ವಿಸ್ತಾರಗೊಳ್ಳುತ್ತಿದೆ ಮಹಿಳೆಯರ ಕಳ್ಳ ಸಾಗಾಣಿಕೆ ಜಾಲ:ಡಾ.ಈ. ಮಂಜುನಾಥ್ ಕಳವಳ

ವಿಸ್ತಾರಗೊಳ್ಳುತ್ತಿದೆ ಮಹಿಳೆಯರ ಕಳ್ಳ ಸಾಗಾಣಿಕೆ ಜಾಲ:ಡಾ.ಈ. ಮಂಜುನಾಥ್ ಕಳವಳ
Published on

ಹಾಸನ: ದೇಶದಲ್ಲಿ ಮಾದಕ ವಸ್ತುಗಳ ಮಾರಾಟದ ಜಾಲಕ್ಕಿಂತ ಮಕ್ಕಳ ಮತ್ತು ಮಹಿಳೆಯರ ಕಳ್ಳ ಸಾಗಾಣಿಕೆ ಜಾಲವೇ ಅತ್ಯಂತ ದೊಡ್ಡದಾಗಿದೆ ಎಂದು ಮೈಸೂರು ಮಹಾರಾಣಿ ಕಾಲೇಜಿನ ಸ್ನಾತಕೋತ್ತರ ಕೇಂದ್ರದ ಸಹ ಪ್ರಾಧ್ಯಾಪಕ ಡಾ.ಈ. ಮಂಜುನಾಥ್ ಕಳವಳ ವ್ಯಕ್ತಪಡಿಸಿದರು.
ನಗರದ ಆರ್.ಸಿ. ರಸ್ತೆ ಗಂಧದ ಕೋಠಿ ಆವರಣದಲ್ಲಿರುವ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಶಾಸ್ತ್ರ ವಿಭಾಗ ಮತ್ತು ಐಕ್ಯೂಎಸಿ ಘಟಕದ ವತಿಯಿಂದ ಬುಧವಾರ ನಡೆದ ಮಕ್ಕಳು ಮತ್ತು ಮಹಿಳಾ ಕಳ್ಳ ಸಾಗಣೆ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಉಪನ್ಯಾಸ ನೀಡಿದ ಅವರು, ಮಕ್ಕಳು ಮತ್ತು ಹೆಣ್ಣು ಮಕ್ಕಳ ಕಳ್ಳ ಸಾಗಾಣಿಕೆ ಜಾಲದಲ್ಲಿ ಸಮಾಜದಲ್ಲಿರುವ ಪ್ರಭಾವಿ ವ್ಯಕ್ತಿಗಳ ಪಾತ್ರ ಇರುವುದು ಆತಂಕಕಾರಿ ಸಂಗತಿಯಾಗಿದೆ. ಹೆಣ್ಣು ಮಕ್ಕಳನ್ನು ಸಾಕಲು ಸಾಧ್ಯವಾಗದ ಕುಟುಂಬಗಳನ್ನು ಗುರಿಯಾಗಿಸಿಕೊಂಡು ವಂಚಕರು ಅಂತಹ ಕುಟುಂಬಗಳಿಗೆ ಆಮಿಷವೊಡ್ಡಿ ಯುವತಿಯರನ್ನು ಮದುವೆಯಾಗಿ ಅವರನ್ನು ಅನೈತಿಕ ಚಟುವಟಿಕೆಗಳಿಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಕರ್ನಾಟಕದಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ ಇಂತಹ ಘಟನೆಗಳು ಹೆಚ್ಚಾಗಿ ಕಂಡು ನಡೆಯುತ್ತಿವೆ. ಉತ್ತರ ಭಾರತದಲ್ಲಿ ಈ ತರನಾದ ವಂಚಕರ ಜಾಲ ಹೆಚ್ಚಾಗಿದ್ದು, ಅವರು ಇಲ್ಲಿಗೆ ಬಂದು ಹೆಣ್ಣು ಮಕ್ಕಳನ್ನು ಮದುವೆಯಾಗಿ ನಂತರ ಅವರ ರಾಜ್ಯಗಳಿಗೆ ಕರೆದೊಯ್ದು ಅವರನ್ನು ಮಾರಾಟ ಮಾಡುವ ಇಲ್ಲವೇ ಲೈಂಗಿಕ ಕೃತ್ಯಗಳಲ್ಲಿ ಬಳಕೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಭಾರತದಲ್ಲಿ ದಿನನಿತ್ಯ ಸುಮಾರು 200 ರಿಂದ 300 ಮಕ್ಕಳು ನಾಪತ್ತೆಯಾಗುತ್ತಿದ್ದಾರೆ. ಮಾನವ ಕಳ್ಳ ಸಾಗಾಣಿಕೆ ಮತ್ತು ಮಹಿಳಾ ಕಳ್ಳ ಸಾಗಾಣಿಕೆ ಇವೆರಡರಲ್ಲೂ ಯಾವುದೇ ವ್ಯತ್ಯಾಸ ಕಾಣದು. ಚಿಕ್ಕ ವಯಸ್ಸಿನ ಮಕ್ಕಳನ್ನು ಅಪಹರಣ ಮಾಡಿ ಅವರ ಅಂಗಾಂಗಳನ್ನು ಮಾರಾಟ ಮಾಡುವ ಕೆಲಸ ಕೂಡ ನಡೆಯುತ್ತಿದೆ. ಈ ಸಂಬಂಧ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ದೇಶದಲ್ಲಿ ಮತ್ತಷ್ಟು ಕಠಿಣ ಕಾನೂನುಗಳನ್ನು ಜಾರಿಗೆ ತರಬೇಕಾದ ಅವಶ್ಯಕತೆ ಇದೆ. ಹಾಗೆಯೇ ಇದರ ಬಗ್ಗೆ ಜನ ಸಾಮಾನ್ಯರಿಗೆ ಜಾಗೃತಿ ಮೂಡಿಸಬೇಕಾದ ಅವಶ್ಯಕತೆ ಇದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಡಿ.ಕೆ. ಮಂಜಯ್ಯ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಯುವತಿಯರು ಚಿಕ್ಕ-ಚಿಕ್ಕ ಆಸೆಗಳಿಗಾಗಿ ಜೀವನದ ಅಮೂಲ್ಯ ಕ್ಷಣಗಳನ್ನು ಕಳೆದುಕೊಳ್ಳಬಾರದು. ಹೆಣ್ಣು ಮಕ್ಕಳು ಮೊದಲು ಜಾಗೃತರಾಗಬೇಕಾದ ಅವಶ್ಯಕತೆ ಇದ್ದು, ಜೀವನದ ಪ್ರತಿ ಹಂತದಲ್ಲೂ ಯೋಚಿಸಿ ಹೆಜ್ಜೆ ಇಡಬೇಕಾಗಿದೆ. ಇತ್ತೀಚಿನ ದಿನದಲ್ಲಿ ಬಾಲಾಪರಾಧ, ಹೆಣ್ಣು ಮಕ್ಕಳ ಮೇಲೆ ಲೈಂಗಿಕ ಶೋಷಣೆ, ವ್ಯಾಪಕವಾಗಿ ಕಂಡು ಬರುತ್ತಿದೆ. ಇಂತಹ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯಲು ಪ್ರತಿಯೊಬ್ಬರೂ ಜಾಗೃತರಾಗಿ ಇರುವುದು ಅತ್ಯವಶ್ಯಕವಾಗಿದೆ. ಒಂದು ಸಾರಿ ಮೋಸದ ಜಾಲಕ್ಕೆ ಸಿಲುಕಿಕೊಂಡರೆ ಅದರಿಂದ ಹೊರಬರಲು ಸಾಧ್ಯವೇ ಇಲ್ಲ. ಹಾಗಾಗಿ ಪ್ರತಿಯೊಬ್ಬರೂ ಯೋಚಿಸಿ ಭವಿಷ್ಯದ ಹೆಜ್ಜೆಯನ್ನಿಡಿ. ಪ್ರೀತಿ,ಪ್ರೇಮ ಎಂಬ ಕಾಲ್ಪನಿಕ ಆಸೆಗೆ ಬಲಿಯಾಗಬೇಡಿ ಎಂದು ತಿಳಿ ಹೇಳಿದರು.
ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಕೆ.ಆರ್. ಸುರೇಶ್, ಅಧ್ಯಾಪಕ ಡಾ.ಸಿ.ಎಲ್. ಶಿವಕುಮಾರ್, ಐಕ್ಯೂಎಸಿ ಸಂಚಾಲಕ ಜಿ.ಆರ್. ಮೋಹನ್, ಉಪನ್ಯಾಸಕರಾದ ಡಾ.ಜೆ.ಎಸ್. ದಯಾನಂದ, ಎಚ್.ಕೆ. ದಿಲೀಪ್ ಕುಮಾರ್ ಹಾಗೂ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net