ವೀಣಾ ಕಣ್ಣೀರು- ವಿಜಯಾನಂದ ಗುಡುಗು !

bkt-22-10
ಬಾಗಲಕೋಟೆ ನಗರದ ಚರಂತಿಮಠ ಶಿವಾನುಭವ ಮಂಟಪದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ವೀಣಾ ಅವರಿಗೆ ಪಕ್ಷೇತರ ಅಭ್ಯರ್ಥಿಯಾಗುವಂತೆ ಅಭಿಮಾನಿಗಳು ವೇದಿಕೆಗೆ ಬಂದು ಕೂಗಿ ಕೂಗಿ ಹೇಳುತ್ತಿದ್ದಾಗ ಕಣ್ಣೀರು ಹಾಕುತ್ತಲೇ ಸಮಾಧಾನವಾಗಿ ಇರುವಂತೆ ಕೈಮುಗಿದು ಮನವಿ ಮಾಡಿದ ವೀಣಾ ಕಾಶಪ್ಪನವರ.
Published on

ಬಾಗಲಕೋಟೆ: ವೇದಿಕೆಯ ಮೇಲೆ ಗಳಗಳನೇ ಕಣ್ಣೀರು ಹಾಕಿದ ವೀಣಾ ಕಾಶಪ್ಪನವರ… ಸ್ವಪಕ್ಷಿಯರ ವಿರುದ್ಧ ಗುಡುಗು ಹಾಕಿ, ದಮ್ಮು ತಾಕತ್ತು ಪ್ರಶ್ನಿಸಿದ ಶಾಸಕ ವಿಜಯಾನಂದ ಕಾಶಪ್ಪನವರ… ಏನೇ ಆಗಲಿ ಲೋಕಸಭೆ ಅಖಾಡದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವಂತೆ ಪಟ್ಟು ಹಿಡಿದ ಬೆಂಬಲಿಗರು..!


ಹೌದು, ಇದು ಶುಕ್ರವಾರ ಬಾಗಲಕೋಟೆ ನಗರದ ಚರಂತಿಮಠ ಶಿವಾನುಭವ ಮಂಟಪದಲ್ಲಿ ನಡೆದ ವೀಣಾ ಕಾಶಪ್ಪನವರ ಕುಟುಂಬದ ಅಭಿಮಾನಿ ಬಳಗ ಕರೆದಿದ್ದ ಕಾಂಗ್ರೆಸ್ ಪಕ್ಷದ ಸ್ವಾಭಿಮಾನಿ ಕಾರ್ಯಕರ್ತರ ಸಭೆಯಲ್ಲಿ ಕಂಡು ಬಂದ ದೃಶ್ಯ.

ಬಾಗಲಕೋಟೆ ಲೋಕಸಭೆ ಕ್ಷೇತ್ರಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದ ವೀಣಾ ಕಾಶಪ್ಪನವರ ಅವರಿಗೆ ಕಾಂಗ್ರೆಸ್ ಟಿಕೆಟ್ ಕೈತಪ್ಪಿ, ಪಕ್ಕದ ವಿಜಯಪುರ ಜಿಲ್ಲೆಯ ಸಚಿವ ಶಿವಾನಂದ ಪಾಟೀಲ ಪುತ್ರಿ ಸಂಯುಕ್ತಾ ಪಾಟೀಲ ಅವರಿಗೆ ಪಕ್ಷದ ಟಿಕೆಟ್ ಘೋಷಿಸಿದ ಹಿನ್ನಲೆಯಲ್ಲಿ ಕಾಶಪ್ಪನವರ ದಂಪತಿ ಕಣ್ಣು ಕೆಂಪಾಗಿಸಿದೆ.
ಪಕ್ಷದ ಟಿಕೆಟ್ ಕೈತಪ್ಪಿದ್ದಕ್ಕೆ ಅಭಿಮಾನಿಗಳ ಅಭಿಪ್ರಾಯ ಸಂಗ್ರಹಣೆ ವೇಳೆ ಬಹುತೇಕರು ವೀಣಾ ಅವರಿಗೆ ಆಗಿರುವ ಅನ್ಯಾಯದ ಬಗ್ಗೆ ಪ್ರಶ್ನಿಸಿದರು. ಜಿಲ್ಲೆಯ ಮುಖಂಡರ ವಿರುದ್ಧ ಗುಡುಗು ಮಿಂಚು ಹರಿಸಿದರು. ಸಾವಿರಾರು ಜನ ಪಕ್ಷದ ಕಾರ್ಯಕರ್ತರ ಈ ಒಕ್ಕೂರಲ ಧ್ವನಿ ಕೇಳಿ, ಅವರ ಭಾವೋದ್ಗೇಗ ಕಂಡ ಟಿಕೆಟ್ ವಂಚಿತೆ ವೀಣಾ ಕಾಶಪ್ಪನವರ ಸಹ ತೀವ್ರ ಭಾವೋದ್ವೇಗಕ್ಕೆ ಒಳಗಾಗಿ, ಗದ್ಗಿತರಾದರು. ಕಾರ್ಯಕ್ರಮದುದ್ದಕ್ಕೂ ಕಣ್ಣೀರು ಕೋಡಿ ಹರಿಸಿದರು. ಅಕ್ಕಾ ಕಣ್ಣೀರು ಹಾಕಬೇಡಿ, ನಿಮ್ಮೊಂದಿಗೆ ನಾವಿದ್ದೇವೆ ಎಂದು ಮತ್ತೆ ಮತ್ತೆ ಕಾರ್ಯಕರ್ತರು ಕೂಗಿ ಕೂಗಿ ಹೇಳಿದರು. ಪಕ್ಷದ ಮುಖಂಡರ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದರು.

ಸ್ಥಳೀಯರನ್ನು ಬದಿಗೊತ್ತಿ ಹೊರಗಿನ ಜಿಲ್ಲೆಯವರಿಗೆ ಟಿಕೆಟ್ ಕೊಟ್ಟಿದ್ದಕ್ಕೆ ಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಯಿತು. ಪಕ್ಷದ ವಿರುದ್ಧ ಯಾರೂ ಮಾತನಾಡಬಾರದು ಎನ್ನುವ ಆರಂಭದಲ್ಲಿ ಹಾಕಿದ್ದ ಲಕ್ಷ÷್ಮಣ ರೇಖೆ ಸಭೆ ಆರಂಭದ ಬಳಿಕ ಲೆಕ್ಕಕ್ಕೆ ಬರಲಿಲ್ಲ. ಸ್ವತಃ ವೀಣಾ ಕಾಶಪ್ಪನವರ ಪತಿ, ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ ಸ್ವಪಕ್ಷಿಯರ ವಿರುದ್ದ ನಿಗಿನಿಗಿಯಾಗಿದ್ದರು. ಸಚಿವ ಶಿವಾನಂದ ಪಾಟೀಲರ ವಿರುದ್ಧ ಗುಡುಗು, ಮಿಂಚು ಹರಿಸಿದರು. ನಾವಾ, ನೀವಾ ನೋಡಿಯೇ ಬಿಡೋಣ ಎಂದು ಸವಾಲ್ ಎಸೆದರು. ಅಭಿಮಾನಿಗಳ ಒತ್ತಾಸೆಯಂತೆ ಇನ್ನೇರಡು ದಿನಗಳಲ್ಲಿ ಸ್ವತಂತ್ರವಾಗಿ ಸ್ಪರ್ಧೆ ಸೇರಿ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿ ಪ್ರಕಟಿಸಿದರು. ಪಕ್ಷಕ್ಕೆ ತಮ್ಮ ಕುಟುಂಬದ ಸೇವೆಯನ್ನು ಮೆಲಕು ಹಾಕಿದರು. ಇದೀಗ ಯಾವುದೇ ಒತ್ತಡ, ಬೆದರಿಕೆಗೆ ಮಣಿಯಲ್ಲ ಎಂದು ಸಚಿವ ಶಿವಾನಂದ ಪಾಟೀಲ ಹಾಗೂ ಸ್ವಪಕ್ಷಿಯರ ವಿರುದ್ಧ ಏಕವಚನದಲ್ಲೆ ಹರಿಹಾಯ್ದರು. ಟಿಕೆಟ್ ಹಂಚಿಕೆ ಬಗ್ಗೆ ಮರುಪರಿಶೀಲಿಸುವಂತೆ ಆಗ್ರಹಿಸಿದರು. ಇಲ್ಲದೇ ಹೋದರೆ ಮುಂದಿನ ಆಗುಹೋಗುಗಳ ಬಗ್ಗೆಯೂ ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net