

ಮೈಸೂರು: ಸ್ಪರ್ಧಾರ್ಥಿಗಳು ಇಂಟರ್‌ನೆಟ್ ಮಾಹಿತಿ ಬದಲು ವಿಷಯಕ್ಕೆ ಸಂಬಂಧಿಸಿದ ವಿಶ್ವಾಸಾರ್ಹ ಪುಸ್ತಕಗಳ ಪರಾಮರ್ಶೆಯನ್ನು ವಿಸ್ತೃತವಾಗಿ ಮಾಡಬೇಕು ಎಂದು ಲೋಕಾಯುಕ್ತ ಎಸ್‌ಪಿ ವಿ.ಜೆ. ಸಜೀತ್ ಶಿಬಿರಾರ್ಥಿಗಳಿಗೆ ಕಿವಿಮಾತು ಹೇಳಿದರು.
ಲಕ್ಷ್ಮೀಪುರಂನ ಸರ್ಕಾರಿ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನಲ್ಲಿ ಜ್ಞಾನಬುತ್ತಿ ಸಂಸ್ಥೆ ಆಯೋಜಿಸಿದ್ದ ಪಿಸಿ ಮತ್ತು ಪಿಎಸ್‌ಐ ಪರೀಕ್ಷಾ ತರಬೇತಿ ಶಿಬಿರದಲ್ಲಿ ಮಾತನಾಡಿದರು.
ನಮ್ಮ ಕಾಲದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಣೆ ದೊಡ್ಡ ಸಮಸ್ಯೆಯಾಗಿತ್ತು. ತರಬೇತಿ ಕಾರ್ಯಕ್ರಮಗಳು ವಿಷಯಕ್ಕೆ ಸಂಬಂಧಿಸಿದ ಅನುಮಾನಗಳನ್ನು ದೂರ ಮಾಡುತ್ತವೆ. ಸಮಯದ ಮಿತಿ ಹಾಕಿಕೊಂಡು ಪ್ರಶ್ನೆ ರೂಪಿಸಿ ಅದಕ್ಕೆ ಉತ್ತರ ನೀಡಬೇಕು ಎಂದು ತಿಳಿಸಿದರು.
ನಿವೃತ್ತ ಪೊಲೀಸ್ ಅಧಿಕಾರಿ ಜೆ.ಬಿ.ರಂಗಸ್ವಾಮಿ ಮಾತನಾಡಿ, ತರಬೇತಿ ಸಮಯದಲ್ಲಿ ಶಿಸ್ತು ಮತ್ತು ಸಮಯಪ್ರಜ್ಞೆ ಅತ್ಯಂತ ಅವಶ್ಯಕ. ನಾನು ಗೆದ್ದೇ ಗೆಲ್ಲುತ್ತೇನೆ ಎಂಬ ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ನಾಗಮಲ್ಲೇಶ್ ಮಾತನಾಡಿ, ಇಂದು ಬಹುತೇಕ ಜನರು ‘ಕೆಲಸ ಕೊಡಿಸಿ’ ಎಂದು ಪ್ರಭಾವಿ ವ್ಯಕ್ತಿಗಳ ಮನೆ ಬಾಗಿಲಿಗೆ ಹೋಗುತ್ತಾರೆ. ಅದರ ಬದಲಿಗೆ ಸ್ವಂತ ಪರಿಶ್ರಮದಿಂದ ಉದ್ಯೋಗ ಹೇಗೆ ಪಡೆಯಬಹುದು ಎಂಬುದನ್ನು ತರಬೇತಿ ಪಡೆದು ಪರೀಕ್ಷೆಯನ್ನು ಎದುರಿಸಿ ಎಂದರು.
ರಾಜ್ಯ ಸಹಕಾರ ಮಾರುಕಟ್ಟೆ ನಿಗಮದ ನಿರ್ದೇಶಕ ವೈ.ಎನ್. ಶಂಕರೇಗೌಡ, ಸಂಪನ್ಮೂಲ ವ್ಯಕ್ತಿಗಳಾದ ಡಾ.ಎಸ್. ನಾಗಾಚಾರಿ, ಡಾ.ಉಮೇಶ್ ಬೇವಿನಹಳ್ಳಿ, ಪ್ರೊ.ವಿ. ಜಯಪ್ರಕಾಶ್, ಸಿ.ಕೆ. ಕಿರಣ್‌ಕೌಶಿಕ್, ಕೆ.ವೈ ನಾಗೇಂದ್ರ, ಎಚ್. ಬಾಲಕೃಷ್ಣ, ಜೈನಹಳ್ಳಿ ಸತ್ಯನಾರಾಯಣಗೌಡ ಮತ್ತಿತರರು ಭಾಗವಹಿಸಿದ್ದರು.