ವಿಶ್ವಕ್ಕೆ ಶ್ರೇಷ್ಠ ಭಾರತೀಯ ಸಂಸ್ಕೃತಿ: ತಾರಾ ಎಸ್. ಸ್ವಾಮಿ ಅಭಿಮತ

04_HSN_02
Published on

ಹಾಸನ: ಎಲ್ಲ ಧರ್ಮದ ಮೂಲತತ್ವಗಳು ಹೇಳುವುದೊಂದೆ, ಅದು ಪ್ರತಿಯೊಬ್ಬರೂ ಪ್ರೀತಿ, ಕರುಣೆ, ಶಾಂತಿ ಮತ್ತು ಮಾನವೀಯತೆಯ ಗುಣಗಳನ್ನು ಹೊಂದಿರಬೇಕು. ಎಲ್ಲರೂ ಸೌಹಾರ್ದತೆಯಿಂದ, ಸಹಬಾಳ್ವೆಯಿಂದ ಬಾಳಬೇಕು ಎಂದು ವಿಜಯ ಶಾಲೆಯ ಸಂಸ್ಥಾಪಕ ನಿರ್ದೇಶಕರಾದ ತಾರಾ ಎಸ್. ಸ್ವಾಮಿ ಅವರು ಹೇಳಿದರು.

ವಿಜಯ ಶಾಲೆಯಲ್ಲಿ ಈಚೆಗೆ ಯುಗಾದಿ ಹಾಗೂ ರಂಜಾನ್ ಹಬ್ಬವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ವೇಳೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಹಿಂದಿನ ಕಾಲದಲ್ಲಿ ಯಾವುದೇ ಧರ್ಮಭೇದವಿಲ್ಲದೆ ಎಲ್ಲ ಧರ್ಮದವರು ಒಟ್ಟಾಗಿ ಹಬ್ಬಗಳನ್ನು ಆಚರಿಸುತ್ತಿದ್ದರು. ಇಂತಹ ಭಾರತೀಯ ಸಂಸ್ಕೃತಿಯನ್ನು ನಾವೆಲ್ಲರೂ ಉಳಿಸಬೇಕು ಮತ್ತು ಪ್ರತಿ ತಲೆಮಾರಿನ ಮಕ್ಕಳಲ್ಲೂ ಬೆಳೆಸಬೇಕು ಎಂದರು.

ಪೋಷಕರಲ್ಲೊಬ್ಬರಾದ ಸ್ವಾಮಿನಾಥ್ ಅವರು ಮಾತನಾಡಿ, ಒಗ್ಗಟ್ಟಿನಲ್ಲಿ ಬಲವಿದೆ, ಭಾರತೀಯ ಸಂಸ್ಕೃತಿಗೆ ವಿವಿಧತೆಯಲ್ಲಿ ಏಕತೆಯೇ ಹೊಂದಿದೆ ಎಂದು ಹೇಳುತ್ತಾ ಕೂಡಿ ಬಾಳುವುದರ ಮಹತ್ವವನ್ನು ತಿಳಿಸಿದರು.

ಮತ್ತೊಬ್ಬ ಪೋಷಕರಾದ ರಿಯಾಜ್ ಅಹಮ್ಮದ್ ಅವರು ಮಾತನಾಡುತ್ತಾ, ರಾಮ ರಹೀಮ ಇಬ್ಬರೂ ಒಂದೇ ಎಂದು ಹೇಳುವ ಮೂಲಕ ರಾಷ್ಟ್ರೀಯ ಭಾವೈಕ್ಯತೆಯ ಬಗ್ಗೆ ತಿಳಿಸಿದರು.

ಶಾಲೆಯ ವಿದ್ಯಾರ್ಥಿಗಳೇ ಕಾರ್ಯಕ್ರಮದ ನಿರೂಪಣೆ ನಿರ್ವಹಿಸುವುದರೊಂದಿಗೆ ’ನಮ್ಮ ಹಬ್ಬಗಳಲ್ಲಿ ವಿಜ್ಞಾನ’ ಕುರಿತಾದ ರಸಪ್ರಶ್ನೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಶಾಲೆಯ ಶೈಕ್ಷಣಿಕ ಮುಖ್ಯಸ್ಥರಾದ ಎಸ್. ಶ್ರೀಲಕ್ಷ್ಮೀ, ಪ್ರಾಂಶುಪಾಲ ಕೆ.ಎಸ್.ನಂದೀಶ, ಪೋಷಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net