ವಿಷಹಾಕಿ ಎತ್ತು ಸಾವು?

28 jyp 2 web
Published on

ಜಯಪುರ: ಗುಡ್ಡೇತೋಟ ಗ್ರಾಮ ಪಂಚಾಯಿತಿ ಬೈರೇದೇವ್ರು ಗ್ರಾಮದ ಬಾಗೊಳ್ಳಿ ರಸ್ತೆಯಲ್ಲಿ ಭಾನುವಾರ ಎತ್ತು ಸಾವನ್ನಪ್ಪಿದೆ. ಇದು ಸಹಜ ಸಾವಲ್ಲ ಎಂದು ಹೇಳಿರುವ ಸಾರ್ವಜನಿಕರ ದೂರಿನ ಮೇರೆಗೆ ಗುಡ್ಡೇತೋಟ ಪಿಡಿಒ ಜಯಪುರ ಠಾಣೆಗೆ ದೂರು ನೀಡಿದ್ದಾರೆ. ಎರಡು ತಿಂಗಳಿನಲ್ಲಿ ಬೈರೆದೇವ್ರು ಗ್ರಾಮದ ಸಬ್ಬಳ್ಳಿ, ಬಾಗೊಳ್ಳಿ, ಶಿಡ್ಲೆಮನೆ ಭಾಗಗಳಲ್ಲಿ ಹತ್ತಕ್ಕೂ ಹೆಚ್ಚು ಜಾನುವಾರುಗಳು ಅಸ್ವಾಭಾವಿಕವಾಗಿ ಸಾವನ್ನಪ್ಪಿವೆ. ಜಾನುವಾರುಗಳಿಗೆ ವಿಷ ಹಾಕಿ ಕೊಲ್ಲಲಾಗುತ್ತಿದೆ. ಈ ಹಿಂದೆ ಕ್ರಮಕೈಗೊಳ್ಳಲು ಪೊಲೀಸರಿಗೆ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಕಾರಣ ಜಾನುವಾರುಗಳ ಸರಣಿ ಹತ್ಯೆ ಮುಂದುವರಿದಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಎತ್ತಿನ ಸಾವಿನ ತನಿಖೆಯಾಗಬೇಕು ಎಂದು ಗುಡ್ಡೇತೋಟ ಗ್ರಾಪಂ ಅಧ್ಯಕ್ಷ ಪ್ರಶಾಂತ್ ಹಾಗೂ ಗ್ರಾಮದ ರೈತರು ಒತ್ತಾಯಿಸಿದ್ದು, ಜಯಪುರ ಠಾಣೆಯಲ್ಲಿ ಪಿಡಿಒ ಶೋಭಾ ದೂರು ದಾಖಲಿಸಿದ್ದಾರೆ. ಪೊಲೀಸರು ಸ್ಥಳ ಪರಿಶೀಲಿಸಿದ್ದು, ಪಶು ವೈದ್ಯಾಧಿಕಾರಿಗಳಾದ ಡಾ. ಪವಿತ್ರಾ, ಡಾ. ಮಣಿಕಾಂತ್ ಮರಣೋತ್ತರ ಪರೀಕ್ಷೆ ನಡೆಸಿದರು. ಸಾವಿನ ಕಾರಣ ಪತ್ತೆ ಹಚ್ಚಲು ಸಂಗ್ರಹಿಸಿದ ಮಾದರಿಯನ್ನು ಮಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸುವುದಾಗಿ ತಿಳಿಸಿದ್ದಾರೆ.

ಎರಡು ವರ್ಷ ವಯಸ್ಸಿನ ಎತ್ತಿನ ಕಳೇಬರಹದ ಬಾಹ್ಯ ಪರಿಶೀಲನೆಯಲ್ಲಿ ಇದೊಂದು ಅಸಹಜ ಸಾವು ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಅದರ ವಿವಿಧ ಅಂಗಗಳ ಮಾದರಿಗಳನ್ನು ಸಂಗ್ರಹಿಸಲಾಗಿದೆ. ನಿಖರ ಕಾರಣ ತಿಳಿಯಲು ಮಾದರಿಗಳನ್ನು ಮಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net