ವಿಶ್ವದಲ್ಲಿ ಆರೋಗ್ಯಕ್ಕಿಂತ ದೊಡ್ಡ ಸಂಪತ್ತಿಲ್ಲ

Gruha Arogya
Published on

ಚಿತ್ರದುರ್ಗ: ಒತ್ತಡದ ಜೀವನ ಶೈಲಿಯಿಂದಾಗಿ ನೂರಾರು ಕಾಯಿಲೆಗಳು ನಿತ್ಯ ಮಾನವರನ್ನು ಕಾಡುತ್ತಿವೆ. ಆದ್ದರಿಂದ ವಿಶ್ವದಲ್ಲೇ ಶ್ರೇಷ್ಠ ಸಂಪತ್ತಾಗಿರುವ ಆರೋಗ್ಯಕ್ಕಿಂತ ದೊಡ್ಡದು ಯಾವುದೂ ಇಲ್ಲ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಹೇಳಿದರು.

ಗೃಹ ಆರೋಗ್ಯ ಯೋಜನೆ ಸಂಬಂಧ ಜಿಪಂ ಸಭಾಂಗಣದಲ್ಲಿ ಸೋಮವಾರ ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಕೇಂದ್ರದ ಸಹಾಯಕಿಯರಿಗಾಗಿ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.

ಜನರ ಆರೋಗ್ಯ ಕಾಪಾಡುವುದು ಸರ್ಕಾರದ ಜವಾಬ್ದಾರಿ. ಹೀಗಾಗಿ ರಾಜ್ಯಾದ್ಯಂತ ಯೋಜನೆ ಜಾರಿಗೊಳಿಸಿದ್ದು, ಮನೆ-ಮನೆಗೆ ತೆರಳಿ ರೋಗಗಳನ್ನು ಪ್ರಾಥಮಿಕ ಹಂತದಲ್ಲೇ ಗುರುತಿಸಿ, ಶೀಘ್ರ ಚಿಕಿತ್ಸೆ ಕೊಡಿಸಿ, ಗುಣಪಡಿಸುವಲ್ಲಿ ಆಶಾ ಕಾರ್ಯಕರ್ತೆಯರು ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದರು.

ಪ್ರಾಥಮಿಕ ಹಂತದಲ್ಲಿ ಗುರುತಿಸದೆ, ಮಾರಣಾಂತಿಕವಾದ ಬಳಿಕ ಚಿಕಿತ್ಸೆಗೆ ಪರದಾಡುವವರನ್ನು ಗಮನಿಸಿದ್ದೇವೆ. ಇದರಿಂದ ಪಾರುಮಾಡುವ ಸಲುವಾಗಿ ಸರ್ಕಾರ ಕಳೆದ ವರ್ಷ ಪ್ರಾಯೋಗಿಕವಾಗಿ 5 ರೋಗಗಳನ್ನು ಪತ್ತೆಹಚ್ಚಲು ಕೋಲಾರ ಜಿಲ್ಲೆಯಲ್ಲಿ ಯೋಜನೆ ಜಾರಿಗೊಳಿಸಿತ್ತು. ಅಲ್ಲಿ ಯಶಸ್ವಿಯಾದ್ದರಿಂದ, ರಾಜ್ಯಕ್ಕೆ ಇದನ್ನು ವಿಸ್ತರಿಸಿದ್ದು, ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ್ ಸೇರಿ 14 ಬಗೆಯ ರೋಗ ಪತ್ತೆಗೆ ಒತ್ತು ನೀಡಲಾಗಿದೆ ಎಂದು ತಿಳಿಸಿದರು.

ಎಂಎಲ್ಸಿ ಕೆ.ಎಸ್. ನವೀನ್ ಮಾತನಾಡಿ, ಕಾಯಿಲೆಗಳು ಸುಪ್ತವಾಗಿದ್ದು, ಜೀವಕ್ಕೆ ಕಂಟಕವಾಗುವ ಅನೇಕ ನಿದರ್ಶನಗಳಿವೆ. ಗ್ರಾಮಗಳಲ್ಲಿ ಆರೋಗ್ಯ ಸೇವೆ, ತಪಾಸಣೆ, ಚಿಕಿತ್ಸೆ ಪಡೆಯುವ ಕುರಿತು ಅರಿವಿನ ಕೊರತೆ ಇದೆ. ಆದರೆ, ಗೃಹ ಆರೋಗ್ಯ ಯೋಜನೆ ಜಾರಿಯಿಂದಾಗಿ ಜಾಗೃತಿ ಮೂಡುವ ವಿಶ್ವಾಸವಿದೆ ಎಂದರು.

ಯೋಜನೆ ಕೇವಲ ಸಾಂಕೇತಿಕ, ದಾಖಲೆಗಾಗಿ ಮಾತ್ರ ಸೀಮಿತವಾಗದೆ, ರಾಜ್ಯದ ಲಕ್ಷಾಂತರ ಮಂದಿಯ ಜೀವ ಉಳಿಸುವ ಕಾರ್ಯವಾಗಲಿ. ಇದರ ಶ್ರೇಯಸ್ಸು ಸರ್ಕಾರ, ಆಶಾ ಕಾರ್ಯಕರ್ತೆಯರಿಗೆ ಸಲ್ಲಲಿ. ಆ ನಿಟ್ಟಿನಲ್ಲಿ ವೈದ್ಯರು ಅಗತ್ಯ ತರಬೇತಿ ನೀಡಿ ಎಂದು ಸಲಹೆ ನೀಡಿದರು.

ರಕ್ತದೊತ್ತಡ ಹಲವರನ್ನು ಕಾಡುತ್ತಿದೆ: ರಾಜ್ಯದ ಶೇ. 25ರಷ್ಟು ಜನರಲ್ಲಿ ರಕ್ತದೊತ್ತಡ, ಶೇ. 14ರಷ್ಟು ಮಂದಿಯಲ್ಲಿ ಮಧುಮೇಹ ಇರುವುದು ಅಂಕಿ-ಅಂಶಗಳಿಂದ ತಿಳಿದು ಬಂದಿದೆ ಎಂದು ಡಿಎಚ್‌ಒ ಡಾ. ರೇಣುಪ್ರಸಾದ್ ಮಾಹಿತಿ ನೀಡಿದರು.

30 ವರ್ಷಕ್ಕೂ ಮೇಲ್ಪಟ್ಟವರಲ್ಲಿ ಅಧಿಕ ರಕ್ತದೊತ್ತಡ, ಮಧುಮೇಹ, ಅದಕ್ಕೆ ಸಂಬಂಧಿಸಿದ ಪಾದದ ಸಮಸ್ಯೆ, ನೇತ್ರ, ಮೂತ್ರಪಿಂಡ, ಲಿವರ್, ಯಕೃತ್, ಶ್ವಾಸಕೋಶ, ನಿದ್ರೆಯಲ್ಲಿ ಉಸಿರುಗಟ್ಟುವಿಕೆ. ಬಾಯಿ, ಸ್ತನ, ಗರ್ಭಕಂಠದ ಕ್ಯಾನ್ಸರ್, ರಕ್ತಹೀನತೆ, ಮಾನಸಿಕ, ನರವೈಜ್ಞಾನಿಕ ಸೇರಿ ಒಟ್ಟು 14 ಬಗೆಯ ರೋಗಗಳನ್ನು ಪತ್ತೆಹಚ್ಚುವ ಕಾರ್ಯ ಯೋಜನೆಯಿಂದ ಆಗಲಿದೆ. ಜಿಲ್ಲೆಯಲ್ಲಿ 30 ವರ್ಷ ಮೇಲ್ಪಟ್ಟ ಸುಮಾರು 6.59 ಲಕ್ಷ ಮಂದಿಯ ಆರೋಗ್ಯ ತಪಾಸಣೆ ಮಾಡುವ ಗುರಿ ಹೊಂದಲಾಗಿದೆ ಎಂದು ವಿವರಿಸಿದರು.

ಕೂಡಾ ಅಧ್ಯಕ್ಷ ಎಂ.ಕೆ. ತಾಜ್‌ಪೀರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಆರ್. ಶಿವಣ್ಣ, ಉಪಾಧ್ಯಕ್ಷ ಡಿ.ಎನ್. ಮೈಲಾರಪ್ಪ, ಜಿಪಂ ಸಿಇಒ ಡಾ.ಎಸ್. ಆಕಾಶ್, ಉಪಕಾರ್ಯದರ್ಶಿ ರಂಗಸ್ವಾಮಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಕಂಬಾಳಿಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net