ವಿಷ ಕುಡಿದು ದಂಪತಿ ಆತ್ಮಹತ್ಯೆ

29 mlv 1
Published on

ಮಳವಳ್ಳಿ: ಪಟ್ಟಣದ ಎನ್‌ಇಎಸ್ ಬಡಾವಣೆಯ ನಾಲ್ಕನೇ ವಾರ್ಡ್‌ನ ಮನೆಯೊಂದರಲ್ಲಿ ದಂಪತಿ ಸೋಮವಾರ ರಾತ್ರಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತಾಲೂಕಿನ ಹೊಸಹಳ್ಳಿ ಗ್ರಾಮದ ರಾಜೇಶ್(50), ಪತ್ನಿ ಸುಧಾ(44) ಮೃತರು. ಇವರು ಹಲವು ವರ್ಷಗಳಿಂದ ಬಡಾವಣೆಯಲ್ಲಿ ಮನೆ ಬಾಡಿಗೆ ಪಡೆದು ವಾಸವಿದ್ದರು. ರಾಜೇಶ್‌ಗೆ ಸಕ್ಕರೆ ಕಾಯಿಲೆಯಿದ್ದು, ಕೆಲವು ವರ್ಷಗಳ ಹಿಂದೆ ಕಾಲಿನಲ್ಲಿ ಸಣ್ಣ ಪ್ರಮಾಣದ ಗಾಯವಾಗಿ ಚಿಕಿತ್ಸೆ ಪಡೆದರೂ ಗುಣಮುಖವಾಗದ ಹಿನ್ನೆಲೆಯಲ್ಲಿ ಮೊಣಕಾಲಿನವರೆಗೆ ತೆಗೆದುಹಾಕಲಾಗಿತ್ತು. ಸುಧಾರಿಸಿಕೊಂಡ ನಂತರ ಕೆ.ಎಂ.ದೊಡ್ಡಿಯ ಒಡವೆ ಅಂಗಡಿಯೊಂದರಲ್ಲಿ ಅಕ್ಕಸಾಲಿಗ ವೃತ್ತಿ ಮಾಡುತ್ತಿದ್ದರು ಎನ್ನಲಾಗಿದೆ.

ವಿವಾಹವಾಗಿ 20 ವರ್ಷಗಳಾಗಿದ್ದರೂ ದಂಪತಿಗೆ ಮಕ್ಕಳಿರಲಿಲ್ಲ ಹಾಗೂ ಕಾಲು ಕಳೆದುಕೊಂಡು ದುಡಿಯುವ ಹಣ ಜೀವನ ನಿರ್ವಹಣೆಗೆ ಸಾಕಾಗದೆ ಮನನೊಂದಿದ್ದರು. ಹೀಗಾಗಿ ಪತಿ-ಪತ್ನಿ ಇಬ್ಬರೂ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಗಳವಾರ ಬೆಳಗ್ಗೆ 11 ಗಂಟೆಯಾದರೂ ಮನೆಯಿಂದ ಯಾರೂ ಹೊರಬಾರದಿರುವುದನ್ನು ಗಮನಿಸಿದ ಪಕ್ಕದ ಮನೆಯವರು ಕಿಟಕಿ ಮೂಲಕ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ವಿಷಯ ತಿಳಿದು ಡಿವೈಎಸ್‌ಪಿ ನವೀನ್‌ಕುಮಾರ್, ಇನ್ಸ್‌ಪೆಕ್ಟರ್ ಜಗದೀಶ್ ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸಿ, ಮೃತದೇಹಗಳನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದರು. ಮರಣೋತ್ತರ ಪರೀಕ್ಷೆಯ ನಂತರ ಕುಟುಂಬದವರಿಗೆ ಶವಗಳನ್ನು ಒಪ್ಪಿಸಲಾಯಿತು. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net