

ಶಿರಹಟ್ಟಿ: ಪಟ್ಟಣದ ಜಾಮಿಯಾ ಮಸೀದಿಯಲ್ಲಿ ಶ್ರದ್ದಾ ಭಕ್ತಿಯಿಂದ ಬಕ್ರೀದ್ ಆಚರಿಸಲಾಯಿತು.
ಪ್ರಾರ್ಥನೆ ಬಳಿಕ ಹಬ್ಬದ ಸಂದೇಶ ನೀಡಿದ ಮೌಲಾನಾ ಮಜಹರ್ಖಾನ್ ಪಠಾಣ, ಪ್ರವಾದಿ ಇಬ್ರಾಹಿಂ ಅವರು ಅಲ್ಲಾಹುವಿನಲ್ಲಿಟ್ಟ ಅಚಲ ವಿಶ್ವಾಸದ ಪ್ರತೀಕವೇ ಬಕ್ರೀದ್. ಈ ಹಬ್ಬವು ತ್ಯಾಗ, ಬಲಿದಾನದ ಸಂಕೇತವಾಗಿದೆ. ನಿಷ್ಠೆ, ಪ್ರಾಮಾಣಿಕತೆ ಮತ್ತು ಸಮರ್ಪಣಾ ಭಾವವಿಲ್ಲದ ಪ್ರಾರ್ಥನೆಯನ್ನು ದೇವರು ಒಪ್ಪಿಕೊಳ್ಳುವುದಿಲ್ಲ. ನಮಾಜ್ ಇದು ಭಾವಶುದ್ಧಿ, ಮನಶುದ್ಧಿ ಮತ್ತು ಆತ್ಮಶುದ್ಧಿಗಳ ತ್ರಿವೇಣಿ ಸಂಗಮವಾಗಿದೆ ಎಂದರು.
ಜಗತ್ತಿಗೆ ಅವರಿಸಿರುವ ಕರೊನಾ ಮಹಾಮಾರಿಯನ್ನು ಹೊಡೆದೋಡಿಸಲು ಪ್ರಾರ್ಥನೆ ಮೂಲಕ ಅಲ್ಲಾಹುವಿನಲ್ಲಿ ಬೇಡಿಕೊಳ್ಳೋಣ. ಆರೋಗ್ಯದ ಜವಾಬ್ದಾರಿ ನಮ್ಮ ಹೊಣೆಯಾಗಿದ್ದು, ಅದಕ್ಕೆ ಎಲ್ಲರೂ ಮಾಸ್ಕ್ ಧರಿಸಿ, ಪರಸ್ಪರ ಅಂತರ ಕಾಪಾಡಿಕೊಂಡು ಪ್ರೀತಿ ವಿಶ್ವಾಸದೊಂದಿಗೆ ವಿಶ್ವ ಮಾನವರಾಗಿ ಬಾಳೋಣ ಎಂದರು.
60 ವರ್ಷ ಮೇಲ್ಟಟ್ಟವರು, 10 ವರ್ಷದ ಮಕ್ಕಳು ಮನೆಗಳಲ್ಲಿ ಪ್ರಾರ್ಥನೆ ಸಲ್ಲಿಸಿದರು. ಕರೊನಾ ಆತಂಕದ ಹಿನ್ನೆಲೆಯಲ್ಲಿ ಹಸ್ತಲಾಘವ, ಪರಸ್ಪರ ಆಲಿಂಗನದ ಶುಭಾಶಯ ವಿನಿಮಯಕ್ಕೆ ಅವಕಾಶ ನೀಡದೆ ಸರಳವಾಗಿ ಹಬ್ಬ ಆಚರಿಸಲಾಯಿತು.
ಸರಳವಾಗಿ ಹಬ್ಬ ಆಚರಣೆ
ಲಕ್ಷೆ್ಮೕಶ್ವರ: ಬಕ್ರೀದ್ ಅನ್ನು ಮುಸ್ಲಿಮರು ಸರಳವಾಗಿ ಶ್ರದ್ಧೆ, ಭಕ್ತಿಯಿಂದ ಆಚರಿಸಿದರು. ಹೊಸ ಬಟ್ಟೆ ತೊಟ್ಟಿದ್ದರೂ ಸಂಭ್ರಮ ಮಾತ್ರ ಕರೊನಾ ಮಹಾಮಾರಿ ಕಸಿದುಕೊಂಡಿದ್ದು ಕಂಡು ಬಂದಿತು. ಯುವ ಮುಖಂಡ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ತಾಲೂಕಾಧ್ಯಕ್ಷ ಜಾಕೀರ ಹುಸೇನ ಹವಾಲ್ದಾರ್ ಮಾತನಾಡಿ, ಈ ವರ್ಷ ಕರೊನಾ ಭೀತಿ ಮತ್ತು ಸರ್ಕಾರದ ಸೂಚನೆ ಪಾಲಿಸುವ ನಿಟ್ಟಿನಲ್ಲಿ ಮನೆಯಲ್ಲೇ ಪ್ರಾರ್ಥನೆ ಮಾಡಲಾಯಿತು. ಪ್ರಾರ್ಥನಾ ಮಂದಿರದಲ್ಲಿ 20ರಿಂದ 30 ಜನರು ಪರಸ್ಪರ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ ಪ್ರಾರ್ಥನೆ ಮಾಡಲಾಯಿತು ಎಂದರು.
ತ್ಯಾಗ, ಬಲಿದಾನದ ಸಂಕೇತ
ಗದಗ: ಗದಗ ಬೆಟಗೇರಿ ಅವಳಿ ನಗರ ಸೇರಿ ಜಿಲ್ಲೆಯಲ್ಲಿ ಶನಿವಾರ ಮುಸ್ಲಿಂ ಸಮುದಾಯದವರು ಬಕ್ರೀದ್ ಆಚರಿಸಿದರು. ಕರೊನಾ ವೈರಸ್ ಸೃಷ್ಟಿಸಿದ ಆತಂಕದಿಂದಾಗಿ ತ್ಯಾಗ ಬಲಿದಾನದ ಮಹತ್ವ ಸಾರುವ ಬಕ್ರೀದ್ ಅನ್ನು ಸಮಾಜ ಬಾಂಧವರು ತಮ್ಮ ತಮ್ಮ ಮನೆಯಲ್ಲಿ ಆಚರಿಸುವಂತಾಯಿತು. ಕುಟುಂಬ ಸದಸ್ಯರು ಒಟ್ಟಿಗೆ ಸೇರಿ ಮನೆಯಲ್ಲೇ ಪ್ರಾರ್ಥನೆ ಸಲ್ಲಿಸಿದರು. ಸರಳವಾಗಿ ಹಬ್ಬ ಆಚರಿಸುವ ಮೂಲಕ ಅಲ್ಲಾಹುವಿನ ಕೃಪೆಗೆ ಪಾತ್ರರಾದರು.
ಹಿಂದು ಧರ್ವಿುಯನಿಂದ ಪ್ರಾರ್ಥನೆ
ನರಗುಂದ: ಹಾಲಭಾವಿಕೇರಿ ಬಡಾವಣೆ ನಿವಾಸಿ ಜಗದೀಶ ಗೊಂಡ ಬಾಳ ಎಂಬ ವ್ಯಕ್ತಿ ತನ್ನ 14 ವರ್ಷದ ಮಗನೊಂದಿಗೆ ಬಕ್ರೀದ್ ಪ್ರಾರ್ಥನೆ ಸಲ್ಲಿಸಿದರು.
ಸೃಷ್ಟಿಕರ್ತನಿಗೆ ಶರಣಾಗಿ ಬಾಳಿ
ಗಜೇಂದ್ರಗಡ: ಮನದ ಅಹಂಭಾವ ತ್ಯಾಗಮಾಡಿ ಶ್ರದ್ಧೆ, ಭಕ್ತಿಯ ಪರಿಪಾಲನೆಯೊಂದಿಗೆ ಸೃಷ್ಟಿಕರ್ತನಲ್ಲಿ ಶರಣಾಗಿ ಬಾಳಿದರೆ ಅಲ್ಲಾಹನ ಕೃಪೆಗೆ ಪಾತ್ರರಾಗಲು ಸಾಧ್ಯ ಎಂದು ಮೌಲಾನಾ ಖುಶತ್ತಾರ್ ನೂರಾನಿ ಹೇಳಿದರು.ಪಟ್ಟಣದ ಜಾಮಿಯಾ ಮಸೀದಿಯಲ್ಲಿ ಬಕ್ರೀದ್ ಆಚರಣೆ ನಿಮಿತ್ತ ಶನಿವಾರ ಆಯೋಜಿಸಿದ್ದ ಸಾಮೂಹಿಕ ಪ್ರಾರ್ಥನೆಯಲ್ಲಿ ಕುರಾನ್ ಪಠಿಸಿ ಅವರು ಮಾತನಾಡಿದರು. ‘ಮಾನವೀಯತೆಗೆ ಎಲ್ಲವನ್ನೂ ಸಮರ್ಪಿಸಿ ದೈವಿಶಕ್ತಿಗೆ ಕೃತಜ್ಞತೆ ಅರ್ಪಿಸುವ ಸುವರ್ಣ ಅವಕಾಶವಿದು. ಈ ಹಬ್ಬ ಕ್ಷಮೆ, ಸಹಬಾಳ್ವೆ ಹಾಗೂ ವಿಜಯದ ಸಂಕೇತವಾಗಿದೆ’ ಎಂದರು.ಹಜರತ್ ನಿಜಾಮುದ್ದಿನ್ಶಹಾ ಮಕಾನದಾರ, ಎ.ಡಿ. ಕೋಲಕಾರ, ಎಂ.ಎಚ್. ಕೋಲಕಾರ, ಮಕ್ತುಂಸಾಬ್ ಮುಧೋಳ, ಹಸನಸಾಬ್ ತಟಗಾರ, ಅಬ್ದುಲ್ ಮನಿಯಾರ, ಇತರರು ಇದ್ದರು.
ಈ ಬಾರಿ ಹಬ್ಬದೂಟಕ್ಕೆ ನಿರ್ಬಂಧ
ಮುಂಡರಗಿ: ಮುಸ್ಲಿಮರು ಪರಸ್ಪರ ಅಂತರ ಕಾಯ್ದುಕೊಂಡು ಪಟ್ಟಣದ ವಿವಿಧ ಮಸೀದಿಗಳಲ್ಲಿ ಶನಿವಾರ ಪ್ರಾರ್ಥನೆ ಸಲ್ಲಿಸಿದರು. ಈ ವರ್ಷ ಕರೊನಾದಿಂದಾಗಿ ಹಬ್ಬದೂಟದ ವಿನಿಮಯಕ್ಕೆ ನಿರ್ಬಂಧ ಹೇರಲಾಗಿತ್ತು. ಪರಸ್ಪರ ಅಂತರ ಕಾಯ್ದುಕೊಂಡು ಶುಭಾಯಶ ವಿನಿಮಯ ಮಾಡಿಕೊಳ್ಳಲಾಯಿತು.
ಕೋವಿಡ್ ತಡೆಗೆ ಮುಂಜಾಗ್ರತೆ
ನರಗುಂದ: ಪಟ್ಟಣ ಸೇರಿ ತಾಲೂಕಿನಾದ್ಯಂತ ಬಕ್ರೀದ್ ಅನ್ನು ಸರಳವಾಗಿ ಆಚರಿಸಲಾಯಿತು.
ಕರೊನಾ ಹರಡದಂತೆ ತಡೆಯಲು ಮುಂಜಾಗ್ರತೆ ಕ್ರಮವಾಗಿ ಪರಸ್ಪರ ಅಂತರ ಕಾಯ್ದುಕೊಂಡು, ಮಾಸ್ಕ್, ಸ್ಯಾನಿಟೈಸರ್ ಬಳಸುವ ಮೂಲಕ ಮುಸ್ಲಿಮರು ಶ್ರದ್ಧೆ, ಭಕ್ತಿಯಿಂದ ಹಬ್ಬ ಆಚರಿಸಿದರು. ರಾಜ್ಯ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಸಾಮೂಹಿಕ ಪ್ರಾರ್ಥನೆಗೆ ಪೊಲೀಸರು ಅವಕಾಶ ನೀಡಿರಲಿಲ್ಲ. 40 ಜನರು ಪರಸ್ಪರ ಅಂತರ ಕಾಯ್ದುಕೊಂಡು ಮಸೀದಿ ಅಥವಾ ತಮ್ಮ ಮನೆಗಳಲ್ಲಿಯೇ ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಿಸಿಕೊಟ್ಟಿದ್ದರು. ಇದರಿಂದಾಗಿ ಬೆಳಗ್ಗೆ 6ರಿಂದ 9ರೊಳಗಾಗಿ ಪಟ್ಟಣದ ಎಲ್ಲ ಮಸೀದಿಗಳಲ್ಲಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿದರು.
ಸೋಂಕು ತಡೆಗೆ ದೇವರ ಸ್ಮರಣೆ
ರೋಣ: ಪಟ್ಟಣ ಸೇರಿ ಗ್ರಾಮೀಣ ಭಾಗದಲ್ಲಿ ಶನಿವಾರ ಶ್ರದ್ಧೆ, ಭಕ್ತಿಯಿಂದ ಆಚರಿಸಲಾಯಿತು. ಕರೊನಾ ಸೋಂಕು ಹರಡುವಿಕೆ ಹಿನ್ನೆಲೆಯಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಕಲ್ಪಿಸದ ಕಾರಣ ಜನರು ತಮ್ಮ ಮನೆಯಲ್ಲಿಯೇ ಕುಟುಂಬದವರೊಂದಿಗೆ ಪ್ರಾರ್ಥನೆ ಸಲ್ಲಿಸಿದರು.