ವಿಶ್ವಾಸದ ಜನಬೆಂಬಲ ಶ್ರೇಷ್ಠ; ದೇಶಪಾಂಡೆ ಅಭಿಪ್ರಾಯ

18 YLP 04
Published on

ವಿಜಯವಾಣಿ ಸುದ್ದಿಜಾಲ ಯಲ್ಲಾಪುರ: ರಾಜಕೀಯದಲ್ಲಿ ಅಧಿಕಾರದ ಪ್ರಭಾವದಿಂದ ಜನ ಹಿಂದೆ ಬಂದರೆ ಅದು ವಿಶೇಷವಲ್ಲ. ಅದಕ್ಕಿಂತ ಪ್ರೀತಿ, ವಿಶ್ವಾಸದಿಂದ ಗಳಿಸುವ ಜನಬೆಂಬಲ ಶ್ರೇಷ್ಠವಾದದ್ದು ಎಂದು ಶಾಸಕ ಆರ್. ವಿ. ದೇಶಪಾಂಡೆ ಹೇಳಿದರು.

ಶುಕ್ರವಾರ ಪಟ್ಟಣದ ನೂತನನಗರದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಕಾರ್ಯಕರ್ತರು ಯಾರಿಗೂ ವ್ಯಕ್ತಿಗತವಾಗಿ ಹೆದರುವ ಅಗತ್ಯವಿಲ್ಲ. ದಬ್ಬಾಳಿಕೆ, ಹಣ, ಸಾರಾಯಿ, ಜಾತಿ ರಾಜಕಾರಣ ಹೆಚ್ಚು ದಿವಸ ನಡೆಯುವುದಿಲ್ಲ. ದ್ವೇಷದ ರಾಜಕಾರಣ ಸರಿಯಲ್ಲ. ಅಧಿಕಾರವನ್ನು ಬೆನ್ನು ಹತ್ತಿ ಹೋಗಬಾರದು. ಅಧಿಕಾರ ಕ್ಷಣಿಕ. ಅಧಿಕಾರ ಇದ್ದಾಗ ಒಳ್ಳೆಯ ಕೆಲಸ ಮಾಡಬೇಕು. ಬಡವರಿಗೆ ಸಾಮಾಜಿಕ ನ್ಯಾಯ ದೊರಕಿಸಿಕೊಡಬೇಕು ಎಂದರು.

ಸರ್ಕಾರದ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಹೆಚ್ಚಿದೆ. ಅದನ್ನು ಪ್ರಶ್ನಿಸುವ, ಜನರಿಗೆ ನ್ಯಾಯ ಕೊಡಿಸುವ ಪ್ರತಿನಿಧಿಗಳು ತಯಾರಾಗಬೇಕು. ಗ್ರಾ.ಪಂ ಚುನಾವಣೆ ಎಲ್ಲಾ ಚುನಾವಣೆಗಳಿಗೆ ಅಡಿಪಾಯವಾಗಿದೆ. ಅದನ್ನು ಒಕ್ಕಟ್ಟಿನಿಂದ ಎದುರಿಸಿ, ಗೆಲ್ಲುವ ಕೆಲಸ ಆಗಬೇಕು ಎಂದರು.

ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ, ಕಾಂಗ್ರೆಸ್ ಮುಖಂಡರಾದ ರವೀಂದ್ರನಾಥ ನಾಯ್ಕ, ಟಿ. ಸಿ. ಗಾಂವ್ಕಾರ, ಎನ್. ಕೆ. ಭಟ್ಟ ಮೆಣಸುಪಾಲ, ರವಿ ನಾಯ್ಕ, ಡಿ. ಎನ್. ಗಾಂವ್ಕಾರ, ಪ್ರಶಾಂತ ಸಭಾಹಿತ ಇತರರಿದ್ದರು.

ಅನುದಾನದ ಬಗ್ಗೆ ಶ್ವೇತಪತ್ರ ಹೊರಡಿಸಲಿ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಜಿಲ್ಲೆಯ ಅಭಿವೃದ್ಧಿಗೆ ಎಷ್ಟು ಅನುದಾನ ಬಿಡುಗಡೆ ಮಾಡಿದೆ ಎಂಬುದರ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ಮಾಜಿ ಸಚಿವ ಆರ್.ವಿ. ದೇಶಪಾಂಡೆ ಒತ್ತಾಯಿಸಿದರು.

ಶಿರಸಿ ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಅತಿವೃಷ್ಟಿಯಿಂದ ಹಾನಿಯಾದ ಗ್ರಾಮೀಣ ರಸ್ತೆಗಳು, ಸೇತುವೆ, ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳ ಸುಧಾರಣೆಗೆ ಇನ್ನೂ ಕ್ರಮವಾಗಿಲ್ಲ. ಈ ಬಗ್ಗೆ ಅಧಿಕಾರಿಗಳ ಬಳಿಯೂ ಪ್ರಶ್ನಿಸಿದ್ದೇನೆ ಎಂದರು.

ಉಪ ಚುನಾವಣೆಯ ಸಂದರ್ಭದಲ್ಲಿ ರಾಜೀನಾಮೆ ನೀಡಿದ ಶಾಸಕರ ಕ್ಷೇತ್ರಗಳಿಗೆ ಅನುಧಾನ ಘೊಷಣೆಯಾಗಿತ್ತು. ನಂತರ ಆ ಹಣ ಎಲ್ಲಿ ಹೋಯಿತು ಎಂಬುದೇ ತಿಳಿದಿಲ್ಲ. ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಜಿಲ್ಲೆಯ ಅಭಿವೃದ್ಧಿಗೆ ಹಣ ತರಲು ಹೋರಾಟ ಮಾಡಬೇಕು ಎಂದು ಆಗ್ರಹಿಸಿದರು.

ಕೋಲಾರದ ವಿಸ್ಟ್ರಾನ್ ಸೇರಿದಂತೆ ರಾಜ್ಯದ ಕೆಲ ಕಂಪನಿಗಳಲ್ಲಿ ನಡೆದ ದಾಂಧಲೆ ಪ್ರಕರಣಗಳು ಹೂಡಿಕೆದಾರರಿಗೆ ರಾಜ್ಯ ಸರ್ಕಾರದ ಮೇಲೆ ವಿಶ್ವಾಸ ಕಡಿಮೆ ಆಗಲು ಕಾರಣವಾಗುತ್ತಿದೆ. ಈ ರಾಜ್ಯದಲ್ಲಿ ಭದ್ರತೆ ಇಲ್ಲಾ ಎಂತಾದರೆ ಯಾರೂ ಬರಲು ಒಪ್ಪುವುದಿಲ್ಲ. ತಾನು ಕೈಗಾರಿಕಾ ಸಚಿವನಾಗಿ ಕೆಲಸ ಮಾಡಿದ ಸಂದರ್ಭದಲ್ಲಿ ಲಕ್ಷಾಂತರ ಕೋಟಿ ರೂ.ಹೂಡಿಕೆಯಾಗಿದೆ. ಈಗಿನ ಬಿಜೆಪಿ ಸರ್ಕಾರದವರು ಹೂಡಿಕೆಯಾಗುತ್ತಿರುವ ಬಗ್ಗೆ ಘೊಷಣೆ ಮಾಡುತ್ತಿದ್ದಾರೆ. ಆದರೆ, ಯಾವುದೂ ಕಣ್ಣಿಗೆ ಕಾಣುತ್ತಿಲ್ಲ ಎಂದು ಆಕ್ಷೇಪಿಸಿದರು. ಮುಖಂಡರಾದ ನಿವೇದಿತ್ ಆಳ್ವಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ ಗೌಡ, ಉಪಸ್ಥಿತರಿದ್ದರು.

ಮನಸ್ಸಿಗೆ ತುಂಬಾ ನೋವಾಗಿದೆ: ವಿಧಾನಪರಿಷತ್​ನಲ್ಲಿ ನಡೆದ ಘಟನೆ ಪ್ರಜಾಪ್ರಭುತ್ವಕ್ಕೆ ಮಾರಕವಾದ ಘಟನೆ. ಬಿಜೆಪಿಯವರಿಗೆ ಸಭಾಪತಿ ಹುದ್ದೆಯ ಅವಶ್ಯಕತೆ ಏನಿತ್ತು. ಮುಖ್ಯಮಂತ್ರಿಗೂ ಅನುಭವವಿತ್ತು. ಈ ಘಟನೆಯಿಂದ ತನ್ನ ಮನಸ್ಸಿಗೆ ತುಂಬಾ ನೋವಾಗಿದೆ. ಯಾವುದೇ ಪಕ್ಷದವರು ಮಾಡಿದರೂ ಇದು ಸರಿಯಲ್ಲ, ಇದರಿಂದ ರಾಜ್ಯದ ಘನತೆಗೆ ಧಕ್ಕೆಯಾಗಿದೆ ಎಂದು ದೇಶಪಾಂಡೆ ಅಸಮಾಧಾನ ವ್ಯಕ್ತಪಡಿಸಿದರು.

ಸ್ಥಳೀಯವಾಗಿ ನಾಯಕತ್ವ ನೀಡಬೇಕು: ಗ್ರಾಮ ಪಂಚಾಯಿತಿ ಚುನಾವಣೆ ಪಕ್ಷಾತೀತ ಚುನಾವಣೆ, ಗ್ರಾಮಾಂತರ ಕಾರ್ಯಕರ್ತರಿಗೆ ಚುನಾವಣೆ ಸ್ಪರ್ಧೆಗೆ, ಸಮಾಜ ಸೇವೆಗೆ, ಯುವ ನಾಯಕತ್ವ ಬೆಳೆಯುವುದಕ್ಕೆ ಅವಕಾಶವಾಗಿದೆ. ನಮ್ಮಂತಹ ನಾಯಕರು ಇದರಲ್ಲಿ ಭಾಗವಹಿಸುವುದಕ್ಕಿಂತ ಆಯಾ ಗ್ರಾ.ಪಂ. ಮಟ್ಟದ ನಾಯಕರೇ ಸ್ಥಳೀಯವಾಗಿ ಯಾವ ನಾಯಕತ್ವ ಬೇಕು ಎಂಬುದನ್ನು ನಿರ್ಧರಿಸಬೇಕು. ಚುನಾವಣೆ ಎಂದರೆ ವ್ಯಾಪಾರ, ದಂಧೆ ಆಗಬಾರದು, ಮತದಾನ ಪಾವಿತ್ರ್ಯತೆ ಕಲುಷಿತವಾಗದಂತೆ ನೋಡಿಕೊಳ್ಳಬೇಕು. ಅಭಿವೃದ್ಧಿಪರ, ಸಾಮಾಜಿಕ ನ್ಯಾಯ ನೀಡುವವರನ್ನು, ಬಡವರ ಪರ ನಿಲ್ಲುವವರನ್ನು ಆಯ್ಕೆ ಮಾಡಬೇಕು ಎಂದು ಆರ್.ವಿ. ದೇಶಪಾಂಡೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net