ವಿಶ್ವದ ಗಮನ ಸೆಳೆದ ಭಾರತದ ಆಯುರ್ವೇದ

CTD ADC-DNVANTRI
Published on

ಚಿತ್ರದುರ್ಗ: ಜಗತ್ತಿನ ವೈದ್ಯ ಪದ್ಧತಿಗೆ ಭಾರತ ನೀಡಿದ ಆಯುರ್ವೇದ ಮಹತ್ವ ಪಡೆದಿದೆ. ಇದರತ್ತ ಇಡೀ ವಿಶ್ವವೇ ತಿರುಗಿ ನೋಡುತ್ತಿದೆ ಎಂದು ಎಡಿಸಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.

ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆಯುಷ್ ಇಲಾಖೆಯಿಂದ ಮಂಗಳವಾರ ನಗರಸಭೆಯಲ್ಲಿ ಧನ್ವಂತರಿ ಜಯಂತಿ ಅಂಗವಾಗಿ ಆಯೋಜಿಸಿದ್ದ 9ನೇ ಆಯುರ್ವೇದ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಭಾರತ ತನ್ನದೇ ಆದ ಭವ್ಯ ಇತಿಹಾಸ, ಪರಂಪರೆ ಹೊಂದಿದ ದೇಶ. ವಿಜ್ಞಾನ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಚರಕ, ಧನ್ವಂತರಿ ಮೊದಲಾದ ಶುಶ್ರೂಷಾ ಪರಂಪರೆಯನ್ನು ಜಗತ್ತಿಗೆ ಪರಿಚಯಿಸಿದೆ ಎಂದರು.

ಮೊದಲೆಲ್ಲ ಆಹಾರ ಪದ್ಧತಿ, ಸಂಸ್ಕಾರ, ಸಂಸ್ಕೃತಿ, ಹವ್ಯಾಸ, ಅಭ್ಯಾಸಗಳೆಲ್ಲವೂ ಆರೋಗ್ಯಕ್ಕೆ ಪೂರಕವಾಗಿದ್ದವು. ಆದರೆ ಇಂದು ಅವೆಲ್ಲ ವೂ ಬದಲಾಗಿ ಆರೋಗ್ಯಕ್ಕೆ ಸಂಚಕಾರ ತರುತ್ತಿವೆ. ಉತ್ತಮ ಹವ್ಯಾಸಗಳಿಂದ ಆರೋಗ್ಯವಾಗಿರಬಹುದು. ಪ್ರತಿ ಮನೆಯಲ್ಲೂ ಔಷಧೀಯ ಸಸ್ಯಗಳನ್ನು ಬೆಳೆಸಿ ಆಯುರ್ವೇದ ಪದ್ಧತಿಯನ್ನು ರೂಢಿಸಿಕೊಳ್ಳ ಬೇಕು ಎಂದು ಹೇಳಿದರು.

ಅಮೃತ ಆಯುರ್ವೇದಿಕ್ ಕಾಲೇಜು ಪ್ರಾಚಾರ್ಯ ಡಾ.ಪ್ರಶಾಂತ್ ಮಾತನಾಡಿ, ನಮ್ಮ ಪರಂಪರೆ ಸಂಸ್ಕೃತಿ, ಸಂಸ್ಕಾರ, ಆಹಾರ, ಹಳ್ಳಿ ಮರೆತು ಪಾಶ್ಚಿಮಾತ್ಯ ಸಂಸ್ಕೃತಿ ಕಡೆಗೆ ಮಾರು ಹೋಗುತ್ತಿದ್ದೇವೆ. ಗ್ರಾಮೀಣ ಪ್ರದೇಶಗಳಲ್ಲಿ ಆಯುರ್ವೇದ ಪಾಲನೆಯಾಗುತ್ತಿದೆ ಎಂದರು.

ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ನಗರದ ಜೋಗಿಮಟ್ಟಿ ರಸ್ತೆ ಟೀಚರ್ಸ್ ಕಾಲನಿಯ ದ್ವಿಪಥ ರಸ್ತೆಗೆ ದೇವವೈದ್ಯ ಧನ್ವಂತರಿ ಹೆಸರಿಡು ವುದಾಗಿ ನಗರಸಭೆ ಅಧ್ಯಕ್ಷೆ ಬಿ.ಎನ್‌ಸುಮಿತಾ ರಾಘವೇಂದ್ರ ಹೇಳಿದರು.

ಉಪಾಧ್ಯಕ್ಷೆ ಶ್ರೀದೇವಿ ಚಕ್ರವರ್ತಿ, ಆಯುಕ್ತೆ ಎಂ.ರೇಣುಕಾ, ಸ್ಥಾಯಿ ಸಮಿತಿ ಅಧ್ಯಕ್ಷ ನಸರುಲ್ಲಾ, ಕುಡಾ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಸಮಿತಿ ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ, ಡಾ.ಚಂದ್ರಕಾಂತ್ ನಾಗಸಮುದ್ರ ಮತ್ತಿತರ ಆಯುಷ್ ಇಲಾಖೆ ವೈದ್ಯಾಧಿಕಾರಿಗಳು ಇದ್ದರು. ಪೌರಕಾರ್ಮಿಕರು ಹಾಗೂ ಅವರ ಕುಟುಂಬದವರಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು. ಆಯುರ್ವೇದ ಇಲಾಖೆಯಿಂದ ಕರಪತ್ರ ಬಿಡುಗಡೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net