

ಆನೇಕಲ್: ಮಾಧ್ಯಮಗಳಲ್ಲಿ ಇತ್ತೀಚೆಗೆ ವಿಷಯ ವಿಶ್ಲೇಷಣೆ, ಪದಪುಂಜಗಳ ಬಳಕೆಯಲ್ಲಿ ಬಿಗಿ ಕಾಣದೆ ಅತೀ ರಂಜಿತವಾಗುತ್ತಿರುವುದು ಕಾಣುತ್ತಿದೆ ಎಂದು ಡಿವೈಎಸ್ಪಿ ನಂಜುಂಡೇಗೌಡ ತಿಳಿಸಿದರು.
ಪಟ್ಟಣದ ಸಾಮರ್ಥ್ಯಸೌಧದಲ್ಲಿ ಕಾರ್ಯನಿರತ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಗುರುವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯಲ್ಲಿ ಮಾತನಾಡಿದರು.
ಸಂವಿಧಾನದ ನಾಲ್ಕನೇ ಅಂಗ ಎಂದು ಬಿಂಬಿತವಾಗಿರುವ ಪತ್ರಿಕೆಗಳು ಸ್ವಾತಂತ್ರ್ಯಪೂರ್ವದಿಂದಲೂ ದೇಶ ಭಕ್ತಿಯನ್ನು ಸೃಜಿಸಿ, ಸಾಮಾಜಿಕ ಸಮಸ್ಯೆ ಬಗ್ಗೆ ಬೆಳಕು ಚೆಲ್ಲುವ, ಜನರಿಗೆ ತಲುಪಬೇಕಾದ ಸವಲತ್ತುಗಳ ಬಗ್ಗೆ ತಿಳಿ ಹೇಳುವ ಸಾಮಾಜಿಕ ಜವಾಬ್ದಾರಿ ಅನುಸರಿಸಿಕೊಂಡು ಬರುತ್ತಿವೆ ಎಂದರು.
ಆದರೆ ಇತ್ತೀಚೆಗೆ ಹೆಚ್ಚಿನ ಪ್ರಮಾಣದ ಮಾಧ್ಯಮಗಳು ತಮ್ಮದೇ ವ್ಯಾಖ್ಯಾನದ ಶೈಲಿ ರೂಢಿಸಿಕೊಂಡಿದ್ದು, ಆಡು ಭಾಷೆಗೆ ಮಹತ್ವ ನೀಡಿವೆ. ಕ್ರೈಂ, ಜನಾಂಗೀಯ ಕಲಹ ವಿಷಯದ ಚರ್ಚೆಯಲ್ಲಿ ಭಾಗವಹಿಸುವವರು ವಿಶ್ಲೇಷಣೆ ಮರೆತು ತೀರ್ಪು ಪ್ರಕಟಿಸುವ ಹವ್ಯಾಸ ಕಂಡುಬಂದಿದೆ. ಇದು ಬದಲಾಗಬೇಕು ಎಂದರು.
ಬೊಮ್ಮಸಂದ್ರ ಕೈಗಾರಿಕಾ ಮಾಲೀಕರ ಸಂಘದ ಪ್ರತಿನಿಧಿಗಳಾದ ನರೇಂದ್ರಕುಮಾರ್ ಮತ್ತು ಸಂಜೀವ್ ಸಾವಂತ್, ಸಂಸ್ಥೆ ವತಿಯಿಂದ ಪತ್ರಕರ್ತರಿಗೆ ಆರೋಗ್ಯ ವಿಮೆ ಪತ್ರ ವಿತರಿಸಿದರು.
ದಿನದ 24 ಗಂಟೆಯೂ ಕೆಲಸ ಮಾಡುವ ಪತ್ರಕರ್ತರ ಜೀವಕ್ಕೆ ಭದ್ರತೆ ನೀಡುವ ದೃಷ್ಟಿಯಿಂದ ಸಂಘದ ಅಧ್ಯಕ್ಷ ಪ್ರಸಾದ್ ಮಾರ್ಗದರ್ಶನದಲ್ಲಿ ವಿಮೆ ಮಾಡಿಸಲಾಗಿದೆ. ಭದ್ರತೆ ಪಡೆದ ಪತ್ರಕರ್ತರು ಸಾಮಾಜಿಕ ಬದ್ಧತೆಯನ್ನೂ ಪ್ರದರ್ಶಿಸಬೇಕು ಎಂದು ನರೇಂದ್ರ ಕುಮಾರ್ ಸಲಹೆ ನೀಡಿದರು.
ಕಾರ್ಯನಿರತ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಮರೇಶ್ ಮಾತನಾಡಿ, ಮುಂದಿನ ದಿನಗಳಲ್ಲಿ ಪತ್ರಕರ್ತರಿಗೆ ತಜ್ಞರಿಂದ ಕಾರ್ಯಾಗಾರ ಏರ್ಪಡಿಸುವುದು, ಸರ್ಕಾರದಿಂದ ಸಿಗಬಹುದಾದ ಸವಲತ್ತು ಪಡೆಯುವುದು, ಸಂಘಕ್ಕೆ ನಿವೇಶನ ಪಡೆದು ಭವನ ನಿರ್ಮಿಸುವುದೂ ಸೇರಿ ಹಲವು ಕ್ರಿಯಾತ್ಮಕ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.
ಪತ್ರಕರ್ತರ ಸಂಘದ ಗೌರವ ಅಧ್ಯಕ್ಷ ರವಿಶಾಸ್ತ್ರಿ ಪತ್ರಿಕಾ ದಿನಾಚರಣೆ ಬಗ್ಗೆ ಮಾತನಾಡಿದರು. ವೃತ್ತ ನಿರೀಕ್ಷಕ ಕೃಷ್ಣ ಲಮಾಣಿ, ಪಿಎಸೈ ಮುರಳೀಧರ, ಹಿರಿಯ ಪತ್ರಕರ್ತರಾದ ಸಿ.ಆರ್.ವಿಜಯಕುಮಾರ್ ಕೆ.ಶಿವಣ್ಣ, ರವೀಂದ್ರನಾಥ್, ಹುಸ್ಕೂರು ಮಂಜುನಾಥ್, ಎನ್. ಮಂಜುನಾಥ್, ಡಾ.ಚಿನ್ನಪ್ಪ ವೈ ಚಿಕ್ಕಾಗಡೆ, ಕೆ.ಚಂದ್ರಶೇಖರ್, ನಾರಾಯಣ್, ದನಗೂರು ಶಿವು, ಕುಲಕರ್ಣಿ, ಸಂಘದ ಸಂಘಟನಾ ಕಾರ್ಯದರ್ಶಿಗಳಾದ ಮಹದೇವ್, ಕಾರ‌್ಯಕಾರಿಣಿ ಸಮಿತಿ ಸದಸ್ಯರಾದ ಟಿ. ಅಂಬರೀಶ್, ಶಶಿಕುಮಾರ್, ಸಹಕಾರ್ಯದರ್ಶಿ ಮಲ್ಲಿಕಾರ್ಜುನ ಆರಾಧ್ಯ, ರಘುರಾಮ್ ಪಾಲ್ಗೊಂಡಿದ್ದರು. ಸಮಿತಿ ಉಪಾಧ್ಯಕ್ಷರಾದ ನವೀನ್ ಚಂದ್ರಶೆಟ್ಟಿ, ಡಿ. ಪುನೀತ್, ಖಜಾಂಚಿ ಮಂಜುನಾಥ್, ಸಂಘದ ಕಾರ್ಯದರ್ಶಿ ಚಂದ್ರು ವೇದಿಕೆಯ ನಿರ್ವಹಣೆ ಮಾಡಿದರು.
ಸಂಘದ ಸದಸ್ಯರಾದ ಮಹೇಶ್ ಊಗಿನಹಳ್ಳಿ, ಅನಿಲ್‌ಕುಮಾರ್, ಎಸ್.ಆರ್.ಎಸ್ ಚಂದ್ರಶೇಖರ್, ಸುರೇಶ್, ಕಿರಣ್, ಹರೀಶ್,ಬಂಗಾರು ಬಾಬು, ಮುನಿಯಲ್ಲಪ್ಪ, ಪ್ರಸನ್ನ ಕುಮಾರ್, ಅಜಯ್ ಕುಮಾರ್, ಲಕ್ಷಣ್ ಮತ್ತಿತರರು ಇದ್ದರು. ದಿನಪತ್ರಿಕೆ ವಿತರಕರಿಗೆ ಪಡಿತರ ಕಿಟ್, ಸ್ವಚ್ಛತಾ ಕಿಟ್ ವಿತರಿಸಲಾಯಿತು.