ವಿಷ್ಣುವಿನಂತೆ ಬುದ್ಧನ ಆರಾಧಿಸುತ್ತಾರಾ? ಡಾ.ಖರ್ಗೆ ಪ್ರಶ್ನೆ

2305Klb03
Published on

ಕಲಬುರಗಿ: ಬುದ್ಧ ಎಂದಿಗೂ ನಾನು ದೇವರು ಎನ್ನಲಿಲ್ಲ. ಆದರೆ ಹಿಂದು ಧರ್ಮದಲ್ಲಿ ಬುದ್ಧನನ್ನು ವಿಷ್ಣುವಿನ ಅವತಾರ ಎನ್ನುತ್ತಾರೆ. ವಿಷ್ಣುವಿನ ಅವತಾರಗಳಾದ ರಾಮ, ಕೃಷ್ಣ, ಪರಶುರಾಮರಂತೆ ಬುದ್ಧನನ್ನು ಆರಾಧಿಸುತ್ತಾರಾ? ಭಕ್ತಿಯಿಂದ ಕಾಣುತ್ತಾರಾ? ಎಂದು ಎಐಸಿಸಿ ಅಧ್ಯಕ್ಷ, ಬುದ್ಧ ವಿಹಾರ ಸಂಸ್ಥಾಪಕ, ರಾಜ್ಯಸಭೆ ಪ್ರತಿಪಕ್ಷ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದರು.

ನಗರದ ಹೊರವಲಯದ ಬುದ್ಧ ವಿಹಾರದಲ್ಲಿ ಗುರುವಾರ ಏರ್ಪಡಿಸಿದ್ದ ಬುದ್ಧ ಪೂರ್ಣಿಮೆಯಲ್ಲಿ ಬುದ್ಧನ ಮೂರ್ತಿಗೆ ನಮನಗಳನ್ನು ಸಲ್ಲಿಸಿ ಮಾತನಾಡಿ, ಬುದ್ಧನನ್ನು ವಿಷ್ಣು ಎನ್ನುವವರು ಆರಾಧಿಸುತ್ತಾರಾ? ಎಂದಿದ್ದಕ್ಕೆ ಮೋದಿ ಅವರು ರಾಮ ಕೃಷ್ಣರನ್ನು ಬೇರೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು ಎಂದು ಹೇಳಿದರು.

ಎಲ್ಲ ಧರ್ಮಗಳಲ್ಲಿ ಕಟ್ಟು ಮತ್ತು ನೈಜ ಕಥೆಗಳಿವೆ. ಕೆಲವರು ಕಥೆಗಳನ್ನು ಅತಿಶಯೋಕ್ತಿಯಾಗಿಸಿ ಜನರನ್ನು ನಂಬಿಸಿದರು. ಬುದ್ಧ ಎಲ್ಲಿಯೂ ಸುಳ್ಳು ಹೇಳಲಿಲ್ಲ. ವೈಜ್ಞಾನಿಕ ವಿಚಾರ, ದೃಷ್ಟಿಕೋನದಿಂದ ಎಲ್ಲವನ್ನು ನೋಡಬೇಕು ಎಂದಿದ್ದರು. ೧೨ನೇ ಶತಮಾನದಲ್ಲೂ ಬಸವಣ್ಣನವರು ವಚನಗಳ ಮೂಲಕ ವೈಜ್ಞಾನಿಕತೆಯನ್ನು ಸಾರಿದ್ದರು. ಎಲ್ಲರೂ ನ್ಯಾಯದ ಪರವಾದ ಧರ್ಮದ ಬಗ್ಗೆ ಚಿಂತನೆ ಮಾಡಬೇಕು ಎಂದು ಹೇಳಿದರು.

ಎಲ್ಲರೂ ಬುದ್ಧನನ್ನು ಅರಿಯಬೇಕು. ಬುದ್ಧನ ಮಾರ್ಗದಲ್ಲಿ ಸಾಗಿದರೆ ಜೀವನದಲ್ಲಿ ಬೆಳಕು ಲಭಿಸುತ್ತದೆ. ಜಪಾನ್, ಥಾಯ್ಲೆಂಡ್, ಇಂಡೋನೇಷ್ಯಾ, ಮ್ಯಾನ್ಮಾರ್, ವಿಯೆಟ್ನಾಂ ಸೇರಿ ಹಲವು ರಾಷ್ಟçಗಳ ಜನರು ಬುದ್ಧನ ಕ್ಷೇತ್ರಗಳಿಗೆ ಭೇಟಿ ನೀಡುತ್ತಾರೆ. ಆದರೆ ನಮ್ಮ ದೇಶದವರು ವಾರಣಾಸಿಯಿಂದ ೧೬ ಕಿ.ಮೀ.ದೂರದಲ್ಲಿನ ಸಾರನಾಥಗೆ ಹೋಗುವುದಿಲ್ಲ. ಬುದ್ಧ ಐವರು ಶಿಷ್ಯರಿಗೆ ಬೌದ್ಧ ಧರ್ಮ ಬೋಧಿಸಿ ದೀಕ್ಷೆ ಕೊಟ್ಟ ಸ್ಥಳ ಸಾರನಾಥ ಎಂದರು.

ಉಪನ್ಯಾಸ ನೀಡಿದ ಸಾಹಿತಿ ಎಚ್.ಆರ್. ಸ್ವಾಮಿ, ಕನ್ನಡ ಸಾಹಿತ್ಯದ ಚರಿತ್ರೆಯಲ್ಲಿ ಜೈನ ಕವಿಗಳು ಯಥೇಚ್ಛ ಸಾಹಿತ್ಯ ರಚಿಸಿದ್ದಾರೆ. ಬುದ್ಧನ ಕಾಲದಲ್ಲಿ ಯಾವ ಸಾಹಿತ್ಯ ಇತ್ತು, ಇಲ್ಲವೋ ಎಂಬ ಪ್ರಶ್ನೆಗೆ ಉತ್ತರ ದೊರಕಿಲ್ಲ. ಬುದ್ಧನ ಧರ್ಮದಲ್ಲಿ ವೈಜ್ಱನಿಕ ವಿಚಾರಗಳು ಇದ್ದಿದ್ದರಿಂದಲೇ ಆಲ್ಬರ್ಟ್ ಐನ್‌ಸ್ಟೀನ್, ವಿಜ್ಱನದ ಆಶಯಗಳಿಗೆ ಅನುಗುಣವಾದದ್ದು ಬೌದ್ಧ ಧರ್ಮ ಎಂದಿದ್ದರು. ಬುದ್ಧನ ಸರಳ ಬದುಕಿನ ಚಿಂತನೆಗಳನ್ನು ಬಸವಣ್ಣನವರ ವಚನಗಳು ಹಾಗೂ ಗಾಂಧೀಜಿ ಬದುಕಿನಲ್ಲಿ ಕಾಣಬಹುದು ಎಂದು ಹೇಳಿದರು.

ಮಲ್ಲಿಕಾರ್ಜುನ ಖರ್ಗೆ ಅವರ ಪತ್ನಿ ರಾಧಾಬಾಯಿ ಖರ್ಗೆ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ್, ಶಾಸಕರಾದ ಅಲ್ಲಮಪ್ರಭು ಪಾಟೀಲ್, ಎಂ.ವೈ. ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ, ಅರವಿಂದ ಅರಳಿ, ಪ್ರಮುಖರಾದ ಮಾಲಿಕಯ್ಯ ಗುತ್ತೇದಾರ್, ರೇವುನಾಯಕ ಬೆಳಮಗಿ, ಜಗದೇವ ಗುತ್ತೇದಾರ, ಆರ್.ಕೆ.ಪಾಟೀಲ್, ನೀಲಕಂಠರಾವ ಮೂಲಗೆ, ಅಪ್ಪಗೆರೆ ಸೋಮಶೇಖರ ಸೇರಿದಂತೆ ಹಲವು ಬೌದ್ಧ ಉಪಾಸಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net