

ಕುಣಿಗಲ್: ತಾಲೂಕಿನ ಬಿಳಿ ದೇವಾಲಯ ಗ್ರಾಮದ ಬಳಿ ಇರುವ ಇತಿಹಾಸ ಪ್ರಸಿದ್ಧ ಬೆಟ್ಟದ ಶ್ರೀ ರಂಗನಾಥಸ್ವಾಮಿ ದೇವಾಲಯಕ್ಕೆ ಸಂಪರ್ಕಿಸುವ ಮೆಟ್ಟಿಲುಗಳ ಬಳಿ ಇರುವ ವಿಷ್ಣುಮೂರ್ತಿಯ ವಿಗ್ರಹವನ್ನು ಕಿಡಿಗೇಡಿಗಳು ಗುರುವಾರ ರಾತ್ರಿ ವಿರೂಪಗೊಳಿಸಿದ್ದಾರೆ. ಕಳೆದೊಂದು ವರ್ಷಗಳ ಹಿಂದೆ ಇದೇ ಮೂರ್ತಿಯ ಕೈಯನ್ನು ಮುರಿಯಲಾಗಿತ್ತು. ಆದರೆ ಮತ್ತೆ ಕೈ ನಿರ್ಮಿಸಿ ಪೂಜೆ ಪುನಸ್ಕಾರಗಳೊಂದಿಗೆ ಮರು ಪ್ರತಿಷ್ಠಾಪನೆ ಮಾಡಲಾಗಿತ್ತು. ತಡರಾತ್ರಿ ವಿಷ್ಣುಮೂರ್ತಿ ವಿಗ್ರಹವನ್ನು ಕಲ್ಲಿನಿಂದ ಒಡೆದು ಕಾಲಿನಿಂದ ಒದ್ದು ವಿರೂಪಗೊಳಿಸಿರುವ ದೃಶ್ಯ ದೇವಾಲಯದ ಬಳಿ ಅಳವಡಿಸಿರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಿಡಿಗೇಡಿಯನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂಬುದು ಭಕ್ತರ ಆಗ್ರಹವಾಗಿದೆ. ದೇವಾಲಯದ ಕಾರ್ಯನಿರ್ವಾಣ ಅಧಿಕಾರಿಗಳ ದೂರು ಹಿನ್ನೆಲೆ ಸ್ಥಳಕ್ಕೆ ಕುಣಿಗಲ್ ಪೊಲೀಸ್ ಠಾಣೆಯ ಸಿಪಿಐ ಭೇಟಿ ನೀಡಿ ಪರಿಶೀಲಿಸಿದ್ದು, ಕುಣಿಗಲ್ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.