

ಅರಕಲಗೂಡು: ಬೆಂಗಳೂರಿನಲ್ಲಿ ಚಿತ್ರನಟ ವಿಷ್ಣುವರ್ಧನ್ ಅವರ ಪುಣ್ಯಭೂಮಿಯನ್ನು ಪುನರ್ ಸ್ಥಾಪಿಸುವಂತೆ ಒತ್ತಾಯಿಸಿ ಸುವರ್ಣ ಕರ್ನಾಟಕ ರಕ್ಷಣಾ ಸೇನೆ ಕಾರ್ಯಕರ್ತರು ತಾಲೂಕಿನ ಸಿದ್ದಾಪುರ ಗೇಟ್‌ನಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು.
ಗೋವು ಕರೆತಂದು ಪ್ರತಿಭಟನೆ ಆರಂಭಿಸಿದ ಕಾರ್ಯಕರ್ತರು ವಿಷ್ಣುವರ್ಧನ್ ಅವರ ಸಮಾಧಿ ನೆಲಸಮ ಮಾಡಿರುವುದು ಖಂಡನೀಯ, ಮಾನವಿಯತೆ ಇಲ್ಲದವರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುವರ್ಣ ಕರ್ನಾಟಕ ರಕ್ಷಣಾ ಸೇನೆ ಅಧ್ಯಕ್ಷ ಎಸ್. ರಾಘವೇಂದ್ರಗೌಡ ಮಾತನಾಡಿ, ಡಾ.ವಿಷ್ಣುವರ್ಧನ್ ಒಬ್ಬ ವ್ಯಕ್ತಿಯಾಗಿರಲಿಲ್ಲ ಒಂದು ದೊಡ್ಡ ಶಕ್ತಿಯಾಗಿದ್ದರು. ಅಂತಹ ಗೌರವಾನ್ವಿತ ವ್ಯಕ್ತಿಯ ಸಮಾಧಿಯನ್ನು ರಾತ್ರೋರಾತ್ರಿ ತೆರವುಗೊಳಿಸಿ ನೆಲಸಮಗೊಳಿಸಲಾಗಿದೆ. ಸಾಹಸಸಿಂಹ ವಿಷ್ಣುವರ್ಧನ್ ಪುಣ್ಯಭೂಮಿಯನ್ನು ಪುನರ್ ನಿರ್ಮಾಣ ಕಾರ್ಯವನ್ನು ಸರ್ಕಾರ ಮಾಡಬೇಕು. ಇಲ್ಲವಾದರೆ ಅಭಿಮಾನಿಗಳಿಗೆ ಸರ್ಕಾರ ಕಾನೂನು ಚೌಕಟ್ಟಿನ ಬೆಲೆಯನ್ನು ನಿಗದಿಪಡಿಸಿ, ಆ ಜಾಗವನ್ನು ಖರೀದಿ ಮಾಡಿ ಬೃಹತ್ ಸ್ಮಾರಕ ಕಟ್ಟಬೇಕೆಂದು ಆಗ್ರಹಿಸಿದರು.
ಕನ್ನಡ ಚಲನಚಿತ್ರ ರಂಗಕ್ಕೆ ವಿಷ್ಣುವರ್ಧನ್ ಅವರ ಕೊಡುಗೆಯ ಬಗ್ಗೆ ಇಡೀ ಕರುನಾಡಿನ ಮನೆಗಳಲ್ಲಿ ಮಾತನಾಡುತ್ತೇವೆ. ಎಲ್ಲರ ಮನೆಮಾತಾದ ಅಂತಹ ಅದ್ಭುತ ನಟ ಶ್ರೇಷ್ಠರಿಗೆ ಸರ್ಕಾರ ಸೂಕ್ತ ಗೌರವ ನೀಡಿಲ್ಲ. 2009 ರಿಂದಲೂ ಸ್ಮಾರಕ ನಿರ್ಮಾಣಕ್ಕಾಗಿ ಕಾನೂನು ಹೋರಾಟಗಳನ್ನು ಅಭಿಮಾನಿಗಳು ಮಾಡಿಕೊಳ್ಳುತ್ತಲೇ ಬರುತ್ತಿದ್ದು, ಇಷ್ಟೆಲ್ಲಾ ನಡೆಯುತ್ತಿದ್ದರೂ ಅಭಿಮಾನ್ ಸ್ಟುಡಿಯೋದಲ್ಲಿರುವ ಡಾ. ವಿಷ್ಣುವರ್ಧನ್ ಅವರ ಪುಣ್ಯಭೂಮಿಯ ಭಾಗವನ್ನು ರಾತ್ರೋರಾತ್ರಿ ಕೆಡವಿ ಅನ್ಯಾಯ ಮಾಡಿರುವುದು ಅಭಿಮಾನಿಗಳಲ್ಲಿ ನೋವುಂಟುಮಾಡಿದೆ. ಈ ನಿಟ್ಟಿನಲ್ಲಿ ಎಚ್ಚೆತ್ತು ಡಾ. ವಿಷ್ಣುವರ್ಧನ್ ಅವರ ಸಮಾಧಿ ಸ್ಥಳದ ಭೂಮಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೂಡಲೇ ಜಾಗದ ಮಾಲೀಕರಿಂದ ಸ್ವಾಧೀನಪಡಿಸಿಕೊಂಡು ಸ್ಮಾರಕವನ್ನು ನಿರ್ಮಿಸಿ ಅಭಿವೃದ್ಧಿಪಡಿಸಬೇಕು. ಇಲ್ಲವಾದರೆ ಸರ್ಕಾರದ ವಿರುದ್ದ ಹೋರಾಟ ನಡೆಸಲಾಗುವುದು ಎಂದರು.
ಸೇನೆಯ ಧನಪಾಲ್‌ಗೌಡ, ದಿನೇಶ್‌ಗೌಡ, ಸುದೀಪ್‌ಗೌಡ, ಪ್ರಕಾಶ್, ರಮೇಶ್, ಗಿರೀಶ್‌ಗೌಡ, ಆನಂದ್, ಪುಟ್ಟರಾಜ ಅರಸ್, ತಮ್ಮಯಣ್ಣ, ಪ್ರಸಾದ್‌ರಾಜ ಅರಸ್, ಪ್ರಭುರಾಜ ಅರಸ್, ಮಣಿಕಂಠ, ದಶರಥ ರಾಜ ಅರಸ್, ಮಂಜೇಗೌಡ, ಹರೀಶ್, ದಿನೇಶ್, ಅಶೋಕ್, ರಜಿನಿ, ಸುಂದರ್, ಪ್ರದೀಪ, ರವಿ, ಗೋವಿಂದ, ಶಶಾಂಕ್, ದರ್ಶನ್, ವಾಸು, ಸುದರ್ಶನ್, ಶರತ್, ಕೃಷ್ಣೆಗೌಡ, ಸುನಿಲ್, ಬಾಲು, ಮಹೇಂದ್ರ, ಸ್ವಾಮಿಗೌಡ , ರಮೇಶ್‌ಗೌಡ ಇತರರಿದ್ದರು.