಾಗಿಲು, ಮಹಾತ್ಮಗಾಂಧಿ ವೃತ್ತ ಮಾರ್ಗವಾಗಿ ಸಂಚರಿಸಿ ದೇಗುಲ ತಲುಪಿತು. ಇಲ್ಲಿ ಅಗ್ನಿಕುಂಡ ಹಾಯುವ ಮೂಲಕ ಭಕ್ತರು ಬಿಜಯಂಗೈದು ಭಕ್ತಿ ಸಮರ್ಪಿಸಿದರು.

ಹರಪನಹಳ್ಳಿ ಪಟ್ಟಣದ ಮೇಗಳಪೇಟೆಯ ಗುಗ್ಗಳ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನ ಸಮಿತಿಯಿಂದ ಎರಡೂ ಪೂಜಾ ಕೈಂಕರ್ಯ ಶಾಸ್ತ್ರೋಕ್ತವಾಗಿ ನೆರವೇರಿತು. ಮೆರವಣಿಗೆಯೂ ಮನೆಗಳ ಮುಂದೆ ಸಂಚರಿಸುವಾಗ ವಿವಿಧ ವರ್ಣದ ರಂಗೋಲಿ, ನೀರೆರಚುವ ಮೂಲಕ ಸ್ವಾಮಿಯನ್ನು ಸ್ವಾಗತಿಸಿದ ಭಕ್ತಸಮೂಹ ಪೂಜೆ ಸಲ್ಲಿಸಿದರು.

ಪುರವಂತಿಕೆ ಜನಪದ ಕಲಾವಿದರ ತಂಡದವರು ಮೆರವಣಿಗೆ ವೇಳೆ ಮಾರ್ಗದುದ್ದಕ್ಕೂ ವೀರಸಾರ ಪರಮ ಗಂಭೀರ ದಕ್ಷಸಂಹಾರ ಪರಶಿವನ ಮೋಹನಕುಮಾರ ಕಿಡಿಗಣ್ಣು ನೋಟದ ರುದ್ರದೇವ ಶ್ರೀ ವೀರೇಶನೇ ಬಹುಪರಾಕ್ ಬಹುಪರಾಕ್ ಎಂದು ಪರಮಾತ್ಮನ ನಾಮಸ್ಮರಣೆಯನ್ನು ಒಡಪಿನ ರೂಪದಲ್ಲಿ ಹೇಳುವ ಮೂಲಕ ಕೊಂಡಾಡಿ ಗಮನ ಸೆಳೆದರು.

ಕೆಂಡಾರ್ಚನೆ ಸೇವೆ: ಭಕ್ತರು ಅಗ್ನಿಕುಂಡ ಹಾಯುವ ಮುನ್ನ ಸ್ವಾಮಿಯ ಉತ್ಸವ ಮೂರ್ತಿ ಹೊತ್ತ ಭಕ್ತರು ಕೆಂಡಾರ್ಚನೆ ಸೇವೆ ಸಲ್ಲಿಸುವ ಮೂಲಕ ಭಕ್ತಿ ಸಮರ್ಪಿಸಿದರು. ವೀರಭದ್ರೇಶ್ವರನ ಮಾದರಿಯ ವೇಷಧಾರಿಗಳು ಭಕ್ತರನ್ನು ಆಕರ್ಷಿಸಿದರು. ಮಹಾಮಂಗಳಾರತಿ ನಂತರ ದಾಸೋಹದಲ್ಲಿ ಪಾಲ್ಗೊಂಡ ಹಲವರು ಪ್ರಸಾದ ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net