

ಹಾಸನ: ವಿಶ್ವದ ಇತರೆ ರಾಷ್ಟ್ರಗಳಿಕ್ಕಿಂತ ನಮ್ಮ ದೇಶದ ಸಂವಿಧಾನ ಶ್ರೇಷ್ಠವಾಗಿದ್ದು, ಪ್ರತಿಯೊಬ್ಬರು ನಮ್ಮ ಸಂವಿಧಾನವನ್ನು ಓದಬೇಕು ಎಂದು ಕಾಲೇಜು ಶಿಕ್ಷಣ ಇಲಾಖೆಯ ನಿವೃತ್ತ ಪ್ರಾಧ್ಯಾಪಕ ಸಿ.ಎಸ್. ಶಿವೇಗೌಡ ಹೇಳಿದರು.
ನಗರದ ಆರ್.ಸಿ. ರಸ್ತೆಯ ಗಂಧದ ಕೋಠಿ ಆವರಣದಲ್ಲಿರುವ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಅರಿಸ್ಟಾಟಲ್ ವೇದಿಕೆ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಭಾರತದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯುವ ಸಮುದಾಯ ನಮ್ಮ ಸಂವಿಧಾನಾದ ರಚನೆಯಿಂದ ಅದನ್ನು ರಚಿಸದ ಬಗೆಯ ಕುರಿತು ಅರಿಯಬೇಕು. ಇದಲ್ಲದೇ ಸಂವಿಧಾನವನ್ನು ಓದುವ ಮೂಲಕ ಅದನ್ನು ಗೌರವಿಸುವ ಕೆಲಸ ಮಾಡಬೇಕು ಎಂದರು.
ಕಾಲೇಜು ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತರಾಗದೆ, ದೇಶಕ್ಕಾಗಿ ದುಡಿದ ಮಹಾನೀಯರ ಬಗ್ಗೆ ತಿಳಿದುಕೊಳ್ಳಬೇಕು. ಸಂವಿಧಾನದಿಂದ ಇಂದು ನಾವು ಅನೇಕ ಸೌಲಭ್ಯಗಳನ್ನು ಸವಲತ್ತುಗಳನ್ನು ಪಡೆದುಕೊಂಡಿದ್ದೇವೆ. ಸಂವಿಧನಾತ್ಮಕವಾಗಿ ನಮಗೆ ದೊರೆತ್ತಿರುವ ಸವಲತ್ತುಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಎಲ್ಲಾ ಗ್ರಾಂಥಾಲಯಗಳಲ್ಲಿ ಸಂವಿಧಾನದ ಪುಸ್ತಕಗಳು ಇರಬೇಕು, ಆ ಮೂಲಕ ಸಂವಿಧಾನವನ್ನು ಎಲ್ಲರೂ ಓದುವಂತಾಗಬೇಕು. ಪಠ್ಯದೊಂದಿಗೆ ಇತರೆ ಪುಸ್ತಕಗಳನ್ನು ಓದುವ ಮೂಲಕ ಯುವ ಸಮುದಾಯ ಶೈಕ್ಷಣಿಕವಾಗಿ ಪ್ರಬುದ್ಧರಾಗುವ ಮೂಲಕ ತಮ್ಮ ಪೋಷಕರಿಗೆ ಒಳ್ಳೆಯ ಹೆಸರು ತಂದುಕೊಡಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಿ.ಕೆ. ಮಂಜಯ್ಯ ಮಾತನಾಡಿ, ನಾವೆಲ್ಲರೂ ಒಂದೇ ಎಂಬುವುದನ್ನು ಸಂವಿಧಾನ ಸಾರಿದೆ. ಸಮಾಜದಲ್ಲಿ ಯಾರು ದೊಡ್ಡವರಲ್ಲ, ಎಲ್ಲರೂ ಸಮಾನರು ಎಂಬ ಅಂಶವನ್ನು ನಮ್ಮ ಸಂವಿಧಾನ ಹೇಳಿದೆ. ನಮ್ಮ ಸಂವಿಧಾನದಲ್ಲಿರುವ ಅಂಶಗಳನ್ನು ದೇಶದ ಪ್ರತಿಯೊಬ್ಬರು ಚಾಚು ತಪ್ಪದೆ ಪಾಲನೆ ಮಾಡಿದರೆ ಅತ್ಯುತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಲಿದೆ. ಯುವ ಸಮುದಾಯ ಸಂವಿಧಾನದಲ್ಲಿರುವ ಹಲವು ಕಾಯ್ದೆಗಳನ್ನು ತಿಳಿದುಕೊಳ್ಳಬೇಕು. ಪ್ರತಿಯೊಬ್ಬರು ನಮಗೆ ಸಂವಿಧಾನ ನೀಡಿರುವ ಕಾನೂನಾತ್ಮಕ ಸೌಲಭ್ಯಗಳನ್ನು ತಿಳಿದುಕೊಂಡರೆ ಸಮಾಜದಲ್ಲಿ ಉನ್ನತ ವ್ಯಕ್ತಿಗಳಾಗಿ ಬೆಳೆಯಲು ಸಹಕಾರಿಯಾಗಲಿದೆ. ಡಾ.ಬಿ.ಆರ್. ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನ ದೇಶದ ಪ್ರತಿಯೊಬ್ಬರಿಗೆ ಅನ್ವಯಿಸುತ್ತದೆ, ಹಾಗಾಗಿ ಎಲ್ಲರೂ ಇದರ ಬಗ್ಗೆ ತಿಳಿದುಕೊಂಡು ಇತರರಿಗೆ ನಮ್ಮ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಹಾಗೂ ಸಹ ಪ್ರಾಧ್ಯಾಪಕಿ ಜಿ.ಸುನೀತಾ, ಸಹ ಪ್ರಾಧ್ಯಾಪಕ ಜಿ.ಆರ್. ಮೋಹನ್ ಕುಮಾರ್, ಪಿ. ನಂದನ್, ಉಪನ್ಯಾಸಕ ಸಿ. ಶಿವಪ್ಪ ಹಾಗೂ ಇತರರು ಇದ್ದರು.