ಕೊಳ್ಳೇಗಾಲ: ಕೊಳ್ಳೇಗಾಲ ಪಟ್ಟಣದಲ್ಲಿ ವಿಸ್ಡಮ್ ವಿದ್ಯಾಸಂಸ್ಥೆಯಲ್ಲಿ ಶನಿವಾರದಿಂದ ಭಾನುವಾರದವರೆಗೆ ಆಯೋಜಿಸಿರುವ ವಿಜ್ಞಾನ ವಸ್ತುಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಆಹಾರ ಮೇಳ ಕಾರ್ಯಕ್ರಮ ಕಣ್ಮನ ಸೆಳೆಯಿತು.
ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಕೌಶಲ, ಕ್ರಿಯಾಶೀಲತೆಗೆ ಪ್ರೋತ್ಸಾಹ ನೀಡುವ ಉದ್ದೇಶಕ್ಕೆ ಕೆಲವು ವರ್ಷಗಳಿಂದ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ ವಿಜ್ಞಾನ ವಸ್ತುಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸುತ್ತಿದೆ. ಈ ಬಾರಿ ವಿಶೇಷವಾಗಿ ಆಹಾರ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ವಿಜ್ಞಾನ, ಗಣಿತ, ತಂತ್ರಜ್ಞಾನ, ಜೀವಶಾಸ್ತ್ರ, ಆರೋಗ್ಯ, ಪರಿಸರ ಸಂರಕ್ಷಣೆ, ಪ್ಲಾಸ್ಟಿಕ್ ನಿಷೇಧ ಇನ್ನಿತರ ವಿದ್ಯಾರ್ಥಿಗಳು ತಯಾರಿಸಿದ ನೂರಾರು ಮಾದರಿ ಪ್ರದರ್ಶನಗಳನ್ನು ಪ್ರದರ್ಶಿಸಲಾಗಿತ್ತು. ಪಾಲಕರು ವಸ್ತುಪ್ರದರ್ಶನವನ್ನು ವೀಕ್ಷಿಸಿ ಮಕ್ಕಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸೌರ ವಿದ್ಯುತ್ ನೀರಾವರಿ ವ್ಯವಸ್ಥೆ, ಜಲಶುದ್ಧೀಕರಣ, ಜಲ ವಿದ್ಯುತ್, ಆಹಾರ ಸರಪಳಿ, ಭೂಕಂಪ, ಗಣಿತದ ತರ್ಕ, ಮಾದರಿ ಗ್ರಾಮ, ಕುರಿ ಸಾಕಣೆ, ಮಾನವನ ಹೃದಯ ರಚನೆ, ಸಂಚಾರ ಸಂಕೇತ, ನೀರಿನ ಚಕ್ರ, ಜಲಮೂಲಗಳು, ಸಮುದ್ರ ಜಗತ್ತು, ಸೌರ ಮಂಡಲ, ಬಾಹ್ಯಾಕಾಶ, ಹೈಡ್ರಾಲಿಕ್ ರೊಬಾಟಿಕ್ ಆರ್ಮ್ ಮಾದರಿಗಳು ಗಮನ ಸೆಳೆದವು.
ಈ ಬಗ್ಗೆ ಸುದ್ದಿಗಾರರೊಂದಿಗೆ ಶಾಲೆಯ ಮುಖ್ಯ ಶಿಕ್ಷಕಿ ನಯನ ಕ್ಲಾೃರಿಬಲ್ ಮಾತನಾಡಿ, ಮಕ್ಕಳು ಹಾಗೂ ಶಿಕ್ಷಕರ ಕೌಶಲ ಹಾಗೂ ಕ್ರಿಯಾಶೀಲತೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಶಾಲಾ ಆಡಳಿತ ಮಂಡಳಿ ಕಾರ್ಯನಿರ್ವಹಿಸುತ್ತಿದೆ. ಮಕ್ಕಳು ಬಹಳ ಉತ್ಸಾಹದಿಂದ ವಸ್ತುಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು. ಶಿಕ್ಷಕರು ಉತ್ತಮ ರೀತಿಯಲ್ಲಿ ಮಕ್ಕಳಿಗೆ ಸಾಥ್ ನೀಡಿದ್ದಾರೆ. ವಿಜ್ಞಾನ, ತಂತ್ರಜ್ಞಾನ ಮತ್ತು ಪರಿಸರ, ಆರೋಗ್ಯದ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವ ಸಲುವಾಗಿ ವಸ್ತುಪ್ರದರ್ಶನ ಆಯೋಜಿಸಲಾಗಿದೆ ಎಂದರು.
ಆಹಾರ ಮೇಳಕ್ಕೆ ಉತ್ತಮ ಸ್ಪಂದನೆ: ಈ ವರ್ಷ ಆಯೋಜಿಸಲಾಗಿದ್ದ ಆಹಾರ ಮೇಳಕ್ಕೂ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಪಾಲಕರು ಹಾಗೂ ಸಾರ್ವಜನಿಕರು ಸಿಹಿ, ಕಾರ ತಿಂಡಿ ತಿನಿಸುಗಳನ್ನು ಖರೀದಿಸಿ ಸವಿದರು. ರೇಷ್ಮೆ ಸೀರೆಗಳು, ಗೃಹ ಬಳಕೆಯ ಅಲಂಕಾರಿಕ ವಸ್ತುಗಳು, ಮಣ್ಣಿನ ಮಡಕೆ, ಬಾಳೆ ನಾರಿನ ಅಲಂಕಾರಿಕ ವಸ್ತುಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಮಕ್ಕಳಿಗಾಗಿ ಮನರಂಜನೆ ಆಟಗಳು, ವಿಸ್ಡಮ್ ಆರೋಗ್ಯ ತಪಾಸಣೆ ಕೇಂದ್ರ ವಿಶೇಷವಾಗಿತ್ತು.
ವೈವಿಧ್ಯಮಯ ನೃತ್ಯ: ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಸಡಗರ ಸಂಭ್ರಮದಿಂದ ನಡೆಯಿತು. ಭರತನಾಟ್ಯ, ಕೊಡವ ನೃತ್ಯ, ಲಾವಣಿ, ಕೂಚಿಪುಡಿ, ಕಥಕಳಿ, ಒಡಿಸ್ಸಿ ಇನ್ನಿತರ ವೈವಿಧ್ಯಮಯ ನೃತ್ಯಗಳ ಪ್ರದರ್ಶನ ಎಲ್ಲರನ್ನು ಆಕರ್ಷಿಸಿತು. ವಿಸ್ಡಮ್ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ ಕಾರ್ಯದರ್ಶಿ ಮಧು ಮಲ್ಲೇಶ್, ಶಿಕ್ಷಕರಾದ ಶಾಂತಿ, ಸಂಗೀತ, ಮಂಜುಳಾ, ರೋಹಿನ್ ತಾಜ್, ಮಮತಾ, ಸ್ತುತಿ, ಲೋಕ ಮಾತ, ಚಂದನ, ಸಾಬ ಸ್ಟೀನ್, ಲಾವಣ್ಯ, ಚರಿತ ಬಾಯ್, ಅಲೆಗ್ಸಾಂಡರ್, ಸಿಂಧೂಜಿ, ಸುಷ್ಮಾ, ಸಹನಾ, ನಮ್ರತಾ, ಲಾವಣ್ಯಾ ಇದ್ದರು.