

ಚಾಮರಾಜನಗರ: ಹಣೆಯ ಮೇಲೆ ವಿಭೂತಿ, ಕುಂಕುಮ, ತಲೆಯ ಮೇಲೆ ನಾಗಾಭರಣ ಕಿರೀಟ, ಕತ್ತಿನಲ್ಲಿ ರುದ್ರಾಕ್ಷಿ ಮಾಲೆ, ಮೈ ಮೇಲೆ ಕೆಂಪು ವಸ, ಎದೆಯ ಮೇಲೆ ವೀರಭದ್ರನ ಹಾರ, ಸೊಂಟಕ್ಕೆ ಪಟ್ಟಿ, ಕೈಯಲ್ಲಿ ಕಡಗ, ಕತ್ತಿ, ಗುರಾಣಿ, ಕಾಲಿಗೆ ಗೆೆಜ್ಜೆ, ಗಗ್ಗರ…
ಹೀಗೆ ಸುಮಾರು 12 ಕೆ.ಜಿಯಷ್ಟು ತೂಕವಿರುವ ವೀರಗಾಸೆ ವೇಷ ಧರಿಸಿ ಸುಮಾರು 47 ವರ್ಷಗಳಿಂದ ಕಲಾಸೇವೆಗೈಯುತ್ತಿರುವ ಹಿರಿಯ ಜೀವವೊಂದರ ಮುಡಿಗೆ ಪ್ರಶಸ್ತಿಯ ಗರಿ ಸಿಕ್ಕಿದೆ.
ಕರ್ನಾಟಕ ಜಾನಪದ ಅಕಾಡೆಮಿ ಗುರುವಾರ ಪ್ರಕಟಿಸಿದ 2022ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗೆ ತಾಲೂಕಿನ ಗಂಗವಾಡಿ ಗ್ರಾಮದ ನಿವಾಸಿ, ವೀರಗಾಸೆ ಕಲಾವಿದ ಶಿವರುದ್ರಸ್ವಾಮಿ(65) ಆಯ್ಕೆಯಾಗಿದ್ದಾರೆ. ತೂಕದಿಂದ ಕೂಡಿರುವ ವೇಷ ಧರಿಸಿ, ಮೂರ‌್ನಾಲ್ಕು ತಾಸು ವೀರಗಾಸೆ ನೃತ್ಯ ಮಾಡುವುದು ಸುಲಭದ ಮಾತಲ್ಲ. ಶಿವರುದ್ರಸ್ವಾಮಿ ಕಠಿಣವಾದುದ್ದನ್ನು ಸುಲಭವಾಗಿಸಿಕೊಂಡಿರುವುದರಲ್ಲಿ ಎರಡು ಮಾತಿಲ್ಲ. ಇಳಿ ವಯಸ್ಸಿನಲ್ಲಿ ವೀರಗಾಸೆ ಕುಣಿತಕ್ಕೆ ಇಳಿದರೆ ಚಿಮ್ಮುವ ಚೈತನ್ಯ ಇವರ ಮನೆ ಬಾಗಿಲಿಗೆ ಪ್ರಶಸ್ತಿಯನ್ನು ಹುಡುಕಿ ತಂದಿದೆ.
ಬಳುವಳಿಯಾಗಿ ಬಂದ ಕಲೆ:
ಶಿವರುದ್ರಸ್ವಾಮಿಗೆ ವೀರಗಾಸೆ ಕುಣಿತ ತಲೆಮಾರುಗಳಿಂದ ಬಳುವಳಿಯಾಗಿ ಬಂದಿದೆ. ಇವರ ತಂದೆ ನಾಗಣ್ಣ, ತಾತ ಬಸವಲಿಂಗಪ್ಪ, ಮುತ್ತಾತ ವೀರಭದ್ರಪ್ಪ, ಅವರ ತಂದೆ ಚನ್ನವೀರಪ್ಪ ಎಲ್ಲರೂ ವೀರಗಾಸೆ ಕಲಾವಿದರು. ಇವರಿಂದ ರಕ್ತಗತವಾಗಿ ಬಂದ ಕಲೆ ಶಿವರುದ್ರಸ್ವಾಮಿ ಅವರ ಕುಣಿತದ ಲಯ ತಪ್ಪಿಸಿದ್ದೇ ಇಲ್ಲ.
ಬಡತನದ ಕಾರಣಕ್ಕೆ 4ನೇ ತರಗತಿಯಲ್ಲೇ ಶಾಲೆ ಬಿಟ್ಟ ಶಿವರುದ್ರಸ್ವಾಮಿಗೆ ಮನೆಯೇ ಪಾಠಶಾಲೆ. ತಂದೆಯೇ ಶಿಕ್ಷಕರು. ವೀರಗಾಸೆಯೇ ಮುಂದಿನ ಶಿಕ್ಷಣವಾಗಿ ಹೋಯಿತು. ಕಲೆ ಕರಗತಗೊಳ್ಳುವವರೆಗೂ ಶಿವರುದ್ರಸ್ವಾಮಿ ತಂದೆಯ ಹೆಜ್ಜೆ ಹಿಂಬಾಲಿಸಿದರು. ಕಲೆ ಕರಗತಗೊಂಡ ಬಳಿಕ ತಂದೆಯೊಂದಿಗೆ ವೀರಗಾಸೆ ನೃತ್ಯ ಮಾಡುವ ಮಗ ಎಂದು ಪ್ರಸಿದ್ಧಿ ಪಡೆದುಕೊಂಡರು. ಸುಮಾರು 18ನೇ ವಯಸ್ಸಿನಲ್ಲಿ ಶುರುವಾದ ಕಲಾಸೇವೆ ಈಗಲೂ ಮುನ್ನಡೆಯುತ್ತಿದೆ. ಸಂಘ-ಸಂಸ್ಥೆಗಳಿಂದ ಹಲವು ಪ್ರಶಸ್ತಿಗಳು ಸಿಕ್ಕಿವೆ. ಇದೀಗ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ೋಷಣೆಯಾಗಿರುವುದು ಮತ್ತಷ್ಟು ಪ್ರೋತ್ಸಾಹ ಕೊಟ್ಟಿದೆ. ಪ್ರಶಸ್ತಿಯು 25 ಸಾವಿರ ರೂ. ನಗದು ಬಹುಮಾನ, ಪಾರಿತೋಷಕ ಒಳಗೊಂಡಿದೆ. ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ರಾಯಚೂರಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ವೀರಭದ್ರಸ್ವಾಮಿ ಅರ್ಚಕ:
ವೀರಗಾಸೆ ಕಲಾವಿದರಾಗಿರುವ ಶಿವರುದ್ರಸ್ವಾಮಿ ವೀರಭದ್ರಸ್ವಾಮಿಯ ಆರಾಧಕ. ಗ್ರಾಮದಲ್ಲಿರುವ ಚೋಳರ ಕಾಲದ 1505ರಲ್ಲಿ ನಿರ್ಮಿಸಿರುವ ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ಅರ್ಚಕ ವೃತ್ತಿ ಮಾಡುತ್ತಿದ್ದಾರೆ. ಪತ್ನಿ ರತ್ನಮ್ಮ, ಮಕ್ಕಳಾದ ದಾಕ್ಷಾಯಿಣಿ, ಬೇಬಿ, ವೀರೇಶ್ ಇದ್ದಾರೆ.
ತಲೆಮಾರಿನಿಂದ ತಲೆಮಾರಿಗೆ:
ತನ್ನ ತಂದೆಯಿಂದ ಕಲಿತ ಕಲೆಯನ್ನು ಶಿವರುದ್ರಸ್ವಾಮಿ ತನ್ನ ಮಗ ವೀರೇಶ್‌ಗೆ ಧಾರೆ ಎರೆದಿದ್ದಾರೆ. ಅಂದು ಶಿವರುದ್ರಸ್ವಾಮಿ ತನ್ನ ತಂದೆಯೊಂದಿಗೆ ವೀರಗಾಸೆ ನೃತ್ಯ ಮಾಡುತ್ತಿದ್ದರು. ಇಂದು ಮಗ ವೀರೇಶ್ ಜತೆ ಕುಣಿತ ಹಾಕುತ್ತಿದ್ದಾರೆ.
ವಂಶಪಾರಂಪ್ಯವಾಗಿ ನಮ್ಮ ಕುಟುಂಬ ಕಲಿತ ಕಲೆ ವೀರಗಾಸೆ. ಆದಾಯವಿಲ್ಲದೆ ಒತ್ತಡದ ಸನ್ನಿವೇಶಗಳು ಸೃಷ್ಟಿಯಾದಾಗ ಆತ್ಮತೃಪ್ತಿಗಾಗಿ ಕಲಾಸೇವೆ ಮುಂದುವರಿಸಿದ್ದೇನೆ. ನಮ್ಮ ತಾತ, ಮುತ್ತಾತ ನಿಲ್ಲಿಸದ ವೀರಗಾಸೆ, ನನ್ನಿಂದಲೂ ನಿಲ್ಲಬಾರದು ಎನ್ನುವುದು ನನ್ನ ಉದ್ದೇಶ. ಇಷ್ಟು ವರ್ಷದ ನನ್ನ ಸೇವೆ ಗುರುತಿಸಿ ಜಾನಪದ ಗಾಯಕ ಸಿ.ಎಂ.ನರಸಿಂಹಮೂರ್ತಿ ಶ್ರಮವಹಿಸಿ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಕೊಡಿಸಿರುವುದಕ್ಕೆ ಧನ್ಯವಾದ ಅರ್ಪಿಸುತ್ತೇನೆ.ಶಿವರುದ್ರಸ್ವಾಮಿ ಪ್ರಶಸ್ತಿಗೆ ಭಾಜನರಾದವರುಅಪ್ಪಟ ದೇಸಿ ಜನಪದ ಕಲಾವಿದರನ್ನು ಗುರುತಿಸುವುದು ನಮ್ಮ ಕರ್ತವ್ಯ. ಚಾಮರಾಜನಗರ ಜಿಲ್ಲೆ ಜನಪದ ಕಲಾವಿದರ ತವರೂರು. ಇದುವರೆಗೆ ನೀಲಗಾರರು, ಗೊರವರ ಕುಣಿತ ಕಲಾವಿದರು, ಸೋಬಾನೆ ಕಲಾವಿದರಿಗೆ ಪ್ರಶಸ್ತಿ ದೊರಕಿತ್ತು. ಈ ಬಾರಿ ವೀರಗಾಸೆ ಕಲಾವಿದರಿಗೆ ಪ್ರಶಸ್ತಿ ಸಿಕ್ಕಿರುವುದು ಸಂತೋಷ ತಂದಿದೆ.ಸಿ.ಎಂ.ನರಸಿಂಹಮೂರ್ತಿಕರ್ನಾಟಕ ಜಾನಪದ ಅಕಾಡೆಮಿ ನಿರ್ಗಮಿತ ಸದಸ್ಯ