ವಿಶ್ವದ ಉದ್ದದ ರೈಲ್ವೆ ಪ್ಲಾಟ್​ಫಾಮ್ರ್ ಹುಬ್ಬಳ್ಳಿಯಲ್ಲಿ

h4-Railway Work 1
Published on


ಹುಬ್ಬಳ್ಳಿ: ನೈಋತ್ಯ ರೈಲ್ವೆ ವಲಯದ ಕೇಂದ್ರ ಸ್ಥಾನವಾಗಿರುವ ಹುಬ್ಬಳ್ಳಿಯಲ್ಲಿ ಇನ್ನು ಕೆಲವೇ ತಿಂಗಳಲ್ಲಿ ವಿಶ್ವದಲ್ಲಿಯೇ ಅತಿ ಉದ್ದವಾದ ಪ್ಲಾಟ್​ಫಾಮ್ರ್ ನಿರ್ವಣಗೊಳ್ಳಲಿದೆ.

ಹುಬ್ಬಳ್ಳಿ ರೈಲು ನಿಲ್ದಾಣದ ಮೊದಲ ಪ್ಲಾಟ್​ಫಾಮ್ರ್ ಸದ್ಯ 550 ಮೀಟರ್ ಉದ್ದ ಇದ್ದು, ಇದನ್ನು 1,400 ಮೀ. ಉದ್ದ ಹಾಗೂ 10 ಮೀ. ಅಗಲ ಮಾಡಲಾಗುತ್ತಿದೆ.

ಪ್ಲಾಟ್​ಫಾಮ್ರ್ ವಿಸ್ತರಣೆ ಹಾಗೂ ಹೆಚ್ಚುವರಿ ಪ್ಲಾಟ್​ಫಾಮರ್್​ಗಳ ನಿರ್ಮಾಣ ಕಾಮಗಾರಿ ಈಗಾಗಲೇ ಹುಬ್ಬಳ್ಳಿ ರೈಲು ನಿಲ್ದಾಣದ ಹೊರ ವಲಯದ ಮಂಟೂರ ರಸ್ತೆಯಲ್ಲಿ ಪ್ರಾರಂಭಗೊಂಡಿದೆ. ಕಳೆದ ನವೆಂಬರ್​ನಲ್ಲಿ ಪ್ರಾರಂಭಗೊಂಡಿರುವ ಈ ಕಾಮಗಾರಿ 1 ವರ್ಷದಲ್ಲಿ ಪೂರ್ಣಗೊಳ್ಳಬೇಕಿತ್ತು. ಆದರೆ, ಲಾಕ್​ಡೌನ್​ನಿಂದಾಗಿ ವಿಳಂಬವಾಗಿದ್ದು, ಡಿಸೆಂಬರ್ ಅಥವಾ 2021ರ ಆರಂಭದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಈ ಮೊದಲು ಈಶಾನ್ಯ ರೈಲ್ವೆ ವಲಯ ವ್ಯಾಪ್ತಿಯ ಉತ್ತರ ಪ್ರದೇಶದ ಗೋರಖಪುರದ ರೈಲು ನಿಲ್ದಾಣದಲ್ಲಿರುವ 1,366.33 ಮೀ. ಉದ್ದದ ರೈಲ್ವೆ ಪ್ಲಾಟ್​ಫಾಮರ್್​ಗೆ ವಿಶ್ವದ ಅತಿ ಉದ್ದದ ಪ್ಲಾಟ್​ಫಾಮ್ರ್ ಎಂಬ ಕೀರ್ತಿ ಇತ್ತು.

ಕೇರಳದ ಕೊಲ್ಲಮ್ ಜಂಕ್ಷನ್​ನಲ್ಲಿರುವ 1,180.5 ಮೀ. ಹಾಗೂ ಪಶ್ಚಿಮ ಬಂಗಾಳದ ಖರ್ಗಾಪುರ ರೈಲು ನಿಲ್ದಾಣದ 1,072 ಮೀ. ಉದ್ದದ ಪ್ಲಾರ್ಟ್​ಫಾಮ್ರ್ ವಿಶ್ವದ ಮೊದಲ ಹಾಗೂ ದ್ವಿತೀಯ ಅತಿ ಉದ್ದದ ಪ್ಲಾಟ್​ಫಾಮ್ರ್ ಆಗಿವೆ. ಇದೀಗ ಹುಬ್ಬಳ್ಳಿಯಲ್ಲಿ ನಿರ್ವಣಗೊಳ್ಳುತ್ತಿರುವ ಪ್ಲಾಟ್​ಫಾಮ್ರ್ ಹಳೆಯ ದಾಖಲೆಗಳನ್ನು ಅಳಿಸಿ ಹಾಕಲಿದೆ.

ಸುಮಾರು 90 ಕೋಟಿ ರೂ. ವೆಚ್ಚದಲ್ಲಿ ಹುಬ್ಬಳ್ಳಿಯಲ್ಲಿ ಪ್ಲಾಟ್​ಫಾಮ್ರ್ ವಿಸ್ತರಣೆ ಹಾಗೂ ಇತರ ಕಾಮಗಾರಿಗಳನ್ನು ನೈಋತ್ಯ ರೈಲ್ವೆ ವಲಯ ಪ್ರಾರಂಭಿಸಿದೆ. ಸದ್ಯ ಇಲ್ಲಿ 5 ಪ್ಲಾಟ್​ಫಾಮರ್್​ಗಳಿದ್ದು, ಇನ್ನೂ 3ರ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ. ಹುಬ್ಬಳ್ಳಿ-ಬೆಂಗಳೂರು ದ್ವಿಪಥ ರೈಲು ಮಾರ್ಗ ನಿರ್ಮಾಣ ಯೋಜನೆಯಡಿ ಹೆಚ್ಚುವರಿಯಾಗಿ ಇವನ್ನು ನಿರ್ವಿುಸಲಾಗುತ್ತಿದೆ. ಇದಕ್ಕಾಗಿ ಈಗಿರುವ ಕ್ಯಾಬಿನ್ ಕಟ್ಟಡ ಸ್ಥಳಾಂತರಿಸುವ ಯೋಜನೆಯೂ ಇದೆ.

ಮೂರನೇ ಪ್ರವೇಶ ದ್ವಾರ ನಿರ್ವಣ: ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಈಗಾಗಲೇ 2 ಪ್ರವೇಶ ದ್ವಾರಗಳಿವೆ. ಕಳೆದ ವರ್ಷವಷ್ಟೇ 2ನೇ ಪ್ರವೇಶ ದ್ವಾರವನ್ನು ಗದಗ ರಸ್ತೆಯಲ್ಲಿ ಕಾರ್ಯಾರಂಭ ಮಾಡಲಾಯಿತು. ಇದೀಗ ನಿಲ್ದಾಣದ ಮುಂಭಾಗ ಹಾಗೂ ಗದಗ ರಸ್ತೆ ಸಂಧಿಸುವ ಸ್ಥಳದಲ್ಲಿ 3ನೇ ಪ್ರವೇಶ ದ್ವಾರವನ್ನು 12 ಕೋಟಿ ರೂ. ವೆಚ್ಚದಲ್ಲಿ ನಿರ್ವಿುಸಲಾಗುತ್ತದೆ.

ಪ್ಲಾಟ್​ಫಾಮ್ರ್ ವಿಸ್ತರಣೆ ಕಾಮಗಾರಿ ಕಳೆದ ನವೆಂಬರ್​ನಲ್ಲಿ ಪ್ರಾರಂಭಗೊಂಡಿದೆ. 1 ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ, ಲಾಕ್​ಡೌನ್​ನಿಂದಾಗಿ ವಿಳಂಬವಾಗಿದ್ದು, ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಯತ್ನಿಸಲಾಗುವುದು.| ಇ. ವಿಜಯಾ ನೈಋತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net