ವಿಶ್ವಾರಾಧ್ಯರ ಮಾರ್ಗದರ್ಶನದಲ್ಲಿ ಸಾಗೋಣ

29-07-2022 copy
Published on


ಯಾದಗಿರಿ:
ಮಾನವ ಜನ್ಮ ದೊಡ್ಡದು,ಇದನ್ನು ಹಾಳು ಮಾಡಬೇಡಿರೊ ಹುಚ್ಚಪ್ಪಗಳಿರಾ ಎಂಬ ದಾಸವಾಣಿಯಂತೆ ಮನುಷ್ಯರಾಗಿ ಹುಟ್ಟಿ ಬಂದ ಮೇಲೆ ನಮ್ಮ ಜನ್ಮ ಸಾರ್ಥಕ ಮಾಡಿಕೊಳ್ಳುವ ರೀತಿಯಲ್ಲಿ ಬಾಳಬೇಕು ಎಂಬ ವಿಶ್ವಾರಾಧ್ಯರ ಮಾರ್ಗದರ್ಶನವನ್ನು ಪ್ರತಿಯೊಬ್ಬರೂ ಪಡೆಯುವಂತೆ ಡಾ.ಗಂಗಾಧರ ಮಹಾಸ್ವಾಮಿಗಳು ನುಡಿದರು.

ತಾಲೂಕಿನ ಅಬ್ಬೆತುಮಕೂರಿನ ವಿಶ್ವಾರಾಧ್ಯರ ಮಠದಲ್ಲಿ ಗುರುವಾರ ರಾತ್ರಿ ಏರ್ಪಡಿಸಿದ್ದ ಪರಂಪರಾ ಪಾದಯಾತ್ರೆಯ ಸಮಾರೋಪ ಹಾಗೂ ಅಮವಾಸ್ಯೆಯ ಶಿವಾನುಭವ ಗೋಷ್ಠಿಯ ಸಾನಿಧ್ಯ ವಹಿಸಿ ಭಕ್ತರಿಗೆ ಹಿತೋಪದೇಶ ನೀಡಿದ ಅವರು, ಜಾತಿ-ಮತ, ಪಂಥ-ಪಂಗಡಗಳನ್ನು ಮೀರಿ ಮಾನವತೆಯ ನೆಲೆಗಟ್ಟಿನಲ್ಲಿ ಎಲ್ಲರೂ ಸೌಹಾರ್ದಭಾವದಿಂದ ಬಾಳಿ ಬದುಕಬೇಕೆಂಬುದು ವಿಶ್ವಾರಾಧ್ಯರ ಆಶಯವಾಗಿತ್ತು. ಅಂತೆಯೇ ಇಂದಿಗೂ ಅಬ್ಬೆ ತುಮಕೂರಿನ ಮಠದಲ್ಲಿ ಜಾತ್ಯಾತೀತ ಭಾವವನ್ನು ಕಾಪಾಡಿಕೊಂಡು ಬಂದು ಸಕಲ ಜಿವಾತ್ಮರಿಗೆ ಲೇಸನೇ ಬಯಸಲಾಗುತ್ತಿದೆ ಎಂದು ಹೇಳಿದರು.

ಪಾದಯಾತ್ರೆ ಅಬ್ಬೆ ತುಮಕೂರಿನ ಪಾದಗಟ್ಟೆಯನ್ನು ತಲುಪಿದ ಕೂಡಲೇ ಸಹಸ್ರಾರು ಭಕ್ತರು ಭಕ್ತಿಯಿಂದ ಪಾದ ಬರಮಾಡಿಕೊಂಡರು. ಡೊಳ್ಳು, ಬಾಜಾ, ಭಜಂತ್ರಿ, ಮುಂತಾದ ಮಂಗಳ ವಾದ್ಯಗಳು, ಸುಮಂಗಲಿಯರ ಕಳಸ, ಕೋಲಾಟ, ನೂರಾರು ಭಜನಾ ಮೇಳಗಳು, ಪೌರಾಣಿಕ ವೇಷಧರಿಸಿದ ಪಾತ್ರಧಾರಿಗಳು, ರಂಗು ರಂಗಿನ ವಿದ್ಯುತ ದೀಪಗಳು ಪಾದಗಟ್ಟೆಯ ಆವರಣದಲ್ಲಿ ಭಕ್ತಿಯ ಮೆರಗನ್ನು ಹೆಚ್ಚಿಸಿದ್ದವು.

ಮಾಜಿ ಸಚಿವರಾದ ಸಿದ್ಧರಾಮ ಮೇತ್ರೆ, ಡಾ.ಶರಣ ಪ್ರಕಾಶ ಪಾಟೀಲ್, ಡಾ. ಎ.ಬಿ.ಮಾಲಕರೆಡ್ಡಿ, ಮಾಜಿ ಎಂಎಲ್ಸಿ ಚನ್ನಾರೆಡ್ಡಿ ಪಾಟೀಲ್ ತುನ್ನುರು, ಜೆಡಿಎಸ್ ರಾಜ್ಯ ಯುವ ಮುಖಂಡ ಶರಣಗೌಡ ಕಂದಕೂರು, ನರಸಣಗೌಡ ರಾಯಚೂರು, ಡಾ.ಸುಭಾಶ್ಚಂದ್ರ ಕೌಲಗಿ, ಚನ್ನಪ್ಪಗೌಡ ಮೋಸಂಬಿ, ವಿಶ್ವನಾಥ ಸಿರವಾರ, ದಿವಾಕರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net