

ಕಲಬುರಗಿ: ಜಯದೇವ ಆಸ್ಪತ್ರೆಯೂ ಗುಣಮಟ್ಟದ ಚಿಕಿತ್ಸೆಗೆ ವಿಶ್ವಪ್ರಸಿದ್ಧವಾಗಿತ್ತು. ಕರ್ನಾಟಕವಷ್ಟೇ ಅಲ್ಲ ಬೇರೆ ರಾಜ್ಯ, ದೇಶದಿಂದಲೂ ರೋಗಿಗಳು ಬಂದು ಚಿಕಿತ್ಸೆ ಪಡೆಯುತ್ತಿದ್ದರು. ಇಂತಹ ಗೌರವಯುತ ಆಸ್ಪತ್ರೆಯಲ್ಲಿ ನೀರು ಪೂರೈಸದೆ ಘನತೆಗೆ ಧಕ್ಕೆ ತಂದಿದ್ದಾರೆ. ಮೂರು ದಿನ ನೀರಿಲ್ಲವೆಂದು ವೈದ್ಯರೇ ಹೇಳುತ್ತಿದ್ದಾರೆ. ಪರ್ಯಾಯ ವ್ಯವಸ್ಥೆ ಮಾಡಿದ್ದರೆ ೨೦ ಲಕ್ಷ ರೂ. ಖರ್ಚಿನಲ್ಲಿ ನೀರು ನೀಡಬಹುದಿತ್ತು. ಸರ್ಕಾರ ದಿವಾಳಿ ಆಗಿದ್ದು, ನೀರಿಗೂ ಖರ್ಚು ಮಾಡಲು ಹಣ ಇಲ್ಲದಂತೆ ಮಾಡಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ವಾಗ್ದಾಳಿ ನಡೆಸಿದರು.
ನಗರದಲ್ಲಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿ, ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಮೂರು ದಿನದಿಂದ ನೀರಿಲ್ಲ ಎಂಬ ಬಗ್ಗೆ ಯಾರನ್ನೂ ವಿಚಾರಿಸಿದರೂ ಮತ್ತೊಬ್ಬರ ಮೇಲೆ ಹಾಕುತ್ತಿದ್ದಾರೆ. ವೈದ್ಯರು ಪಾಲಿಕೆ, ಪಾಲಿಕೆಯವರು ಎಲ್ ಆ್ಯಂಡ್ ಟಿ ಕಂಪನಿ ಮೇಲೆ ಆರೋಪಿಸುತ್ತಿದ್ದಾರೆ. ಜವಾಬ್ದಾರಿ ತೆಗೆದುಕೊಳ್ಳದೆ ಬಡ ರೋಗಿಗಳ ಜತೆ ಚೆಲ್ಲಾಟ ಆಡುತ್ತಿದ್ದಾರೆ. ಮಹಾನಗರ ಪಾಲಿಕೆ ಆಯುಕ್ತರು ಜವಾಬ್ದಾರಿ ಹೊರಬೇಕು. ಈ ಬಗ್ಗೆ ತನಿಖೆ ನಡೆಸುವಂತೆ ಸರ್ಕಾರಕ್ಕೆ, ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯುತ್ತೇನೆ ಎಂದು ಹೇಳಿದರು.
ರಾಜ್ಯದ ಮರ್ಯಾದೆ ಹೋಗ್ತಿದೆ
ಕರ್ನಾಟಕ ದೇಶದಲ್ಲೇ ಉತ್ತಮ ಹೆಸರು ಮಾಡಿದೆ. ತಂತ್ರಜ್ಞಾನ ಮಂಗಳ, ಚಂದ್ರ ಗ್ರಹಕ್ಕೆ ಹೋಗುತ್ತಿದೆ. ಆದರೆ ರಾಜ್ಯದ ಆಸ್ಪತ್ರೆಯಲ್ಲಿ ನೀರು ನೀಡುವುದು ಸಾಧ್ಯವಾಗುತ್ತಿಲ್ಲ ಎಂದು ಆರ್.ಅಶೋಕ ಕಿಡಿ ಕಾರಿದರು. ಕೇರಳ ಸರ್ಕಾರ `ಕರ್ನಾಟಕದಲ್ಲಿ ನೀರಿಲ್ಲ ಕೇರಳಕ್ಕೆ ಎಂದು ಐಟಿ ಕಂಪನಿಗಳಿಗೆ ಪತ್ರ ಬರೆದಿದೆ. ಹೀಗೆ ಮುಂದುವರಿದರೆ ದೇಶದಲ್ಲಿ ರಾಜ್ಯದ ಮರ್ಯಾದೆ ಹೋಗಲಿದೆ ಎಂದು ಹೇಳಿದರು.