ವೀರ ಯೋಧರ ತ್ಯಾಗ ಅಜರಾಮರ: ನಟ ನೆನಪಿರಲಿ ಪ್ರೇಮ್ ಅಭಿಪ್ರಾಯ

19 Nela Ph 01 Abhinandane
Published on

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ದೇಶಕ್ಕಾಗಿ ಮಡಿದ ವೀರಯೋಧರ ಸೇವೆ ತ್ಯಾಗ ಹಾಗೂ ಬಲಿದಾನ ದೇಶವಿರುವವರೆಗೂ ಅಜರಾಮರವಾಗಿ ಉಳಿಯಲಿದೆ ಎಂದು ಚಲನಚಿತ್ರ ನಟ ನೆನಪಿರಲಿ ಪ್ರೇಮ್ ಅಭಿಪ್ರಾಯಪಟ್ಟರು.
ಬೆಂಗಳೂರು ಉತ್ತರ ತಾಲೂಕು ತೋಟಗೆರೆ ಗ್ರಾಮದ ಬಸವಣ್ಣ ದೇವಾಲಯ ಆವರಣದಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ಶನಿವಾರ ರಾತ್ರಿ ವಿಸಿಎನ್‌ಆರ್ ಹಿತಚಿಂತನಾ ಚಾರಿಟಬಲ್ ಟ್ರಸ್ಟ್ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಯೋಗದಲ್ಲಿ ಆಯೋಜಿಸಿದ್ದ ಸೂರ್ಯ ಲಕ್ಷದೀಪೋತ್ಸವ, ನಂದಿ ಧ್ವಜ ಕುಣಿತ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಭಿನ್ನವಾದ ಸಂಸ್ಕೃತಿ, ಆಚರಣೆಗಳು ಭಾರತ ದೇಶದಲ್ಲಿವೆ. ಜಾತ್ರೆ ದೇವರ ಉತ್ಸವಗಳು ಮನರಂಜನೆಯ ಜತೆಗೆ ನಾಡಿನ ಸಾಂಸ್ಕೃತಿಕ ಪರಂಪರೆ ಪ್ರತಿನಿಧಿಸುತ್ತವೆ. ಹೀಗೆ ಧಾರ್ಮಿಕ ಕಾರ್ಯಕ್ರಮದ ಹೆಸರಿನಲ್ಲಿ ಹುತಾತ್ಮ ಯೋಧ ಕುಟಂಬದವರು, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ರೂಪಿಸಿರುವ ಟ್ರಸ್ಟ್ ಕಾರ್ಯ ಮಾದರಿಯಾಗಿದೆ. ವೀರಯೋಧರ ಕುಟುಂಬಕ್ಕೆ ಧೈರ್ಯ ತುಂಬುವ ಜತೆಗೆ ರಾಷ್ಟ್ರಾಭಿಮಾನ ಜಾಗೃತಿಗೊಳಿಸಿದಂತಾಗಲಿದೆ ಎಂದರು.
ಗಡಿಯಲ್ಲಿನ ಸೈನಿಕರು ಒಂದು ಕ್ಷಣ ಯಾಮಾರಿದರೂ ದೇಶದಲ್ಲಿನ ನಾಗರಿಕರಿಗೆ ಅಪಾಯ ಗ್ಯಾರಂಟಿ. ದೇಶದ ಭದ್ರತೆಯ ವಿಚಾರದಲ್ಲಿ ಸೈನ್ಯದಲ್ಲೆ ಇರಬೇಕಂತಿಲ್ಲ. ದೇಶದ ಪ್ರತಿಯೊಂದು ಕುಟುಂಬವು ಸೈನಿಕರಂತೆ ಭಾವಿಸಿ ಸದಾಸಿದ್ಧವಾಗಿರಬೇಕು. ಯುವಜನತೆ ದುಶ್ಚ ಗಳಿಂದ ದೂರವಿದ್ದು, ದೇಶ ಸೇವೆಗೂ ಮನ್ನಣೆ ನೀಡಬೇಕು ಎಂದು ಹುತಾತ್ಮ ಯೋಧ ಹನುಮಂತರಾವ್‌ಸಾರಥಿ ತಂದೆ, ನಿವೃತ್ತ ಯೋಧ ರೇವಣ ್ಣಸಿದ್ದಪ್ಪ ಸಾರಥಿ ತಿಳಿಸಿದರು.
ವಿಸಿಎನ್‌ಆರ್ ಸೇವಾ ಪ್ರಶಸ್ತಿ ಪ್ರದಾನ: ಹುತಾತ್ಮ ಯೋಧ ಹನುಮಂತರಾವ್ ಸಾರಥಿ ಕುಟುಂಬ, ಹುತಾತ್ಮ ಪಿಎಸ್‌ಐ ಜಗದೀಶ್ ಕುಟಂಬ, ಮಹಿಳಾ ಐಪಿಎಸ್ ಶೋಭಾರಾಣಿ, ತಹಸೀಲ್ದಾರ್ ವಿಜಯ್‌ಕುಮಾರ್, ಸಮಾಜಸೇವಕ ಸಿದ್ದಲಿಂಗಯ್ಯ, ಧರ್ಮಸ್ಥಳ ಗ್ರಾಮೀಭಿವೃದ್ಧಿ ಟ್ರಸ್ಟ್ ಪ್ರಾದೇಶಿಕ ನಿರ್ದೇಶಕ ಸೀನಪ್ಪ, ಪತ್ರಕರ್ತರಾದ ಎ.ಆರ್.ಮಣಿಕಾಂತ್, ಸದಾಶಿವ್, ಜಯಪ್ರಕಾಶ್‌ಶೆಟ್ಟಿ, ವೈದ್ಯ ಡಾ.ಎಂ.ವಿನಯ್‌ಕುಮಾರ್ ಅವರಿಗೆ ವಿಸಿಎನ್‌ಆರ್ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ದೀಪೋತ್ಸವಕ್ಕೆ ಜನಸಾಗರ: ಸುತ್ತಮುತ್ತಲ ಹತ್ತಾರು ಗ್ರಾಮಗಳಿಂದ ಆಗಮಿಸಿದ್ದ ಸಹ್ರಸಾರು ಭಕ್ತರು ದೇವಾಲಯದ ಆವರಣದಲ್ಲಿ ಆಯೋಜಿಸಿದ್ದ ಲಕ್ಷದೀಪೋತ್ಸವದಲ್ಲಿ ದೀಪ ಹಚ್ಚಿ ಸಂಭ್ರಮಿಸಿದರು. ಧರ್ಮಸ್ಥಳ ಯಕ್ಷಬಿಂಧು ಕಲಾತಂಡದಿಂದ ಮಹಿಷ ಮರ್ಧಿನಿ ಎಂಬ ಪೌರಾಣಿಕ ಯಕ್ಷಗಾನ ಪ್ರದರ್ಶಿಸಲಾಯಿತು.
ವಿಸಿಎನ್‌ಆರ್ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷೆ ಪುಟ್ಟಮ್ಮವೆಂಕಟರಾಮಯ್ಯ, ಅಧ್ಯಕ್ಷ ವಿ.ರಾಮಸ್ವಾಮಿ, ನಿರ್ದೇಶಕರ ಚಂದ್ರಶೇಖರ್, ನರಸಿಂಹಮೂರ್ತಿ, ಸಿಬ್ಬಂದಿ ಕೆ.ಕೆ.ಕೃಷ್ಣಪ್ಪ, ರಮೇಶ್, ಬೈಲಮೂರ್ತಿ, ಕೃಷ್ಣಮೂರ್ತಿ, ಬಿಜೆಪಿ ಮಂಡಲ ಅಧ್ಯಕ್ಷ ಹನುಮಂತಯ್ಯ, ಮಜಾ ಭಾರತ ಖ್ಯಾತಿಯ ಮಂಜುಪಾವಗಡ, ಕಿರುತರೆ ನಟರಾದ ರಾಮ್‌ಪವನ್, ರಘುಭಟ್, ನಯನಾ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net