ವಿಶ್ವದಲ್ಲೇ ಶ್ರೇಷ್ಠ ಸಂವಿಧಾನ ನೀಡಿದ ಅಂಬೇಡ್ಕರ್

14rajesh11
Published on

ಚಾಮರಾಜನಗರ: ದೇಶದಲ್ಲಿ ಶೂದ್ರರಿಗೆ ಅಕ್ಷರ ಕಲಿಯುವುದಕ್ಕೆ ನಿರ್ಬಂಧ ಏರಿದ್ದ ಕಾಲಘಟ್ಟದಲ್ಲಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ಜಗತ್ತೇ ಮೆಚ್ಚುವಂತಹ ಶಿಕ್ಷಣವನ್ನು ಪಡೆದುಕೊಂಡು ವಿಶ್ವದಲ್ಲೇ ಶ್ರೇಷ್ಠ ಸಂವಿಧಾನವನ್ನು ನೀಡಿದರು ಎಂದು ಸಂಸದ ಸುನೀಲ್ ಹೇಳಿದರು.

ನಗರದ ಪೇಟೆ ಪ್ರೈಮರಿ ಶಾಲೆ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಭಾರತರತ್ನ, ಸಂವಿಧಾನ ಶಿಲ್ಪಿ, ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ 134 ನೇ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಜಗತ್ತಿನ 134 ದೇಶಗಳಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿಯನ್ನು ಆಚರಣೆ ಮಾಡಲಾಗುತ್ತಿದೆ. ಅವರಲ್ಲಿ ಇದ್ದಂತಹ ಜ್ಞಾನವನ್ನು ವಿಶ್ವಸಂಸ್ಥೆ ಗೌರವಿಸಿ, ಅವರ ದಿನಾಚರಣೆಯನ್ನು ಜ್ಞಾನದ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ. ಅಂತಹ ಮಹಾನ್ ನಾಯಕರ ಆದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಂಡು ಸಾಗಬೇಕಾಗಿದೆ ಎಂದರು.

ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ರಚನೆಯ ಮೂಲಕ ಪ್ರತಿಯೊಬ್ಬ ಭಾರತೀಯರಿಗೂ ಹಕ್ಕು-ಅಧಿಕಾರಗಳನ್ನು ದೊರಕಿಸಿಕೊಟ್ಟರು. ಸಂವಿಧಾನ ಉಳಿದರೇ ಮಾತ್ರ ದೇಶ ಉಳಿಯುತ್ತದೆ ಎಂಬುದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ. ಅವರು ಒಂದು ಜಾತಿಗಾಗಿ ಮೀಸಲಾತಿಯನ್ನು ನೀಡಲಿಲ್ಲ. ಆದರೇ ಅವರನ್ನು ಒಂದು ಜಾತಿಗೆ ಸೀಮಿತ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಭೋಗಾಪುರ ಸರ್ಕಾರಿ ಪ್ರಥಮ ದರ್ಜೆ ವಸತಿ ಕಾಲೇಜಿನ ಡಾ.ಪಿ.ದೇವರಾಜ್ ಮಾತನಾಡಿ, ಈ ದೇಶದ ಪ್ರತಿಯೊಬ್ಬ ಜನತೆಯ ಶ್ರೇಯೋಭಿವೃದ್ಧಿಗಾಗಿ ಬಾ.ಬಿ.ಆರ್.ಅಂಬೇಡ್ಕರ್ ಅವರು ತಮ್ಮ ಜೀವನವನ್ನೇ ಮುಡಿಪಾಗಿಟ್ಟರು. ಈ ದೇಶದ ಶೋಷಿತ ಸಮುದಾಯಗಳಿಗೆ ಮತದಾನ, ಶಿಕ್ಷಣ ಹಾಗೂ ಮೀಸಲಾತಿಯನ್ನು ದೊರಕಿಸಿಕೊಡಲು ಹೋರಾಟ ಮಾಡಿದರು. ಅವರು ಬದುಕಿನುದ್ದಕ್ಕೂ ಉಳಿಸಿಕೊಂಡ ನೈತಿಕ ಮೌಲ್ಯಗಳನ್ನು ಇಂದಿನ ಜನಸಮುದಾಯ ಅಳವಡಿಸಿಕೊಂಡು ಸಾಗಬೇಕಾಗಿದೆ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಟಿ.ನರಸೀಪುರ ಬುದ್ಧ ವಿಹಾರದ ಬೋಧಿ ರತ್ನ ಭಂತೇಜಿ ಸಾನಿಧ್ಯ ವಹಿಸಿದ್ದರು. ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಎಚ್.ವಿ.ಚಂದ್ರು, ನಗರಸಭಾ ಸದಸ್ಯೆ ಕಲಾವತಿ ರವಿಕುಮಾರ್, ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ, ಅಪರ ಜಿಲ್ಲಾಧಿಕಾರಿ ಗೀತಾ ಹುಡೇದ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮುನಿರಾಜ್, ನಗರಸಭೆ ಪೌರಾಯುಕ್ತ ರಾಮದಾಸ್ ಹಾಗೂ ಇತರರು ಉಪಸ್ಥಿತರಿದ್ದರು.

ಮೆರವಣಿಗೆ ನಡುವೆ ಪ್ರತಿಭಟನೆ:

ಡಾ.ಬಿ.ಆರ್.ಅಂಬೇಡ್ಕರ್ ಭವನದ ಮುಂಭಾಗ ಭಾವಚಿತ್ರ ಮೆರವಣಿಗೆಗೆ ಶಾಸಕ ಪುಟ್ಟರಂಗಶೆಟ್ಟಿ ಚಾಲನೆ ನೀಡಿದರು. ಬಳಿಕ ಅಲ್ಲಿಂದ ಹೊರಟು ಸತ್ತಿ ರಸ್ತೆ, ಸುಲ್ತಾನ್ ಷರೀಫ್ ವೃತ್ತ, ಗುಂಡ್ಲುಪೇಟೆ ವೃತ್ತ, ದೊಡ್ಡಂಗಡಿ, ಚಿಕ್ಕಂಗಡಿ ಬೀದಿ ಮೂಲಕ ಸಾಗಿ ಸಂತೇಮರಹಳ್ಳಿ ವೃತ್ತದ ಬಳಿ ಬಂದಾಗ ಮೆರವಣಿಗೆಯಲ್ಲಿ ಕಲಾತಂಡಗಳು ಸಂಪೂರ್ಣವಾಗಿ ಭಾಗಿಯಾಗಿಲ್ಲ ಎಂದು ಸಮುದಾಯದ ಮುಖಂಡರು ಕೆಲಕಾಲ ಪ್ರತಿಭಟನೆ ನಡೆಸಿದರು. ಬಳಿಕ ಸಂಸದ ಸುನೀಲ್ ಬೋಸ್, ಅಧಿಕಾರಿಗಳು ಹಾಗೂ ಸಮುದಾಯದ ಕೆಲ ಮುಖಂಡರು ಯುವಕರ ಮನವೊಲಿಸಿ ಮೆರವಣಿಗೆ ಮುಂದುವರಿಯಲು ಅವಕಾಶ ಮಾಡಿಕೊಟ್ಟರು. ವೇದಿಕೆಯಲ್ಲಿ ಮೆರವಣಿಗೆ ತಡವಾದ ಹಾಗೂ ಗೊಂದಲ ಉಂಟಾದ ಕುರಿತು ಸಂಸದ ಸುನೀಲ್ ಬೋಸ್ ಬೇಸರ ಹೊರಹಾಕಿದರು.

ಬದನಗುಪ್ಪೆಯಲ್ಲಿ ಗಲಾಟೆ:

ತಾಲೂಕಿನ ಬದನಗುಪ್ಪೆ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲು ಅವಕಾಶ ಮಾಡಿಕೊಡುವುದಿಲ್ಲ ಎಂಬ ಕಾರಣಕ್ಕೆ ಎರಡು ಸಮುದಾಯಗಳ ನಡುವೆ ಕೆಲಕಾಲ ಮಾತಿನ ಚಕಾಮಕಿ ನಡೆದಿತ್ತು. ಈ ವಿಚಾರವನ್ನು ಸಮುದಾಯದ ಮುಖಂಡರೊಬ್ಬರು ಕಾರ್ಯಕ್ರಮದಲ್ಲಿ ಪ್ರಸ್ತಾಪ ಮಾಡಿದರು. ಅಂಬೇಡ್ಕರ್ ಅವರ ಋಣದಲ್ಲೇ ಬದುಕುವವರು ಅವರ ಭಾವಚಿತ್ರ ಹಾಕಲು ವಿರೋಧ ಮಾಡುತ್ತಿರುವುದು ಅತ್ಯಂತ ಖಂಡನೀಯ ಎಂದು ಶಾಸಕ ಪುಟ್ಟರಂಗಶೆಟ್ಟಿ ಅವರು ಭಾಷಣದ ವೇಳೆಯಲ್ಲಿ ಪ್ರಸ್ತಾಪಿಸಿದರು.

ಡಾ.ಬಿ.ಆರ್.ಅಂಬೇಡ್ಕರ್ ಅವರು ಬುದ್ಧ, ಕಬೀರ ಮತ್ತು ಜ್ಯೋತಿಬಾ ಪುಲೆ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡಿದ್ದರು. ಅವರ ಅಪಾರವಾದ ಜ್ಞಾನದಿಂದ ದೇಶಕ್ಕೆ ಶ್ರೇಷ್ಠವಾದ ಸಂವಿಧಾನವನ್ನು ನೀಡಿದರು. ಅವರ ತತ್ವ-ಚಿಂತನೆಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕಿದೆ.

-ಸಿ.ಪುಟ್ಟರಂಗಶೆಟ್ಟಿ, ಶಾಸಕ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net