ವಿಶ್ವವನ್ನೇ ಆಕರ್ಷಿಸುತ್ತಿರುವ ಕೆಂಪೇಗೌಡರು ಕಟ್ಟಿದ ಬೆಂಗಳೂರು

08HDK 02
ಎಚ್.ಡಿ. ಕೋಟೆ ಪಟ್ಟಣದ ಬಿಜಿಎಸ್ ಕಲ್ಯಾಣ ಮಂಟಪದಲ್ಲಿ ಸರಗೂರು ಮತ್ತು ಎಚ್.ಡಿ. ಕೋಟೆ ತಾಲ್ಲೂಕು ಒಕ್ಕಲಿಗರ ಸಂಘದಿಂದ ಆಯೋಜಿಸಲಾಗಿದ್ದ 514 ನೇ ಜಯಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ನಾಡಪ್ರಭು ಕೆಂಪೇಗೌಡರ ಭಾವಚಿತ್ರಕ್ಕೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಾಲನಂದನಾಥ ಸ್ವಾಮೀಜಿ ಪುಷ್ಪ ಅರ್ಚನೆ ಮಾಡಿದರು. ಕೆ.ವೆಂಕಟೇಶ್, ಅನಿಲ್ ಚಿಕ್ಕಮಾದು, ಸೋಮೇಶ್ವರನಾಥ ಸ್ವಾಮೀಜಿ ಇದ್ದರು.
Published on

ಎಚ್.ಡಿ.ಕೋಟೆ: ನಾಡಪ್ರಭು ಕೆಂಪೇಗೌಡರು ದೃಢ ಸಂಕಲ್ಪದೊಂದಿಗೆ ನಿರ್ಮಿಸಿದ ಬೆಂಗಳೂರು ನಗರ, ವಿದೇಶಿಗರನ್ನು ಆಕರ್ಷಿಸುವಂತೆ ಬೆಳೆದಿದೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ಪಟ್ಟಣದ ಬಿಜಿಎಸ್ ಕಲಾ ಭವನದಲ್ಲಿ ತಾಲೂಕು ಒಕ್ಕಲಿಗರ ಸಂಘದ ವತಿಯಿಂದ ಮಂಗಳವಾರ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 514ನೇ ಜಯಂತಿ ಕಾರ್ಯಕ್ರಮದಲ್ಲಿ ಆರ್ಶೀವಚನ ನೀಡಿದ ಅವರು, ವಿಜಯನಗರ ಆಡಳಿತವನ್ನು ಕಂಡಿದ್ದ ಕೆಂಪೇಗೌಡರು, ಇದೇ ಮಾದರಿಯಲ್ಲಿ ನಗರ ನಿರ್ಮಾಣ ಮಾಡಬೇಕು ಎಂದು ಯೋಚಿಸಿ ಕಟ್ಟಿದ ನಗರ ಇಂದು ಬೆಳೆದಿದೆ. ಆದರೆ ಅದೇ ಹಂಪಿ ಪಾಳುಬಿದ್ದ ನಗರವಾಗಿದೆ ಎಂದು ಬೇಸರ ವ್ಯಕ್ತಪಡಿಸದರು.
ಅನೇಕ ಮಹನೀಯರು ತಮ್ಮ ಬದುಕನ್ನು ಸಮಾಜಕ್ಕಾಗಿ ಮೀಸಲಿಟ್ಟಿದ್ದರು. ಅಂತವರನ್ನು ಜಯಂತಿ ದಿನಗಳಂದು ನೆನಪು ಮಾಡಿಕೊಳ್ಳುವುದು ನಮ್ಮ ಕರ್ತವ್ಯ. ಗಾಂಧಿ, ಅಂಬೇಡ್ಕರ್, ಬಸವಣ್ಣ, ವಾಲ್ಮೀಕಿ ಸೇರಿದಂತೆ ಅನೇಕ ಮಹನೀಯರ ಜಯಂತಿ ಆಚರಿಸುವ ಮೂಲಕ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು, ಅವರ ದಾರಿಯಲ್ಲಿ ನಡೆಯಬೇಕು. ಇಂತಹ ಮಹನೀಯರ ಜಯಂತಿಗಳನ್ನು ಜಾತ್ಯತೀತವಾಗಿ ಎಲ್ಲರೂ ಸೇರಿ ಆಚರಿಸಬೇಕು. ಇಂತಹ ಹಬ್ಬಗಳನ್ನು ಮಾಡುವ ಉದ್ದೇಶವೇ ಒಡೆದು ಹೋಗಿರುವ ಮನಸ್ಸುಗಳನ್ನು ಒಂದಾಗಿಸುವುದಾಗಿದೆ ಎಂದರು.

ಅಂದಿನ ಕಾಲದಲ್ಲಿ ಕೆಂಪೇಗೌಡರು ಎಲ್ಲರಿಗೂ ಅವಕಾಶ ನೀಡುವ ಉದ್ದೇಶದಿಂದ ಎಲ್ಲ ಸಮುದಾಯದ ಪೇಟೆಗಳನ್ನು ನಿರ್ಮಿಸಿ ಜಾತ್ಯತೀತ ತತ್ವವನ್ನು ಸಾರಿದ್ದರು. ಸರ್ವಜನಾಂಗದ ಶಾಂತಿಯ ತೋಟ ಎಂಬ ಕುವೆಂಪು ಬರೆದಂತೆ ಬೆಂಗಳೂರು ನಗರವನ್ನು ಕೆಂಪೇಗೌಡರು ಕಟ್ಟಿದ್ದರು ಎಂದರು.
ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಮಾತನಾಡಿ, ಪಟ್ಟಣದಲ್ಲಿ ಕೆಂಪೇಗೌಡರ ಸಮುದಾಯ ಭವನ ನಿರ್ಮಾಣಕ್ಕೆ ಜಾಗ ಹಾಗೂ ಅನುದಾನ ಕೊಡಿಸಲು ಶಾಸಕ ಅನಿಲ್ ಚಿಕ್ಕಮಾದು ಅವರ ಜತೆ ಕೈ ಜೋಡಿಸಲಾಗುವುದು. 16ನೇ ಶತಮಾನದಲ್ಲಿ ಕೆಂಪೇಗೌಡರು ಬೆಂಗಳೂರು ನಗರ ನಿರ್ಮಾಣ ಮಾಡಿದಂತ ಯೋಜನೆಗಳು ಇಂದಿಗೂ ಪ್ರಸ್ತುತವಾಗಿವೆ. ಸುಂದರವಾದ ನಗರ ನಿರ್ಮಾಣ, ಪೇಟೆ ನಿರ್ಮಾಣ ಮತ್ತು ರೈತರಿಗಾಗಿ ಕೆರೆ ನಿರ್ಮಾಣ ಮಾಡಿದ ಮಹಾನ್ ಶಿಲ್ಪಿ ಎಂದು ಗುಣಗಾನ ಮಾಡಿದರು.

ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ಪಟ್ಟಣದ ಇಂದಿರಾ ಕ್ಯಾಂಟೀನ್ ಬಳಿ ಒಕ್ಕಲಿಗ ಸಮುದಾಯ ನಿರ್ಮಾಣ ಮಾಡಲು 32 ಗುಂಟೆ ಜಾಗ ಗುರುತಿಸಲಾಗಿದ್ದು, ಭವನ ನಿರ್ಮಾಣಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವೈಯಕ್ತಿಕವಾಗಿ 50 ಲಕ್ಷ ರೂ. ನೀಡುವುದಾಗಿ ಭರವಸೆ ನೀಡಿದ್ದಾರೆ. ಉಳಿಕೆ ಅನುದಾನವನ್ನು ಸರ್ಕಾರದಿಂದ ಬಿಡುಗಡೆ ಮಾಡಿಸುವುದಾಗಿ ತಿಳಿಸಿದರು.

ಪಟ್ಟಣದ ಆದಿ ಚುಂಚನಗಿರಿ ಶಿಕ್ಷಣ ಸಂಸ್ಥೆ ಆವರಣದಿಂದ ನಾಡಪ್ರಭು ಕೆಂಪೇಗೌಡರ ಪ್ರತಿಮೆಯನ್ನು ಬೆಳ್ಳಿ ರಥದ ಮೂಲಕ ಮಂಗಳ ವಾದ್ಯ, ವೀರಗಾಸೆ, ಪೂಜಾ ಕುಣಿತ, ಡೊಳ್ಳುಕುಣಿತ, ಚೆಂಡೆ, ಚಿಲಿಪಿಲಿ ಗೊಂಬೆ, ಕಂಸಾಳೆ, ನಗಾರಿಯೊಂದಿಗೆ ಮೆರವಣಿಗೆ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ, ಒಕ್ಕಲಿಗ ಸಮುದಾಯದ ತಾಲೂಕು ಅಧ್ಯಕ್ಷ ಸುರೇಂದ್ರ ಡಿ.ಗೌಡ, ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಗಂಗಾಧರ್, ಈರೇಗೌಡ, ಕೆ.ಪಿ.ಬಸವೇಗೌಡ, ನಾರಾಯಣಗೌಡ, ನರಸಿಂಹೇಗೌಡ, ರಾಜೇಂದ್ರ, ಕೃಷ್ಣೇಗೌಡ, ಚಲುವರಾಜು, ಸತೀಶ್ ಗೌಡ, ಸೋಮೇಶ್, ಶಂಭೇಗೌಡ, ಹರೀಶ್ ಗೌಡ, ಯೋಗನರಸಿಂಹೇಗೌಡ, ರಾಮೇಗೌಡ, ಹೊ.ಕೆ.ಮಹೇಂದ್ರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net