

ಆಳಂದ: ಮಾಧ್ಯಮದ ಮೇಲೆ ಜನರು ಸಾಕಷ್ಟು ನಂಬಿಕೆ ಇಟ್ಟುಕೊಂಡಿದ್ದು, ಪತ್ರಿಕೆಗಳು ಗುಣಮಟ್ಟ ಉಳಿಸಿಕೊಂಡು ಕೆಲಸ ಮಾಡಬೇಕು. ಉದ್ಯಮವಾಗದೆ, ಸೇವಾ ಮನೋಭಾವಕ್ಕೆ ಆದ್ಯತೆ ನೀಡಬೇಕು ಎಂದು ಶಾಸಕ ಬಿ.ಆರ್.ಪಾಟೀಲ್ ಅಭಿಪ್ರಾಯಪಟ್ಟರು.
ಎ.ವಿ.ಪಾಟೀಲ್ ಪದವಿ ಮಹಾವಿದ್ಯಾಲಯದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದಿAದ ಬುಧವಾರ ಹಮ್ಮಿಕೊಂಡಿದ್ದ ಓದುಗರ ಹಾಗೂ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ, ಮುದ್ರಣ ಮಾಧ್ಯಮ ಹೆಚ್ಚು ವಿಶ್ವಾಸಾರ್ಹತೆ ಹೊಂದಿದ್ದು, ದೃಶ್ಯ ಹಾಗೂ ಸೋಷಿಯಲ್ ಮಿಡಿಯಾಗಳಲ್ಲಿನ ವಿಷಯಗಳನ್ನು ನೇರವಾಗಿ ನಂಬದ ಸ್ಥಿತಿ ನಿರ್ಮಾಣವಾಗಿದೆ. ಮಾಧ್ಯಮ ಸರ್ಕಾರದ ಕಿವಿ ಹಿಂಡುವ ಕೆಲಸ ಮಾಡಬೇಕು. ಎಲೆಕ್ಟಾçನಿಕ್ ಮಿಡಿಯಾಗಳು ಕೆಲ ವಿಷಯಗಳನ್ನು ಜನರ ಮೇಲೆ ಪ್ರಭಾವ ಬೀರುವ ಹಾಗೆ ಪ್ರಚಾರ ಮಾಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
ಸರ್ಕಾರ ಮಾಧ್ಯಮಗಳಿಗೆ ಬೆನ್ನೆಲುಬಾಗಬೇಕು. ಪ್ರಜಾಪ್ರಭುತ್ವ ಉಳಿಯಬೇಕಾದರೆ ಮಾಧ್ಯಮ ಗಟ್ಟಿಯಾಗಿರಬೇಕು. ಇಂದಿನ ಯುವಕರು ಮೊಬೈಲ್‌ನಲ್ಲೇ ಹೆಚ್ಚು ಕಾಲ ಕಳೆಯುತ್ತಾರೆ. ಅಲ್ಲದೆ ಸೋಷಿಯಲ್ ಮಿಡಿಯಾ ಮೂಲಕ ಬರುವ ವಿಷಯವನ್ನೇ ನಿಜವೆಂದು ನಂಬುತ್ತಾರೆ. ಮೊದಲು ಮೊಬೈಲ್ ಬಳಕೆ ಕಡಿಮೆ ಮಾಡಬೇಕು, ನಿಮ್ಮಲ್ಲಿಗೆ ಬಂದ ಸುದ್ದಿಯನ್ನು ಪರಿಶೀಲಿಸುವ ಕೆಲಸ ಮಾಡಿ. ಪತ್ರಿಕೆಗಳಲ್ಲಿ ಬರುವ ಸಂಪಾದಕೀಯ ಹಾಗೂ ಅಂಕಣಗಳನ್ನು ನಿತ್ಯವೂ ಓದಿ ಎಂದು ಸಲಹೆ ನೀಡಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ ಮಾತನಾಡಿ, ಪತ್ರಕರ್ತರ ಕ್ಷೇಮಾಭಿವೃದ್ಧಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 500 ಕೋಟಿ ರೂ. ಕೊಡುವುದಾಗಿ ಭರವಸೆ ನೀಡಿದ್ದಾರೆ. ನೀವು ಕೆಕೆಆರ್‌ಡಿಬಿ ಸದಸ್ಯರಾಗಿದ್ದು, 5 ಕೋಟಿ ರೂ. ಬಿಡುಗಡೆಗೊಳಿಸಿದರೆ ಪ್ರತಿ ತಾಲೂಕಿನಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕೆ ಅನುಕೂಲವಾಗುತ್ತದೆ. ಅಲ್ಲದೇ ಗ್ರಾಮೀಣ ಭಾಗದ ಪತ್ರಕರ್ತರಿಗೆ ಬಸ್ ಪಾಸ್ ನೀಡಲು ಸರ್ಕಾರದ ಮೇಲೆ ಒತ್ತಡ ಹಾಕಿ ಎಂದು ಶಾಸಕರಿಗೆ ಮನವಿ ಮಾಡಿದರು.
ಕಾರ್ಯಕಾರಣಿ ಸದಸ್ಯ ಶಿವರಂಜನ್ ಸತ್ಯಂಪೇಟೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗಮನಾಥ ರೇವತಗಾಂವ್, ಎ.ವಿ.ಪಾಟೀಲ್ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಸ್.ಎಚ್.ಹೊಸಮನಿ ಮಾತನಾಡಿದರು. ಸಂಘದ ತಾಲೂಕು ಅಧ್ಯಕ್ಷ ತಯ್ಯಬ್‌ಅಲಿ ಜರದೀ ಅಧ್ಯಕ್ಷತೆ ವಹಿಸಿದ್ದರು.