

ಚಿತ್ತಾಪುರ: ವಿಶ್ವದ ಶ್ರೇಷ್ಠ ನೇತ್ರ ತಜ್ಞ ಹಾಗೂ ಲಕ್ಷಾಂತರ ಜನರ ಕಣ್ಣಿನ ದೋಷ ನಿವಾರಿಸಿದ್ದ ಡಾ.ಚಂದ್ರಪ್ಪ ರೇಷ್ಮಿ (90) ಭಾನುವಾರ ಪಂಚಭೂತಗಳಲ್ಲಿ ಲೀನವಾದರು.
ಶನಿವಾರ ಬೆಳಗ್ಗೆ ಕಲಬುರಗಿ ನಿವಾಸದಲ್ಲಿ ನಿಧನ ಹೊಂದಿದ್ದ ಅವರ ಪಾರ್ಥಿವ ಶರೀರ ಸಂಜೆ ಚಿತ್ತಾಪುರಕ್ಕೆ ತರಲಾಗಿತ್ತು. ಭಾನುವಾರ ಮಧ್ಯಾಹ್ನದವರೆಗೂ ದರ್ಶನಕ್ಕೆ ಅವಕಾಶ ನೀಡಲಾಯಿತು. ಜಿಲ್ಲೆಯ ಅನೇಕ ವೈದ್ಯರು, ಜನಪ್ರತಿನಿಧಿಗಳು, ರಾಜಕಾರಣಿಗಳು, ಸಂಘ-ಸAಸ್ಥೆ ಪದಾಧಿಕಾರಿಗಳು ಅಂತಿಮ ದರ್ಶನ ಪಡೆದರು. ಪಟ್ಟಣದಲ್ಲಿ ಸಂಜೆ 4ರವರೆಗೆ ಎಲ್ಲ ಅಂಗಡಿ-ಮುAಗಟ್ಟುಗಳು ಬಂದ್ ಮಾಡುವ ಮೂಲಕ ಅಗಲಿದ ವೈದ್ಯನಿಗೆ ಸಂತಾಪ ಸೂಚಿಸಲಾಯಿತು.
ಮಧ್ಯಾಹ್ನ 3ಕ್ಕೆ ರೇಷ್ಮಿ ನಿವಾಸದಿಂದ ಶುರುವಾದ ಪಾರ್ಥಿವ ಶರೀರದ ಮೆರವಣಿಗೆ ಕಿರಾಣಾ ಬಜಾರ್, ಜನತಾ ಚೌಕ್, ಭುವನೇಶ್ವರಿ ಚೌಕ್, ಕೋರ್ಟ್ ರಸ್ತೆ ಮೂಲಕ ಸ್ವಂತ ತೋಟದವರೆಗೆ ಸಾಗಿತು. ಹಾದಿಯುದ್ದಕ್ಕೂ ಜನರು ಪುಷ್ಪನಮನ ಸಲ್ಲಿಸಿದರು. ಸಹೋದರನ ಪುತ್ರ ಶಿವಕುಮಾರ ರೇಷ್ಮಿ ನೇತೃತ್ವದಲ್ಲಿ ವೀರಶೈವ ಲಿಂಗಾಯತ ವಿಧಿ-ವಿಧಾನದಂತೆ ಅಂತ್ಯಕ್ರಿಯೆ ಜರುಗಿತು.